ಮಾಗಡಿ: ಮಹಾರಾಷ್ಟ್ರದ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಕರ್ನಾಟಕದ ಆಕ್ರಮಿತ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆಂದು ಉದ್ಧಟತನ ಹೇಳಿಕೆಯನ್ನು ಕೊಟ್ಟಿದ್ದು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಕರ್ನಾಟಕದ ಒಂದು ಇಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಖಂಡ ಭಾರತ ಹಿಂದೂ ಮಹಾ ಸಭಾ ಸಂಸ್ಥಾಪ ಅಧ್ಯಕ್ಷ ಎಸ್.ಕೆ.ಸಾಮ್ರಾಟ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೆ ಮಹಾ ರಾಷ್ಟ್ರ ದವರು ಕನ್ನಡಿಗರನ್ನು ಕೆಣಕುತ್ತಾ ಬಂದಿದ್ದಾರೆ, ಕನ್ನಡ ರಾಜ್ಯೋತ್ಸವ ದಿನದಂದು ಮರಾಠಿಗರು ಕರಾಳ ದಿನವನ್ನು ಆಚರಿಸುತ್ತಾರೆ. ಈಗ ಮಹಾರಾಷ್ಟ್ರದ ಮುಖ್ಯಮಂತ್ರಿ ತಮ್ಮ
ಟ್ವಿಟ್ಟರ್ ಖಾತೆಯಲ್ಲಿ ಮರಾಠ ಹುತಾತ್ಮ ದಿನದ ಹಿನ್ನೆಲೆಯಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡನೆ ವೇಳೆ ಕರ್ನಾಟಕಕ್ಕೆ
ಸೇರ್ಪಡೆಯಾಗಿರುವ ಪ್ರದೇಶಗಳನ್ನು ಮರಳಿ ಪಡೆಯುವುದೇ ಮರಾಠ ಹುತಾತ್ಮರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು
ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಮುಂದೆ ಆನ್‌ಲೈನ್, ದೂರ ಶಿಕ್ಷಣಕ್ಕೆ ಭಾರೀ ಬೇಡಿಕೆ : ಡಿಸಿಎಂ
ಇದರ ಜೊತೆಗೆ ಬಹು ಸಂಖ್ಯೆಯಲ್ಲಿ ಮರಾಠಿ ಭಾಷೆಯನ್ನು ಮಾತನಾಡುವ ಹಾಗೂ ಮರಾಠಿ ಸಂಸ್ಕೃತಿಯನ್ನು ಒಳಗೊಂಡಿರುವ ಕೆಲವು ಪ್ರದೇಶಗಳನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ, ಇದು ಗಡಿ ವಿವಾದಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ ಎಂದು ಟ್ವಿಟ್ ಮಾಡಿದ್ದು ಇದು ಕನ್ನಡಿಗರನ್ನು ಕೆರಳಿಸುವ ಸಂದೇಶವಾಗಿದ್ದು ಯಾವುದೇ ಕಾರಣಕ್ಕೂ ಕನ್ನಡಿಗರು ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಜಯಾಮಾನದವರಲ್ಲ, ಪ್ರಾಣ ಕೊಟ್ಟದರೂ ಕೂಡ ಭಾಷೆ ನೆಲದ ಪರವಾಗಿ ನಿಲ್ಲುತ್ತೇವೆ.
ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಶ್ನೆಯೇ ಬರುವುದಿಲ್ಲ, ಕೂಡಲೇ ರಾಜ್ಯ ಸರ್ಕಾರ ಕೂಡಲೇ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಸಂದೇಶ ಕೊಡಬೇಕು, ಕನ್ನಡಿಗರ ಪರವಾಗಿ ನಿಲ್ಲಬೇಕೆಂದು
ಸಾಮ್ರಾಟ್ ಗೌಡ ಮನವಿ ಮಾಡಿದರು.