Advertisement
ಬೆಂಗ್ಳೂರು ಅಂದ್ರೆ ಸದಾ ಕೂಲ್ ಅನ್ನೋದು ಹೊರಗಿನವರ ವ್ಯಾಖ್ಯಾನ. ಈ ಕೂಲ್‌ನೆಸ್ ಕಾಪಾಡುವ ರಾಜಧಾನಿಯ ಪರಿಸರ ಸೈನಿಕರಲ್ಲಿ ಒಬ್ಬರು ಶಿವಕುಮಾರ್ ಹೊಸಮನಿ. “ಸಮರ್ಪಣ’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಹೊಸಮನಿ, ಪ್ರತಿ ಬೇಸಿಗೆಯಲ್ಲಿ ಏನನ್ನಾದರೂ ಹೊಸ ಮಾದರಿಯನ್ನು ಪರಿಚಯಿಸುತ್ತಾರೆ. ಒಮ್ಮೆ ಮುಟ್ಟಿದರೆ, ಮುತ್ತಿಕ್ಕೋಣ ಎನ್ನುವ ಸೌಂದರ್ಯದಲ್ಲಿರುವ ಮಣ್ಣಿನ ಬಾಟಲಿಗಳನ್ನು ಅವರು ಮಾರುಕಟ್ಟೆಗೆ ಬಿಟ್ಟಿದ್ದಾರೆ.
Related Articles
ಇದು “ಸಮರ್ಪಣ’ ಸಂಸ್ಥೆಯ ಇನ್ನೊಂದು ಅಭಿಯಾನ. 5 ವರ್ಷದಿಂದ ಈ ಯೋಜನೆ ಹಮ್ಮಿಕೊಂಡು ಬಂದಿದ್ದು, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೆ ಪರಿತಪಿಸುವ ಪಕ್ಷಿಗಳಿಗೆ ಈ ಸಂಸ್ಥೆ ನೆರವಾಗುತ್ತದೆ. ಕರಟ, ತ್ರಿಕೋನಾಕೃತಿ, ಹರಿವಾಣ, ಹೂಕುಂಡ, ಬೋಗುಣಿಯ ಶೈಲಿಯಲ್ಲಿ ನೀರಿನ ಆಸರೆಗಳನ್ನು ನಿರ್ಮಿಸಿ ಉಚಿತವಾಗಿಯೇ ಸಾರ್ವಜನಿಕರಿಗೆ ನೀಡುತ್ತಾರೆ ಶಿವಕುಮಾರ್. ಈ ವರ್ಷ ಸುಮಾರು 50 ಸಾವಿರ ಮಂದಿಗೆ ಗುಟುಕು ನೀರಿನ ಆಸರೆ ಮಾದರಿಗಳನ್ನು ವಿತರಿಸಲಾಗಿದೆ.
Advertisement
ಇವಲ್ಲದೆ ಗಣಪತಿ ಹಬ್ಬದ ವೇಳೆ ಜೇಡಿಮಣ್ಣಿನ ಗಣೇಶ ಮೂರ್ತಿಗಳ ನಿರ್ಮಾಣದಲ್ಲೂ ಸಂಸ್ಥೆ ಭಾಗಿಯಾಗಿ, ಪರಿಸರ ಜಾಗೃತಿ ಮೂಡಿಸಿತ್ತು. ಗಣಪನನ್ನು ಯಾರೂ ಸಾರ್ವಜನಿಕ ಕೆರೆಗಳಿಗೆ ಬಿಡಬಾರದೆಂದು, ಆ ಮೂರ್ತಿಯೊಳಗೆ ಬೆಳ್ಳಿ ನಾಣ್ಯಗಳನ್ನು ಹಾಕಿ, ಮನೆಯ ನೀರಿನ ಮೂಲಗಳಲ್ಲಿಯೇ ವಿಸರ್ಜಿಸಲು ಪ್ರೇರೇಪಿಸಿದ್ದರು.
ಮಣ್ಣಿನ ಬಾಟಲಿ ಬೇಕಿದ್ದರೆ…ಬೆಂಗಳೂರಿಗೆ ಈ ಮಣ್ಣಿನ ಬಾಟಲಿಗಳನ್ನು ಪೂರೈಸುವುದು ಬೆಳಗಾವಿ ಜಿಲ್ಲೆಯ ಕುಂಬಾರ ಸಮುದಾಯ. ಗೋಕಾಕ್ ಸಮೀಪದ ಸಾವಳಿಗಿಯ ಶಿವಬಸಪ್ಪ ಅವರ ಬಳಿ ಶಿವಕುಮಾರ್ ಹೊಸಮನಿ ಈ ಮಣ್ಣಿನ ಮಾದರಿಗಳನ್ನು ಮಾಡಿಸುತ್ತಾರೆ. ಅಲ್ಲಿನ 30-35 ಕುಟುಂಬಗಳಿಗೆ ಇದು ಒಂದು ಉದ್ಯೋಗವೇ ಆಗಿದೆ. ಬೆಂಗಳೂರು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಗಳನ್ನು ಅಲ್ಲಿ ಸಿದ್ಧಪಡಿಸಲಾಗುತ್ತದೆ. ವಿನ್ಯಾಸಕ್ಕೆ ಅಗತ್ಯ ಸಲಹೆಗಳನ್ನು ಶಿವಕುಮಾರ್ ನೀಡುತ್ತಾರೆ. ನಿಮಗೂ ಮಣ್ಣಿನ ಬಾಟಲಿ ಮಾದರಿ ಬೇಕಿದ್ದರೆ ಮೊ. 9980008074, 7795255676 ಸಂಪರ್ಕಿಸಬಹುದು.