Advertisement

ಒಳ್ಳೇದು, ಕೆಟ್ಟದು ಎರಡ್ರಾಗೂ ಪಾಲಿರ್ತೈತಿ!

06:00 AM Sep 11, 2018 | Team Udayavani |

ಹುಲಿ ಸರ್‌! 
ಹುಲಿ ಅಂದ್ರೆ ಹುಲೀನೇ ಅವರು. ನಾನು ಅವರೆದುರು ಒಂದೇ ಒಂದು ಸಲ ಜೋರಾಗಿ ಹಲ್ಲು ಬಿಟ್ಟು ನಕ್ಕಿದ್ದು ಮತ್ತು ಅವರಿಂದ ಒಂದೇ ಒಂದು ಸಲ ಪೆಟ್ಟು ತಿಂದಿದ್ದು.

Advertisement

ಹುಲಿ ಸರ್‌ ಪಿರಿಯಡ್‌ ಎಂದಾಕ್ಷಣ, ಅವರಿನ್ನೂ ಸ್ಟಾಫ್ರೂಮಿಂದ ಹೊರಟ್ರೋ ಇಲ್ವೋ, ಕ್ಲಾಸ್‌ರೂಮ್‌ನಲ್ಲಿ ಪಿನ್‌ಡ್ರಾಪ್‌ ಸೈಲನ್ಸ್! ಕ್ಲಾಸ್‌ ಮಾನಿಟರ್‌ ನಮ್ಮನ್ನು ಎಚ್ಚರಿಸಬೇಕಾದ ಅಗತ್ಯವೇ ಇರ್ಲಿಲ್ಲ. ಬಂದವರೇ ಕೈಯಲ್ಲಿರುವ ಪುಸ್ತಕ ಮತ್ತು ಡಸ್ಟರ್‌ಅನ್ನು ಎದುರಿಗಿರುವ ಮೇಜಿನ ಮೇಲಿಟ್ಟು, ಒಂದ್ಸಲ ನಮ್ಮನ್ನೆಲ್ಲ ದೀರ್ಘ‌ವಾಗಿ ನೋಡಿ ಮುಗುಳ್ನಗುತ್ತಿದ್ದರು. ಆಗ್ಲೂ ನಾವೆಲ್ಲಾ, ನಗೋದೋ ಬೇಡವೋ ಅನ್ನೊ ಗೊಂದಲದಲ್ಲೇ ಪಿಳಿಪಿಳಿ ಕಣ್ಣು ಬಿಡ್ತಾ ಅವರ ಕಣ್ಣು ತಪ್ಪಿಸಿ ಎದುರಿನ ಬ್ಲ್ಯಾಕ್‌ ಬೋರ್ಡನ್ನೋ, ಇಲ್ಲಾ ತಲೆತಗ್ಗಿಸಿ, ಪುಸ್ತಕ ಪುಟ ತಿರುವುತ್ತಿರುವವರಂತೆಯೋ ನಟಿಸುತ್ತಿದ್ದೆವು. ಈಗ ಅನಿಸುತ್ತೆ, ನಮ್ಮ ಆ ಅವಸ್ಥೆಯನ್ನು ಕಂಡು ಸರ್‌ ಮನಸ್ಸಲ್ಲಿ ಅದೆಷ್ಟು ನಗುತ್ತಿದ್ದರೋ ಅಂತ. 

ನಾವೆಲ್ಲ ಅವರೆದುರು  ಗಟ್ಟಿಯಾಗಿ ನಕ್ಕಿದ್ದೆಂದರೆ ಒಂದೇ ಒಂದು ಬಾರಿ. ನಮ್ಮ ಕ್ಲಾಸಿನ ಶ್ರೀನಿವಾಸ ಕಂಠಿ (ಅವನನ್ನು ಎಲ್ಲರೂ ಕಂಠಿ ಸೀನ ಎಂದೇ ಕರೆಯುತ್ತಿದ್ದುದು. ಊರಲ್ಲಿಯೇ ಶ್ರೀಮಂತರು ಎನಿಸಿಕೊಂಡ ಮೂರ್ನಾಲ್ಕು ಮನೆಗಳಲ್ಲಿ ಇವರದೂ ಒಂದು) ಎನ್ನುವವನ ಹತ್ತಿರ ನಿಂತು, ಅವನು ಹೋಂವರ್ಕ್‌ ಮಾಡಿಕೊಂಡು ಬರದ ಬಗ್ಗೆ ವಿಚಾರಿಸುತ್ತಾ, ತೋಳ ತುದಿಯಲ್ಲಿ ಹರಿದ ಅವನ ಶರ್ಟ್‌ನ್ನು ಗಮನಿಸಿ, “ಅಲ್ಲಲೇ ಸೀನ, ನಿಮ್ಮಪ್ಪ ನೋಡಿದ್ರ ಅಸ್ಟ್ ಶ್ರೀಮಂತ. ನೀ ನೋಡಿದ್ರ ಹರಕ್‌ ಅಂಗಿ ಹಾಕ್ಕೊಂಡು ಬಂದಿ. ಯಾಕಲೇ?’ ಅಂದ್ರು.

ಮೈಮುಟ್ಟಿ ಮಾತಾಡಿಸಿದ್ದಕ್ಕೇ ಅರ್ಧ ಬೆವೆತುಹೋಗಿದ್ದ ಸೀನ, ಜೊತೆಗೆ ಹೋಂವರ್ಕ್‌ ಬೇರೆ ಮಾಡಿರಲಿಲ್ಲವಲ್ಲ, ನಡುಗುತ್ತಾ, “ಹು ಹು ಹು ಹುಲಿ ಕಡದೈತ್ರಿ ಸರ’ ಎಂದುಬಿಟ್ಟ! “ನಾ ಯಾವಾಗ್‌ ಬಂದಿದ್ನೋಪಾ ನಿಮ್ಮನಿಗೆ?’ ಎಂದು ಮತ್ತೂಮ್ಮೆ ಕುಲುಕುಲು ನಕ್ಕರು ಸರ್‌. ಆಗ ಇಡೀ ಕ್ಲಾಸ್‌ ಘೊಳ್ಳೆಂದಿತು.  “ಅ ಅ ಅಲ್ರಿ ಸರ, ಅಲ್ರಿ ಸರ, ಇ ಇ ಇಲಿರೀ ಸರ. ತಪ್ಪಾತ್ರೀ ಸರ, ತಪ್ಪಾತ್ರೀ’ ಎಂದು ನಾಚಿಕೆ ಮತ್ತು ಹೆದರಿಕೆಯಿಂದ ಸೀನ ತೊದಲತೊಡಗಿದ್ದ. ಅದೇ ಮೊದಲು ನಾವು ಅವರೆದುರು ನಕ್ಕಿದ್ದು. 

ಅಂದೊಮ್ಮೆ ಸಮಾಜ ಪಾಠ ಹೇಳುವ ಮೇಸ್ಟ್ರೆ ಅಂದು ರಜೆಯಲ್ಲಿದ್ದರು. ಅವರು ಬರುವುದಿಲ್ಲ ಎಂದು ಗೊತ್ತಿದ್ದ ಕ್ಲಾಸ್‌ ಸಂತೆಯಾಗಿತ್ತು. ನನಗೋ ಅವ್ವನ ಕಣ್ಣು ತಪ್ಪಿಸಿ ತಂದಿದ್ದ ಕಾದಂಬರಿಯನ್ನೋದುವ ತವಕ. ಮಗ್ನಳಾಗಿ ಓದುತ್ತಿದ್ದೆ. ಇದ್ದಕ್ಕಿದ್ದಂತೆ ಕ್ಲಾಸಿನಲ್ಲಿ ಹುಟ್ಟಿಕೊಂಡ ಮೌನ ನನ್ನನ್ನು ಎಚ್ಚರಿಸಿತು. ತಲೆ ಎತ್ತಿ ನೋಡಿದರೆ ಹುಲಿ ಸರ್‌ ಎದುರು ನಿಂತಿದ್ದಾರೆ!

Advertisement

“ಎದ್‌ª ನಿಲ್ರಿ ಎಲ್ಲಾರು’ ಎಂದರು. ಆಗಲೂ ಜೋರು ದನಿಯಿಲ್ಲ. ಆದರೆ ಖಡಕ್ಕಾಗಿತ್ತು. ನಾವೆಲ್ಲಾ ನಿಂತೆವು. ಕೈಯಲ್ಲಿ ಡಸ್ಟರ್‌ ಹಿಡಿದು ಒಂದು ಡೆಸ್ಕಿನ ಹತ್ತಿರ ಹೋಗಿ ಸುಮ್ಮನೆ ಅಲ್ಲಿದ್ದ ಮೊದಲ ಹುಡುಗನ ಕೈ ನೋಡಿದ್ರು. ಡಿಫಾಲ್ಟ… ಎಂಬಂತೆ ಅವನು ಅವರೆದುರು ಕೈ ಚಾಚಿದ. ಕೈಯಲ್ಲಿರೊ ಡಸ್ಟರಿನಿಂದ ಅಂಗೈ ಮೇಲೆ ಫ‌ಟ್‌! ಒಂದೇ ಒಂದೇಟು. ನಂತರ ಪಕ್ಕದ ಹುಡುಗನ ಸರದಿ! ಎಕ್ಕಿ ಬರ್ಲಿಂದ ಸರೀ ಬಾರಿಸಿಕೊಳ್ಳುವ ಹುಡುಗರಿಗೆ ಎಲ್ಲಿ ಹತ್ತಬೇಕದು? ಆದರೂ ಇಷ್ಟೇ ಅಲ್ವಾ ಅಂದುಕೊಂಡು ಎಲ್ಲರೂ ಕೈ ಚಾಚುತ್ತಾ ಹೊಡೆತ ತಿಂದು, ಕೆಲವರು ಹೊಡೆತ ತಪ್ಪಿಸಿಕೊಳ್ಳಲು ಹೋಗಿ ಎರಡೆರಡು ತಿಂದು, ನನ್ನ ಸರದಿ ಬಂದಾಗ, ನಾನು ಗಲಾಟೆ ಮಾಡಿಲ್ಲ. ಹಾಗಾಗಿ ಸರ್‌ ಹೊಡೆಯುವುದಿಲ್ಲ ಎಂದೇ ನಂಬಿಕೊಂಡಿದ್ದವಳಿಗೆ, “ಕೈ ಚಾಚಬೇ’ ಎಂದರು. ಅವಮಾನವೆನಿಸಿತು. ಕೈಗೆ ಬಿದ್ದ ಪೆಟ್ಟು ಜೋರಿರಲಿಲ್ಲ ನಿಜ. ಆದ್ರೆ ಮನಸಿಗೆ ಜೋರು ಪೆಟ್ಟಾಗಿತ್ತು. 

ಕಣ್ಣೀರು ಧಾರಾಕಾರ. ಎಷ್ಟು ಕಂಟ್ರೋಲ್‌ ಮಾಡಿದರೂ ನಿಲ್ಲುತ್ತಿಲ್ಲ. ಜೋರಾಗಿ ದನಿ ತೆಗೆದು ಅಳುವ ನನಗೆ ಪಕ್ಕದವರಿಗೂ ಗೊತ್ತಾಗದಂತೆ ಅಳುವುದು ಅಭ್ಯಾಸವಾಗಿದ್ದು ಅಂದೇ ಅನಿಸುತ್ತೆ. ಪಾಠ ಮಾಡುತ್ತಲೇ ಹುಲಿ ಸರ್‌ ನನ್ನನ್ನು ಗಮನಿಸುತ್ತಿದ್ದರು. ಮೊದಮೊದಲು ಏನೂ ಪ್ರತಿಕ್ರಿಯಿಸದೆ ಪಾಠ ಮಾಡುತ್ತಿದ್ದ ಅವರಿಗೆ ಸುಮ್ಮನಿರುವುದು ಕಷ್ಟವಾಯ್ತು. “ಸುಮ್ನಾಗಬೇ’ ಎಂದು ಮೃದುವಾಗಿ ಹೇಳಿ ಮತ್ತೆ ಪಾಠ ಮುಂದುವರಿಸಿದರು. ಆ ಸಾಂತ್ವನದ ದನಿಗೆ ನನ್ನ ಅಳು ಇನ್ನಷ್ಟು ಜೋರಾಯಿತು. ತಲೆ ಬಗ್ಗಿಸಿ ಅಳುತ್ತಲೇ ಇದ್ದೆ. ತಪ್ಪೇ ಮಾಡದೆ ಅನುಭವಿಸಿದ ಶಿಕ್ಷೆ ನನ್ನನ್ನು ವಿಚಲಿತಳನ್ನಾಗಿಸಿತ್ತು. ಸರ್‌ ನನ್ನನ್ನು ಹೊಡೆಯಬಾರದಿತ್ತು. ನಾನು ತಪ್ಪು ಮಾಡಿಲ್ಲ ಅನ್ನುವ ನೋವು  ಬಾಧಿಸುತ್ತಲೇಯಿತ್ತು.

“ಜಯಲಕ್ಷ್ಮಿ, ಎದ್ದು ನಿಂದ್ರು’ ಗಂಭೀರವಾದ ದನಿ ನನ್ನನ್ನು ಎದ್ದು ನಿಲ್ಲಿಸಿತು. “ಎಲ್ಲಾರೂ ಹೊಡ್ತಾ ತಿಂದಾರ. ಸುಮ್ನ ಪಾಠ ಕೇಳ್ಕೊಂತ ಕುಂತಾರ. ನೋಡಲ್ಲಿ ನಿನ್ನ ಗೆಳತ್ಯಾರ ಎಷ್ಟು ನಕ್ಕೋತ ಪಾಠ ಕೇಳಾಕತ್ತಾರ. ನಿಂದೇನಿದು ಅತೀ?’ “ಸರ, ನಾ ದಾಂಧಿ ಮಾಡಿಲ್ಲಾಗಿತ್ರೀ… ಅಂದ್ರೂ ನೀವು…’  ಬಿಕ್ಕುತ್ತಾ ಅರ್ಧಂಬರ್ಧ ನುಡಿದೆ.

ಸರ್‌ ಮುಖದಲ್ಲಿ ನಿಚ್ಚಳವಾಗಿ ಅಪರಾಧಿ ಭಾವ ಮೂಡಿದ್ದನ್ನ ನಾನ್ಯಾವತ್ತಿಗೂ ಮರೆಯಲಾರೆ. ಕ್ಷಣ ಹೊತ್ತು ಸುಮ್ಮನಿದ್ದವರು ಮತ್ತೆ ಎಂದಿನದೇ ತಮ್ಮ ಗಂಭೀರ ದನಿಯಲ್ಲಿ, “ಹೌದು ನಾನೂ ನೋಡೀನಿ. ಆದ್ರ ಇಡೀ ಕ್ಲಾಸು ದಾಂಧಿ ಮಾಡೂಮುಂದ ಶಿಕ್ಷಾದಾಗ ನಿನಗಷ್ಟ ಕನ್ಸಿಶನ್‌ ಕೊಡಾಕ ಬರೂದಿಲ್ಲ. ಗುಂಪಿನ್ಯಾಗಿರ್ತೀರಿ ಅಂದ ಮ್ಯಾಲೆ ಅದರ ಚೊಲೋದ್ದು, ಕೆಟ್ಟದ್ದು ಎರಡ್ರಾಗೂ ನಿನಗೂ ಪಾಲಿರ್ತೈತಿ ಮರೀಬ್ಯಾಡ. ಹೋಗು ಮುಖ ತೊಳ್ಕೊಂಡು ಬಂದು ಕುಂಡ್ರು’ ಎಂದರು.

ಗುಂಪಿನ್ಯಾಗಿರ್ತೀರಿ ಅಂದ ಮ್ಯಾಲೆ ಅದರ ಚೊಲೋದ್ದು, ಕೆಟ್ಟದ್ದು ಎರಡ್ರಾಗೂ ನಿನಗೂ ಪಾಲಿರ್‌ತೈತಿ ಮರೀಬ್ಯಾಡ. ಅಂದಿನಿಂದ ಇಂದಿನವರೆಗೆ ಹುಲಿ ಸರ್‌ ಆಡಿದ ಆ ಮಾತು ಆಗಾಗ ನನ್ನ ಮನದಲ್ಲಿ ರಿಂಗಣಿಸುತ್ತಲೇ ಇರುತ್ತದೆ.  

-ಜಯಲಕ್ಷ್ಮಿ ಪಾಟೀಲ್‌, ಕಿರುತೆರೆ ನಟಿ

Advertisement

Udayavani is now on Telegram. Click here to join our channel and stay updated with the latest news.

Next