ಸಂಬರಗಿ: ಗಡಿ ಗ್ರಾಮಗಳಲ್ಲಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯುವ ನೀರಿಗಾಗಿ ಪಕ್ಕದ ಮಹಾರಾಷ್ಟ್ರ ರಾಜ್ಯದ ಗ್ರಾಮಗಳಿಂದ ಟ್ಯಾಂಕರ್ ನೀರನ್ನು ಖರೀದಿ ಮಾಡಿ ತರಬೇಕಾಗಿದೆ.
ರಾಜ್ಯ ಸರ್ಕಾರ ಶೀಘ್ರ ಬರಗಾಲ ಘೋಷಣೆ ಮಾಡಿ ಗೋಶಾಲೆ ಹಾಗೂ ನೀರು ಪೂರೈಕೆಗಾಗಿ ಟ್ಯಾಂಕರ್ ಪ್ರಾರಂಭ ಮಾಡಬೇಕೆಂದು ಗಡಿ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುಂಗಾರು ಮಳೆ ವಿಫಲಗೊಂಡಿದ್ದು, ಇದರಿಂದ ರೈತರು ಬಿತ್ತನೆ ಕಾರ್ಯ ಕೈಗೊಳ್ಳಲಾಗದೆ ಕಂಗಾಲಾಗಿದ್ದಾರೆ. ನದಿಗಳು ಬತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಸರಕಾರ ಗಡಿ ಭಾಗದ ಸುಮಾರು 30 ಗ್ರಾಮಗಳಿಗೆ ನೀರಿನ ಟ್ಯಾಂಕರ್ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು.
ಸಂಬರಗಿ, ಶಿರೂರ, ಪಾಂಡೇಗಾಂವ, ಖೀಳೇಗಾಂವ, ಜಕ್ಕಾರಟ್ಟಿ, ಆಜೂರ, ಅನಂತಪೂರ, ಮಲಾಬಾದ, ಶಿವನೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಭಯಾನಕ ಸಮಸ್ಯೆ ಇದ್ದು, ಜನ ಮೀರಜ ತಾಲೂಕಿನ ಸಲಗರ, ಬೆಳ್ಳಂಕಿ,
ಜಾಂಡರವಾಡಿ ಹಾಗೂ ಕವಟೆಮಹಾಂಕಾಳ ತಾಲೂಕಿನ ರಾಂಜನಿ, ಲೋಣಾರವಾಡಿ, ಕೋಕಳಾ, ಧುಳಗಾಂವ, ಕೊಂಗನೋಳಿ ಭಾಗಗಳಿಂದ ಮೂರು ಸಾವಿರ ರೂಪಾಯಿಗೆ ಒಂದು ಟ್ಯಾಂಕರ್ ನೀರು ಖರೀದಿ ಮಾಡಿ ತರುತ್ತಿದ್ದಾರೆ.
ಶೀಘ್ರದಲ್ಲಿ ಜಿಲ್ಲಾಡಳಿತ ಇತ್ತ ಗಮನಹರಿಸಿ ನೀರು-ಮೇವಿನ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜಕ್ಕಾರಟ್ಟಿ ಗ್ರಾಮದ ಖುಟ್ಟೆ ತೋಟದ ರೈತ ಸುಭಾಷ ಖುಟ್ಟೆ ಅವರು ತಮ್ಮ ಕಬ್ಬು ಬೆಳೆ ಒಣಗಿದರೂ ಚಿಂತೆ ಮಾಡದೇ ಸ್ವಂತ ಕೊಳವೆ ಬಾವಿಯಿಂದ ಜನರಿಗೆ ನೀರು ಪೂರೈಸುತ್ತಿದ್ದಾರೆ. ಜಕ್ಕಾರಟ್ಟಿ ಗ್ರಾಪಂ ಅಧ್ಯಕ್ಷ ಸಿದ್ದು ಖೋತ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿನಮ್ಮ ಗ್ರಾಮಕ್ಕೆ ನೀರಿಲ್ಲ. ನಾವು ಮಹಾರಾಷ್ಟ್ರದಿಂದ ಟ್ಯಾಂಕರ್ ನೀರು ಖರೀದಿ ಮಾಡಿ ಗ್ರಾಮಕ್ಕೆ ಪೂರೈಸುತ್ತಿದ್ದೇವೆ ಎಂದರು.
ಸರ್ಕಾರ ಇನ್ನೂ ಬರ ಘೋಷಿಸಿಲ್ಲ. ಜನರ ಅಗತ್ಯಕ್ಕೆ ತಕ್ಕಂತೆ ತಮ್ಮ ಅನುದಾನದಲ್ಲಿ ಟ್ಯಾಂಕರ್ ನೀರು ತರಿಸುವ ಅಧಿಕಾರವನ್ನು ಗ್ರಾಮ ಪಂಚಾಯ್ತಿಗಳಿಗೇ ನೀಡಲಾಗಿದೆ.
ಬಿ.ಎಸ್. ಖಡಕಬಾವಿ, ತಹಶೀಲ್ದಾರ್, ಅಥಣಿ