ಸಿರುಗುಪ್ಪ: ಕಳೆದ 11 ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಸಾಮರ್ಥ್ಯಸೌಧಕ್ಕೆ ಕೊನೆಗೂ ಮುಕ್ತಿ ದೊರೆತಿದ್ದು, ಗುರುವಾರ ಸಾಮರ್ಥ್ಯ ಸೌಧವು ಲೋಕಾರ್ಪಣೆಗೊಳ್ಳಲಿದ್ದು, ಉದ್ಘಾಟನೆಗಾಗಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಗಿಸುವ ಕಾರ್ಯದಲ್ಲಿ ಕಾರ್ಮಿಕರು ತೊಡಗಿದ್ದಾರೆ.
ಕಳೆದ 11ವರ್ಷಗಳ ಹಿಂದೆ ಸಾಮರ್ಥ್ಯಸೌಧ ನಿರ್ಮಾಣಕ್ಕೆ ರೂ. 30 ಲಕ್ಷ ನಿಗದಿಪಡಿಸಲಾಗಿದ್ದು, ರೂ. 20ಲಕ್ಷ ಅನುದಾನವನ್ನು ತಾಪಂ ಬಿಡುಗಡೆ ಮಾಡಿ ಕಾಮಗಾರಿಯನ್ನು ಆರಂಭಿಸಲಾಯಿತು. ರೂ. 30ಲಕ್ಷ ಅನುದಾನದಲ್ಲಿ ಬಾಕಿ ಉಳಿದ ರೂ. 10 ಲಕ್ಷ ಅನುದಾನವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡದೇ ಇರುವುದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದರು.
ಜಿಲ್ಲಾ ಪಂಚಾಯಿತಿಯಿಂದ ರೂ. 20ಲಕ್ಷ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಈ ಅನುದಾನದಲ್ಲಿ ಬಾಕಿ ಉಳಿದ ಕಾಮಗಾರಿಯನ್ನು ಮುಗಿಸಿಕೊಡುವುದಾಗಿ ತಾಪಂ ಅಧಿಕಾರಿಗಳು ಹೇಳುತ್ತಲೇ ಬಂದರು, ಆದರೆ ತಾಂತ್ರಿಕ ಸಮಸ್ಯೆಯಿಂದ ಜಿಪಂನಿಂದ ಯಾವುದೇ ಅನುದಾನ ಬಿಡುಗಡೆಯಾಗಲಿಲ್ಲ. ಇದರಿಂದಾಗಿ ನಿರ್ಮಾಣ ಕಾರ್ಯ ಸ್ಥಗಿತಗೊಂಡು ಸಾಮರ್ಥ್ಯಸೌಧ ಹಾಳು ಬಿದ್ದ ಕೊಂಪೆಯಂತಾಗಿತ್ತು.
ಸಾಮರ್ಥ್ಯ ಸೌಧದ ಕಾಮಗಾರಿಯನ್ನು ಮುಗಿಸಿಕೊಡಲು ಎಷ್ಟು ಅನುದಾನಬೇಕು ಎಂದು ತಾಪಂ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಎಂ.ಎಸ್. ಸೋಮಲಿಂಗಪ್ಪ ರೂ. 30ಲಕ್ಷ ಅನುದಾನವನ್ನು ತಮ್ಮ ಶಾಸಕರ ನಿಧಿಯಿಂದ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದಂತೆ ಅನುದಾನವನ್ನು ಬಿಡುಗಡೆ ಮಾಡಿದ್ದು, ಸಾಮರ್ಥ್ಯಸೌಧದ ಕಾಮಗಾರಿ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ.
ಬುಧುವಾರ ಶಾಸಕ ಎಂ.ಎಸ್. ಸೋಮಲಿಂಗಪ್ಪ ಸಾಮರ್ಥ್ಯ ಸೌಧವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೂ. 50ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಾಮರ್ಥ್ಯ ಸೌಧವನ್ನು ಗುರುವಾರ ಲೋಕಾರ್ಪಣೆ ಮಾಡಲಾಗುತ್ತಿದ್ದು, ಇಲ್ಲಿ ಬಿಸಿಎಂ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ, ಕಾರ್ಮಿಕ ಇಲಾಖೆಯು ಈ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.