Advertisement

ಕೊಹ್ಲಿ ಬಂದ್ರೂ ಆರ್‌ಸಿಬಿ ಗೆಲ್ಲಲಿಲ್ಲ

12:30 PM Apr 15, 2017 | |

ಬೆಂಗಳೂರು: ಸ್ಯಾಮ್ಯುಯೆಲ್‌ ಬದ್ರಿ ಪಡೆದ ಹ್ಯಾಟ್ರಿಕ್‌ ವಿಕೆಟ್‌ ನೆರವಿನಿಂದ ಆರಂಭದಲ್ಲಿ 7 ರನ್‌ಗೆ 4 ವಿಕೆಟ್‌ ಪಡೆದು ಭಾರೀ ಗೆಲುವಿನ ಭರವಸೆ ಮೂಡಿಸಿದ್ದ ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ಅಂತಿಮವಾಗಿ 4 ವಿಕೆಟ್‌ ಸೋಲನುಭವಿಸಿದೆ.

Advertisement

ಮುಂಬೈ ವಿರುದ್ಧದ ಈ ಸೋಲಿಗೆ ಆರ್‌ಸಿಬಿಯ ದುರ್ಬಲ ಬೌಲಿಂಗ್‌ ಕಾರಣವಾಯಿತು. ಇದೇ ಮೊದಲ ಬಾರಿಗೆ ಕೊಹ್ಲಿ ಕಣಕ್ಕಿಳಿದು ಉತ್ತಮ ಬ್ಯಾಟಿಂಗ್‌ ಮಾಡಿದರೂ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವುದು ಎಲ್ಲರ ನಿರಾಸೆಗೆ ಕಾರಣವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಕೊಹ್ಲಿ ಅರ್ಧಶತಕದ ಹೊರತಾಗಿಯೂ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 142 ರನ್‌ ಬಾರಿಸಿತು. ಗುರಿ ಬೆನ್ನುಹತ್ತಿದ ಮುಂಬೈ ಇಂಡಿಯನ್ಸ್‌ 18.5 ಓವರ್‌ಗಳಲ್ಲಿ 6 ವಿಕೆಟ್‌ಗೆ 145 ರನ್‌ ಗಳಿಸಿತು.

ಆರ್‌ಸಿಬಿ ನೀಡಿದ ಸುಲಭ ಗುರಿ ಬೆನ್ನತ್ತಿ ಹೋದ ಮುಂಬೈಗೆ ಬದ್ರಿ ಮತ್ತು ಸ್ಟುವರ್ಟ್‌ ಬಿನ್ನಿ ಆರಂಭದಲ್ಲಿ ಭರ್ಜರಿ ಆಘಾತ ನೀಡಿದರು. ಮುಂಬೈ ಮೊತ್ತ 1 ರನ್‌ ಆಗುತ್ತಿದ್ದಂತೆ ಜೋಸ್‌ ಬಟ್ಲರ್‌ ಬಿನ್ನಿ ಎಸೆತದಲ್ಲಿ ಗೇಲ್‌ ಗೆ ಕ್ಯಾಚ್‌ ನೀಡಿದರು. ನಂತರ ಮೂರನೇ ಓವರ್‌ ಎಸೆದ ಬದ್ರಿ 2.2ನೇ ಎಸೆತದಲ್ಲಿ ಪಾರ್ಥಿವ್‌ ಪಟೇಲ್‌, 2.3ನೇ ಎಸೆತದಲ್ಲಿ ಮಿಚೆಲ್‌ ಮೆಕ್ಲೆನಗನ್‌, 2.4ನೇ ಎಸೆತದಲ್ಲಿ ರೋಹಿತ್‌ ಶರ್ಮಾ ವಿಕೆಟ್‌ ಪಡೆದರು. ಈ ಹಂತದಲ್ಲಿ ಮಂಬೈ 7ರನ್‌ಗೆ 4 ವಿಕೆಟ್‌ ಕಳೆದುಕೊಂಡಿತ್ತು. ಹೀಗಾಗಿ ಆರ್‌ಸಿಬಿ ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ತಂಡದ ಮೊತ್ತ 33 ಆಗುತ್ತಿದ್ದಂತೆ ಫಾರ್ಮ್ ನಲ್ಲಿರುವ ಮತ್ತೂಬ್ಬ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ ಕೂಡ ಪೆವಿಲಿಯನ್‌ ಸೇರಿದರು. ಆದರೆ 6ನೇ ವಿಕೆಟ್‌ಗೆ ಜೊತೆಯಾದ ಕೈರನ್‌ ಪೊಲಾರ್ಡ್‌ ಮತ್ತು ಕೃಣಾಲ್‌ ಪಾಂಡ್ಯ ಪಂದ್ಯದ ಗತಿಯನ್ನೇ ಬದಲಿಸಿ ಆರ್‌ಸಿಬಿ ಸೋಲಿಗೆ ಕಾರಣರಾದರು.

ಮೊದಲ ಪಂದ್ಯದಲ್ಲೇ ಕೊಹ್ಲಿ ಅರ್ಧಶತಕ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡಕ್ಕೆ ಈ ಬಾರಿಯ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದ ಕೊಹ್ಲಿ ಆಸರೆಯಾದರು. ಭುಜದ ಗಾಯದಿಂದ ಕಳೆದ ಮೂರು ಪಂದ್ಯದಲ್ಲಿ ಹೊರಗುಳಿದಿದ್ದ ಕೊಹ್ಲಿ ಅಂತೂ ಮುಂಬೈ ವಿರುದ್ಧ ಮೈದಾನಕ್ಕಿಳಿದರು. ಕ್ರಿಸ್‌ ಗೇಲ್‌ ಜತೆ ಇನಿಂಗ್ಸ್‌ ಆರಂಭಿಸಿದ ಕೊಹ್ಲಿ ಮೊದಲ ವಿಕೆಟ್‌ಗೆ 63 ರನ್‌ ಸೇರಿಸಿದರು. ಉತ್ತಮ ಲಯದಲ್ಲಿದ್ದ ನಾಯಕ ಕೊಹ್ಲಿ 62 ರನ್‌ ಬಾರಿಸಿ ಮೆಕ್ಲೆನಗನ್‌ ಬೌಲಿಂಗ್‌ನಲ್ಲಿ ಬಟ್ಲರ್‌ ಗೆ ಕ್ಯಾಚ್‌ ನೀಡಿದರು. 47 ಎಸೆತ ಎದುರಿಸಿದ ಕೊಹ್ಲಿ ಆಟದಲ್ಲಿ 5 ಬೌಂಡರಿ, 2 ಸಿಕ್ಸರ್‌ ಸೇರಿತ್ತು. ಆದರ ಗೇಲ್‌ (22), ಡಿವಿಲಿಯರ್ (19), ಕೇದಾರ್‌ ಜಾಧವ್‌ (9) ಅಲ್ಪ ಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಮುಳುವಾಯಿತು. 

Advertisement

ಪಂದ್ಯದ ತಿರುವು
ಆರ್‌ಸಿಬಿ ಗೆಲುವು ಕಸಿದ
ಪೊಲಾರ್ಡ್‌, ಕೃಣಾಲ್‌

ಗೆಲುವಿನ ಉತ್ಸಾಹದಲ್ಲಿದ್ದ ಆರ್‌ಸಿಬಿಗೆ ಆರನೇ ವಿಕೆಟ್‌ಗೆ ಜತೆಯಾದ ಮುಂಬೈನ ಕೈರನ್‌ ಪೊಲಾರ್ಡ್‌ ಮತ್ತು ಕೃಣಾಲ್‌ ಪಾಂಡ್ಯ ತಣ್ಣೀರೆರಚಿದರು. ಮೊದಲು ತಾಳ್ಮೆಯ ಆಟ ಪ್ರದರ್ಶಿಸಿದ ಈ ಜೋಡಿ ನಿಧಾನಕ್ಕೆ ಓವರ್‌ಗಳುರುಳುತ್ತಿದ್ದಂತೆ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 47 ಎಸೆತ ಎದುರಿಸಿದ ಪೊಲಾರ್ಡ್‌ 70 ರನ್‌ ಬಾರಿಸಿ ಚಹಲ್‌ ಬೌಲಿಂಗ್‌ನಲ್ಲಿ ಎಬಿ ಡಿವಿಲಿಯರ್ಗೆ ಕ್ಯಾಚ್‌ ನೀಡಿದರು. ಅವರ ಆಟದಲ್ಲಿ 3 ಬೌಂಡರಿ, 5 ಭರ್ಜರಿ ಸಿಕ್ಸರ್‌ ಸೇರಿತ್ತು. ಆದರೆ ಪೊಲಾರ್ಡ್‌ ವಿಕೆಟ್‌ ಕಳೆದುಕೊಳ್ಳುವಾಗ ಮುಂಬೈ ಮೊತ್ತ 126 ಕ್ಕೇರಿತ್ತು. ಹೀಗಾಗಿ ಈ ಹಂತದಲ್ಲಿಯೇ ಪಂದ್ಯ ಮುಂಬೈಯತ್ತ ವಾಲಿತ್ತು

4 ಪಂದ್ಯದಲ್ಲಿ ಆರ್‌ಸಿಬಿಗೆ 3ನೇ ಸೋಲು
ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಈವರೆಗೆ ನಾಲ್ಕು ಪಂದ್ಯವಾಡಿದ್ದ ಆರ್‌ಸಿಬಿ ಕೇವಲ 1 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ತವರಿನಲ್ಲಿ ನಡೆದ ಡೆಲ್ಲಿ ಡೇರ್‌ ಡೆವಿಲ್ಸ್‌ ವಿರುದ್ಧ ಜಯಸಾಧಿಸಿದರೆ, ಹೈದರಾಬಾದ್‌, ಪಂಜಾಬ್‌, ಮುಂಬೈ ವಿರುದ್ಧ ಸೋಲುಂಡಿದೆ. ಮುಂಬೈ ವಿರುದ್ಧ ನಡೆದ ಪಂದ್ಯ ಆರ್‌ಸಿಬಿಗೆ ತವರಿನಲ್ಲಿ 2ನೇ ಪಂದ್ಯವಾಗಿತ್ತು.

ಐಪಿಎಲ್‌ನ 16ನೇ ಹ್ಯಾಟ್ರಿಕ್‌ ಪಡೆದ ಸ್ಯಾಮ್ಯುಯೆಲ್‌ ಬದ್ರಿ
ಐಪಿಎಲ್‌ ಇತಿಹಾಸದಲ್ಲಿ ಒಟ್ಟು 16 ಬಾರಿ ಹ್ಯಾಟ್ರಿಕ್‌ ವಿಕೆಟ್‌ ಬಿದ್ದಿದೆ. ಮೊದಲ ಬಾರಿ ಹ್ಯಾಟ್ರಿಕ್‌ ಪಡೆದಿದ್ದು ಕೆಕೆಆರ್‌ ತಂಡದ ಲಕ್ಷ್ಮೀಪತಿ ಬಾಲಾಜಿ, 2008ರಲ್ಲಿ ಅವರು ಈ ಸಾಧನೆ ಮಾಡಿದರು. ಅಮಿತ್‌ ಮಿಶ್ರಾ 3 ಬಾರಿ ಹ್ಯಾಟ್ರಿಕ್‌ ಪಡೆಯುವ ಮೂಲಕ ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್‌ ಪಡೆದವರಾಗಿದ್ದಾರೆ. ಯುವರಾಜ್‌ ಸಿಂಗ್‌ 2 ಬಾರಿ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆ ಶುಕ್ರವಾರ ಬದ್ರಿ ಪಡೆದ ಹ್ಯಾಟ್ರಿಕ್‌ ವಿಕೆಟ್‌ ಐಪಿಎಲ್‌ ಇತಿಹಾಸದ 16ನೇ ಹ್ಯಾಟ್ರಿಕ್‌ ಸಾಧನೆಯಾಗಿದೆ. 

ಸ್ಕೋರ್‌ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು

ಕ್ರಿಸ್‌ ಗೇಲ್‌    ಸಿ ಪಟೇಲ್‌ ಬಿ ಎಚ್‌.ಪಾಂಡ್ಯ    22
ವಿರಾಟ್‌ ಕೊಹ್ಲಿ    ಸಿ ಬಟ್ಲರ್‌ ಬಿ ಮೆಕ್ಲೆನಗನ್‌    62
ಎಬಿ ಡಿ ವಿಲಿಯರ್    ಸಿ ರೋಹಿತ್‌ ಬಿ ಕೆ.ಪಾಂಡ್ಯ    19
ಕೇದಾರ್‌ ಜಾಧವ್‌    ರನೌಟ್‌    9
ಪವನ್‌ ನೇಗಿ    ಔಟಾಗದೆ    13
ಮನ್‌ದೀಪ್‌ ಸಿಂಗ್‌    ಬಿ ಮೆಕ್ಲೆನಗನ್‌    0
ಸ್ಟುವರ್ಟ್‌ ಬಿನ್ನಿ    ಔಟಾಗದೆ    6
ಇತರ        11
ಒಟ್ಟು  (20 ಓವರ್‌ಗಳಲ್ಲಿ 5 ವಿಕೆಟಿಗೆ)        142
ವಿಕೆಟ್‌ ಪತನ: 1-63, 2-110, 3-115, 4-127, 5-127.
ಬೌಲಿಂಗ್‌:
ಟಿಮ್‌ ಸೌಥಿ        2-0-23-0
ಹರ್ಭಜನ್‌ ಸಿಂಗ್‌        4-0-23-0
ಮಿಚೆಲ್‌ ಮೆಕ್ಲೆನಗನ್‌        4-0-20-2
ಜಸ್‌ಪ್ರೀತ್‌ ಬುಮ್ರಾ        4-0-39-0
ಹಾರ್ದಿಕ್‌ ಪಾಂಡ್ಯ        2-0-9-1
ಕೃಣಾಲ್‌ ಪಾಂಡ್ಯ        4-0-21-1

ಮುಂಬೈ ಇಂಡಿಯನ್ಸ್‌
ಪಾರ್ಥಿವ್‌ ಪಟೇಲ್‌    ಸಿ ಗೇಲ್‌ ಬಿ ಬದ್ರಿ    3
ಜಾಸ್‌ ಬಟ್ಲರ್‌    ಸಿ ಗೇಲ್‌ ಬಿ ಬಿನ್ನಿ    2
ರೋಹಿತ್‌ ಶರ್ಮ    ಬಿ ಬದ್ರಿ    0
ಮಿಚೆಲ್‌ ಮೆಕ್ಲೆನಗನ್‌    ಸಿ ಮನ್‌ದೀಪ್‌ ಬಿ ಬದ್ರಿ    0
ನಿತೀಶ್‌ ರಾಣ    ಸಿ ಅರವಿಂದ್‌ ಬಿ ಬದ್ರಿ    11
ಕೈರನ್‌ ಪೊಲಾರ್ಡ್‌    ಸಿ ಡಿ ವಿಲಿಯರ್ ಬಿ ಚಾಹಲ್‌    70
ಕೃಣಾಲ್‌ ಪಾಂಡ್ಯ    ಔಟಾಗದೆ    37
ಹಾರ್ದಿಕ್‌ ಪಾಂಡ್ಯ    ಔಟಾಗದೆ    9
ಇತರ        13
ಒಟ್ಟು  (18.5 ಓವರ್‌ಗಳಲ್ಲಿ 6 ವಿಕೆಟಿಗೆ)        145
ವಿಕೆಟ್‌ ಪತನ: 1-7, 2-7, 3-7, 4-7, 5-33, 6-126.
ಬೌಲಿಂಗ್‌:
ಸಾಮ್ಯುಯೆಲ್‌ ಬದ್ರಿ        4-1-9-4
ಸ್ಟುವರ್ಟ್‌ ಬಿನ್ನಿ        2-0-14-1
ಎಸ್‌. ಅರವಿಂದ್‌        4-0-21-0
ಟೈಮಲ್‌ ಮಿಲ್ಸ್‌        3.5-0-36-0
ಯಜುವೇಂದ್ರ ಚಾಹಲ್‌        3-0-31-1
ಪವನ್‌ ನೇಗಿ        2-0-28-0

ಪಂದ್ಯಶ್ರೇಷ್ಠ: ಕೈರನ್‌ ಪೊಲಾರ್ಡ್‌

– ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next