ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿರುವ ಕಾಂಗ್ರೆಸ್ ಗುರುವಾರ ಮಹತ್ವದ ಸಭೆ ನಡೆಸಲಿದೆ.
130 ಅಭ್ಯರ್ಥಿಗಳ ಮೊದಲ ಪಟ್ಟಿ ಫೆ.15 ರೊಳಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕಸರತ್ತು ನಡೆಯುತ್ತಿದ್ದು, ಸಭೆಯ ನಂತರ ಎಐಸಿಸಿಗೆ ಪಟ್ಟಿ ರವಾನೆ ಮಾಡಲಾಗುವುದು.
130 ಕ್ಷೇತ್ರಗಳಿಗೆ ಒಂದೇ ಹೆಸರು ಕೆಪಿಸಿಸಿಯಿಂದ ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಾಗಿದೆ. ತೀವ್ರ ಪೈಪೋಟಿ ಇರುವ ಕ್ಷೇತ್ರಗಳ ಹೆಸರು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಕೆಪಿಸಿಸಿ, ಎಐಸಿಸಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮಾಡಿಸಿರುವ ಸಮೀಕ್ಷೆ, ಕಾರ್ಯಾಧ್ಯಕ್ಷರು ನೀಡಿದ ವರದಿ, ಜಿಲ್ಲಾ ಮತ್ತು ಬ್ಲಾಕ್ ಶಿಫಾರಸು ಆಧರಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸಹ ಎಲ್ಲ ಜಿಲ್ಲೆಗಳ ಸ್ಥಿತಿಗತಿ ಕುರಿತು ಹೈಕಮಾಂಡ್‌ಗೆ ವರದಿ ನೀಡಿದ್ದಾರೆ. ಬುಧವಾರ ರಾಜ್ಯ ಉಸ್ತುವಾರಿ ಸುಜೇìವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪೂರ್ವಭಾವಿ ಚರ್ಚೆ ನಡೆಸಿದರು.
ಫೆ.3ರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೋಲಾರದ ಕೂಡುಮಲೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಸವಕಲ್ಯಾಣದಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭಿಸಲಿದ್ದು ಅದಕ್ಕೆ ನಮ್ಮ 130 ರಿಂದ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ನಿರ್ಧರಿಸಲಾಗಿದೆ. ಕೆಪಿಸಿಸಿಯಿಂದ ಎಐಸಿಸಿಗೆ ಪಟ್ಟಿ ರವಾನೆ ಮಾಡಿದ ನಂತರ ಫೆ.15 ರೊಳಗೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.