Advertisement

ರಸ್ತೆ ಪರವಾಗಿಲ್ಲ ; ಗುಡ್ಡೆಗಳದ್ದೇ ಆತಂಕ

06:00 AM Jun 14, 2018 | |

ಸುಳ್ಯ: ಚಾರ್ಮಾಡಿ ಘಾಟಿ ಗುಡ್ಡ ಕುಸಿದು ಸಂಚಾರ ನಿರ್ಬಂಧದ ಬೆನ್ನಲ್ಲೇ, ಬದಲಿ ಮಾರ್ಗಗಳಲ್ಲಿ ಒಂದಾದ ಮಂಗಳೂರು- ಸಂಪಾಜೆ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೊಂಚ ಒತ್ತಡ ಹೆಚ್ಚಾಗಿದೆ. ಒಂದೆಡೆ ಹೆಚ್ಚಿದ ವಾಹನಗಳ ಓಡಾಟ ಹಾಗೂ ಕೊಡಗಿನ ಸುತ್ತ ಸುರಿಯುತ್ತಿರುವ ಧಾರಾಕಾರ ಮಳೆ ಈ ರಸ್ತೆಯ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳನ್ನು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಡಿಕೇರಿಯಿಂದ ಸುಳ್ಯದವರೆಗೆ ಪ್ರಯಾಣಿಸಿದ ಉದಯವಾಣಿ, ಕೊಂಚ ಎಚ್ಚರಿಕೆಯಿಂದ ಚಲಿಸುವುದು ಸೂಕ್ತ. ಇಲ್ಲಿಯೂ ಕೆಲವು ಅಪಾಯಕಾರಿ ಎನಿಸುವ ಸ್ಥಳಗಳಿದ್ದು, ರಸ್ತೆಗೆ ತಾಗಿರುವ ಆಳೆತ್ತರದ ಗುಡ್ಡೆಗಳು ತತ್‌ಕ್ಷಣ ಬೀಳುತ್ತವೆ ಅನ್ನುವಂತಿದೆ. 

Advertisement

ಅಪಾಯಕ್ಕೆ ಆಹ್ವಾನ
ಸಂಪಾಜೆ-ಮಡಿಕೇರಿ ರಸ್ತೆ ಏರು- ಇಳಿಮುಖ, ತಿರುವು ರಸ್ತೆಯಾಗಿದೆ. ಇಲ್ಲಿ, ಹಲವು ಕಡೆಗಳಲ್ಲಿ ಧರೆಯ ಮಣ್ಣಿನ ಪದರ ಶಿಥಿಲಗೊಂಡು ಬೃಹತ್‌ ಗಾತ್ರದ ಮರಗಳು ರಸ್ತೆ ಕಡೆ ವಾಲಿವೆ. ಅದನ್ನು ತೆರವುಗೊಳಿಸದೇ ಇದ್ದಲ್ಲಿ, ಚಾರ್ಮಾಡಿ ಘಾಟಿ ಸ್ಥಿತಿ ಇಲ್ಲಿಗೂ ಬಂದೊದಗುವ ಸಾಧ್ಯತೆ ಹೆಚ್ಚಿದೆ.

ಗುಡ್ಡ ಕುಸಿತದ ಭೀತಿ
ಜೋಡುಪಾಲ ಬಳಿಯ ತಿರುವೊಂದರ ಗುಡ್ಡದಲ್ಲಿ ಬೃಹತ್‌ ಗಾತ್ರದ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಅಬ್ಬಿ ಕೊಲ್ಲಿ ಜಲಪಾತದಿಂದ ಅರ್ಧ ಕಿ.ಮೀ ದೂರದಲ್ಲಿ ಗುಡ್ಡ ಆಪಾಯದ ಸ್ಥಿತಿಯಲ್ಲಿದೆ. ಮಡಿಕೇರಿ ಪೇಟೆಗೆ ಕೆಲ ಕಿ.ಮೀ. ಸನಿಹದಲ್ಲಿರುವ ಮದೆನಾಡು ಬಳಿ ಪ್ರತಿ ಬಾರಿ ಗುಡ್ಡ ಕುಸಿತ ಆಗುತ್ತಿದ್ದು, ಅಲ್ಲಿ ತಿರುವೊಂದರ ಬಳಿ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ಅದೂ ಬಿರುಕು ಬಿಟ್ಟಿದೆ. 

ಬೃಹತ್‌ ಹೊಂಡಗಳು
ಸಂಪಾಜೆ ಗ್ರಾ.ಪಂ. ಸುಸ್ವಾಗತದ ಫಲಕ ಇರುವಲ್ಲಿ ರಸ್ತೆಯಲ್ಲಿ ಬೃಹತ್‌ ಹೊಂಡಗಳಿವೆ. ಇದರಿಂದ ವಾಹನ ಗಳು ಸಂಚರಿಸಲು ಪರದಾಡುತ್ತಿವೆ. ಆರು ವರ್ಷದ ಹಿಂದೆಯಷ್ಟೇ ಹೊಸ ರಸ್ತೆ ನಿರ್ಮಿಸಿದ್ದರೂ ಬಹುಭಾಗದಲ್ಲಿ ಡಾಮರು ಬಿರುಕು ಬಿಟ್ಟಿದೆ. 

ಇಕ್ಕೆಲೆಗಳಲ್ಲಿ  ಚರಂಡಿ ಇಲ್ಲ
ಮಡಿಕೇರಿಯಿಂದ ಸಂಪಾಜೆ ಕಡೆಗೆ ರಸ್ತೆ ಇಳಿಮುಖದಂತಿದೆ. ಹಾಗಾಗಿ ಸೂಕ್ತ ಚರಂಡಿ ಇಲ್ಲದ ಕಾರಣ, ಮಳೆ ನೀರು ರಸ್ತೆಯಲ್ಲಿ ಕೆಳಭಾಗಕ್ಕೆ ಹರಿ ಯುತ್ತಿದೆ. ಬೃಹತ್‌ ಗಾತ್ರದ ಬಂಡೆ ಕಲ್ಲುಗಳು ರಸ್ತೆ ಸನಿಹದಲ್ಲೇ ಇದ್ದು, ತೆರವುಗೊಳಿಸಿಲ್ಲ. ಇಕ್ಕೆಲೆಗಳಲ್ಲಿ ಕೆಸರು ತುಂಬಿದೆ. ಇಂತಹ ಸ್ಥಿತಿ ಹತ್ತಕ್ಕಿಂತ ಮೇಲ್ಪಟ್ಟ ತಿರುವುಗಳಲ್ಲಿ ಕಾಣ ಸಿಗುತ್ತದೆ. ಅಪಾಯಕಾರಿ ತಿರುವುಗಳ ಬಳಿ ಸೂಕ್ತ ಫಲಕದ ಕೊರತೆ ಇದೆ ಎನ್ನುತ್ತಾರೆ ಸಮೀಪದ ರಸ್ತೆ ಬದಿಯ ವ್ಯಾಪಾರಿ ರಮೇಶ್‌.

Advertisement

ತಡೆ ಗೋಡೆ ಇಲ್ಲ ಸಂಪಾಜೆಯಿಂದ ಮಡಿಕೇರಿ ತನಕದ 25 ಕಿ.ಮೀ. ರಸ್ತೆಗೆ ಎಲ್ಲೂ  ತಡೆಗೋಡೆ ಇಲ್ಲ. ಮದೆನಾಡಿನ ಬಳಿ ಹಲವು ಬಾರಿ ಗುಡ್ಡ ಕುಸಿತ ಸಂಭವಿಸಿದೆ. ಇಷ್ಟಾದರೂ ತಡೆಗೋಡೆ ನಿರ್ಮಿಸುವ ಅಥವಾ ಮರ ತೆರವುಗೊಳಿಸಿ, ರಸ್ತೆ ಅಗಲಗೊಳಿ ಸುವ ಕಾರ್ಯ ಆಗಿಲ್ಲ ಎನ್ನುತ್ತಾರೆ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನ ಚಾಲಕ ಮಹಂತೇಶ್‌.

ಐದು ವರ್ಷಗಳ ಹಿಂದೆ ಕುಸಿತ
ನಿರಂತರ ಮಳೆಯಿಂದ ಅಂತರ್ಜಲ ಹೆಚ್ಚಾಗಿ ಮಣ್ಣು ಸಡಿಲಗೊಂಡು 2013 ರ ಆಗಸ್ಟ್‌ನಲ್ಲಿ ಮಡಿಕೇರಿ-ಸಂಪಾಜೆ ರಸ್ತೆಯ ಕೊಯನಾಡಿನಲ್ಲಿ 200 ಮೀಟರ್‌ನಷ್ಟು ರಸ್ತೆ ಭೂ ಕುಸಿತಗೊಂಡಿತ್ತು. ರಸ್ತೆ 5 ಅಡಿ ಆಳಕ್ಕೆ ಕುಸಿದಿತ್ತು. 

ರಾಜ್ಯ ಹೆದ್ಧಾರಿ ಮೇಲ್ದರ್ಜೆಗೆ
ಮಾಣಿಯಿಂದ-ಮೈಸೂರು ತನಕದ 212 ಕಿ.ಮೀ. ರಾಜ್ಯ ಹೆದ್ಧಾರಿ 88 ಅನ್ನು ವಿಸ್ತರಿಸಿ, ಮೂರು ಹಂತದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. 2009 ರಲ್ಲಿ ಕಾಮಗಾರಿ ಪ್ರಾರಂಭಗೊಂಡು 2015 ಕ್ಕೆ ಪೂರ್ಣ ರಸ್ತೆ ನಿರ್ಮಾಣವಾಗಿತ್ತು. ಎರಡನೆ ಹಂತದ ಕುಶಾಲನಗರ -ಸಂಪಾಜೆ ರಸ್ತೆ 2012 ರಲ್ಲಿ ಪೂರ್ಣಗೊಂಡು, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಸೇರ್ಪಡೆಗೊಂಡಿತ್ತು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next