Advertisement

ರಾಜ್ಯದಲ್ಲೂ ನಡೆದಿತ್ತು ಸಮಾಜವಾದಿ ಪಕ್ಷದ ಪ್ರಯೋಗ

11:24 PM Oct 10, 2022 | Team Udayavani |

ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರಿಗೂ ಕರ್ನಾಟಕಕ್ಕೂ ಒಂದಿಷ್ಟು ರಾಜಕೀಯ ನಂಟಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ರೊಂದಿಗಿನ ನಿಕಟ ಸಂಬಂಧದ ಜತೆಗೆ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷವನ್ನು ಅವರು ಪ್ರಯೋಗಿಸಿದ್ದರು. ಆದರೆ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ.

ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, 2005ರಲ್ಲಿ ಆಗ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪನವರು ಸಮಾಜವಾದಿ ಪಕ್ಷವನ್ನು ರಾಜ್ಯದಲ್ಲಿ ಸ್ಥಾಪಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

2013ರಲ್ಲಿ ಚನ್ನಪಟ್ಟಣದಿಂದ ಗೆದ್ದಿದ್ದ ಸಿ.ಪಿ. ಯೋಗೇಶ್ವರ್‌ ದಕ್ಷಿಣ ಭಾರತದ ಏಕೈಕ ಸಮಾಜವಾದಿ ಶಾಸಕ ಎನಿಸಿಕೊಂಡಿದ್ದರು. ಆ ಆವಧಿಯಲ್ಲಿ ಅವರು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದರು.

ರೈತ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್‌, ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಶಂಕರ್‌ ಬಿದರಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಕೂಡ 2013ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದರು. ಆದರೆ ಇವರ್ಯಾರೂ ಹೆಚ್ಚು ದಿನ ಆ ಪಕ್ಷದಲ್ಲಿ ಉಳಿದಿರಲಿಲ್ಲ. ಗೂಳಿಹಟ್ಟಿ ಶೇಖರ್‌ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಬೃಹತ್‌ ಸಮಾವೇಶ ಏರ್ಪಡಿಸಿದ್ದು, ಅದರಲ್ಲಿ ಮುಲಾಯಂ ಸಿಂಗ್‌ ಭಾಗಿಯಾಗಿದ್ದರು. ಇದು ಮುಲಾಯಂ ಸಿಂಗ್‌ ಅವರು ರಾಜ್ಯಕ್ಕೆ ನೀಡಿದ್ದ ಕೊನೆಯ ಭೇಟಿ.

Advertisement

ಕರ್ನಾಟಕದ ಬಗ್ಗೆ ಅಭಿಮಾನ ಇರುವುದರಿಂದಲೇ ಪುತ್ರ ಅಖೀಲೇಶ್‌ ಯಾದವ್‌ರನ್ನು ಮೈಸೂರು ವಿವಿಯಲ್ಲಿ ಅಧ್ಯಯನಕ್ಕೆ ಸೇರಿಸಿದ್ದರು.

ಮುಲಾಯಂ ಸಿಂಗ್‌ ನಿಧನಕ್ಕೆ ಗಣ್ಯರ ಸಂತಾಪ
ಮುಲಾಯಂ ಸಿಂಗ್‌ ನಿಧನಕ್ಕೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಮಾಜವಾದಿ ಚಿಂತಕ ರಾಮ್‌ ಮನೋಹರ್‌ ಲೋಹಿಯಾ, ರಾಜ್‌ ನಾರಾಯಣ ಅವರಂಥ ನಾಯಕರ ಮಾರ್ಗದರ್ಶನದಲ್ಲಿ ಮುನ್ನೆಲೆಗೆ ಬಂದ ಮುಲಾಯಂ ಸಿಂಗ್‌ ಯಾದವ್‌, ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆವಾಸ ಅನುಭವಿಸಿದ್ದರು. ಸಮಾಜವಾದಿ ಪಕ್ಷವನ್ನು ಸ್ಥಾಪಿಸಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ಮುಲಾಯಂ ಸಿಂಗ್‌ ನಿಧನ ಆಘಾತಕಾರಿ. ಉತ್ತರ ಪ್ರದೇಶದಲ್ಲಿ ಕೋಮುವಾದದ ವಿರುದ್ಧದ ಪ್ರಬಲ ರಾಜಕೀಯ ಶಕ್ತಿಯಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನನ್ನ ದೀರ್ಘ‌ಕಾಲದ ಒಡನಾಡಿ ಮುಲಾಯಂ ಸಿಂಗ್‌ ನಿಧನ ಆಘಾತವನ್ನುಂಟು ಮಾಡಿದೆ. ಜಾತ್ಯತೀತ ಮತ್ತು ಸಾಮಾಜಿಕ ರಾಜಕಾರಣದ ತತ್ವಸಿದ್ಧಾಂತಕ್ಕೆ ಬದ್ಧರಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು ಹೇಳಿದ್ದಾರೆ.

ತಾನು ಅನಾರೋಗ್ಯದಿಂದ ಇರುವ ಕಾರಣ ಶಾಸಕ ಎಚ್‌.ಡಿ.ರೇವಣ್ಣ ಅವರು ಮಂಗಳವಾರ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿ ರುವುದಾಗಿ ದೇವೇಗೌಡರು ತಿಳಿಸಿದ್ದಾರೆ.

ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಮುಲಾಯಂ ಸಿಂಗ್‌ ರಕ್ಷಣ ಸಚಿವರಾಗಿದ್ದನ್ನು ಕುಮಾರ ಸ್ವಾಮಿ ಸ್ಮರಿಸಿದ್ದಾರೆ.

ಮುಲಾಯಂ ಸಿಂಗ್‌ ಯಾದವ್‌ ನಿಧನ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next