ಲಖನೌ : ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಈಗಲೇ ಅಖಾಡ ಸಜ್ಜುಗೊಳಿಸುತ್ತಿದ್ದು, ಬಿಜೆಪಿ, ಸಮಾಜವಾದಿ ಹಾಗೂ ಕಾಂಗ್ರೆಸ್ ತನ್ನದೆಯಾದ ಯೋಜನೆ ಹಾಕಿಕೊಂಡಿವೆ.
ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸುತ್ತಿದ್ದು, ‘ವಿಜಯ್ ಬೂತ್ ಅಭಿಯಾನ’ ಶುರು ಮಾಡಿದೆ. ನಾವೇನು ಕಡಿಮೆ ಇಲ್ಲ ಎಂದಿರುವ ಸಮಾಜವಾದಿ ಪಕ್ಷ ಇಂದು ( ಸೆ.11) ‘ಜನ್ ಮನ್ ವಿಜಯ್’ ಹಾಗೂ ‘ಹರ್ ಬೂತ್ ಪರ್ ಯೂತ್’ ಅಭಿಯಾನಕ್ಕೆ ಚಾಲನೆ ನೀಡಿದೆ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಭಿಯಾನಗಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಹಾಗೂ ಎಸ್‍ಪಿ ಮುಖಂಡ ಅಖಿಲೇಶ್ ಯಾದವ್, 2022 ಚುನಾವಣೆಯಲ್ಲಿ ಎಸ್‍ಪಿಯ ಯುವಶಕ್ತಿ ಉತ್ತರ ಪ್ರದೇಶದ ಪ್ರತಿ ಬೂತ್‍ನಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲಿದೆ. ಮತ್ತು ನಮ್ಮ ಪಕ್ಷದ ತತ್ವಗಳು ಹಾಗೂ ಕಾರ್ಯಗಳು ಜನರ ಹೃದಯವನ್ನು ಗೆಲ್ಲುವ ಮೂಲಕ ಯಶಸ್ಸು ತಂದು ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾವಂತ ಮತದಾರರು ಈ ಬಾರಿ ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಕ್ರಾಂತಿ ತರಲಿದ್ದಾರೆ ಎಂದು ಅಖಿಲೇಶ್ ಯಾದವ್ ನುಡಿದರು.
ಇನ್ನು ಇಂದು ಮುಂಜಾನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ವಿಜಯ್ ಬೂತ್ ಅಭಿಯಾನಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿದರು. ಇದರ ಬೆನ್ನಲ್ಲೆ ಸಮಾಜವಾದಿ ಪಕ್ಷ ಕೂಡ ಎರಡು ಅಭಿಯಾನಗಳನ್ನು ಪ್ರಾರಂಭಿಸುವ ಮೂಲಕ ಮುಂಬರುವ ಚುನಾವಣೆಗೆ ಅಖಾಡ ಸಿದ್ಧಗೊಳಿಸಿದೆ.