ಸುಳ್ಯ: ಮುಂಬೈಯಿಂದ ಕೊಡಗಿಗೆ ಆಗಮಿಸಿದ್ದ ಮಹಿಳೆಗೆ ಕೋವಿಡ್ ಸೋಂಕು ಪಾಸಿಟಿವ್ ಪತ್ತೆಯಾದ ಕಾರಣ ಇಲ್ಲಿನ ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ 30 ಮಂದಿಯನ್ನು ಕ್ವಾರೆಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.
ವಾಣಿಜ್ಯ ನಗರಿಯಿಂದ ಮಂಗಳೂರು ಮೂಲಕ ಆಗಮಿಸಿದ್ದ ಕೊಡಗಿನ ಮಹಿಳೆಗೆ ನಿನ್ನೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು.
ಆ ಮಹಿಳೆಯ ಟ್ರಾವೆಲ್ ಹಿಸ್ಟರಿ ಆಧರಿಸಿ ಕೊಡಗು ಸಂಪಾಜೆ ಗೇಟ್ ನಲ್ಲಿ ಕರ್ತವ್ಯದಲ್ಲಿದ್ದ 30 ಸಿಬ್ಬಂದಿಗಳಿಗೆ ಕ್ವಾರಂಟೇನ್ ನಲ್ಲಿರುವಂತೆ ಸೂಚಿಸಲಾಗಿದೆ.
ಈ ಮಹಿಳೆ ಪ್ರಯಾಣಿಸಿದ್ದ ಕಾರು ಮುಂಬೈಯಿಂದ ಮಂಗಳೂರಿಗೆ ಬಂದು ಅಲ್ಲಿಂದ ಬಳಿಕ ಮಡಿಕೇರಿಗೆ ಹೋಗುವ ವೇಳೆ ಕೊಡಗು ಸಂಪಾಜೆ ಗೇಟ್ ನಲ್ಲಿ ಇವರನ್ನು ತಪಾಸಣೆಗೊಳಪಡಿಸಿ ಬಳಿಕ ನೇರವಾಗಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಕ್ವಾರೆಂಟೈನ್ ಗೆ ಒಳಗಾಗಲು ಸೂಚಿಸಿದ 30 ಜನರಲ್ಲಿ ಸಂಪಾಜೆ ಗೇಟ್ ನಲ್ಲಿ ಕಾರ್ಯಾಚರಿಸುತ್ತಿದ್ದ ಕೊಡಗು ಸಂಪಾಜೆ ಕಂದಾಯ ನಿರೀಕ್ಷಕ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳು, ಪೊಲೀಸರು ಸೇರಿದ್ದಾರೆ.