Advertisement

ಹೆಬ್ರಿಯಲ್ಲಿ ತಲೆ ಎತ್ತಲಿದೆ ತಿಮ್ಮಕ್ಕ ಟ್ರೀ ಪಾರ್ಕ್‌

07:00 AM Apr 06, 2018 | |

ಹೆಬ್ರಿ: ನೂತನ ತಾಲೂಕು ಆಗಿ ಘೋಷಣೆಯಾದ ಹೆಬ್ರಿಯಲ್ಲಿ ಸಸ್ಯ ಸಂಪತ್ತಿನ ಕಣಜ, ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಟ್ರೀ ಪಾರ್ಕ್‌ ನಿಮಾರ್ಣಗೊಳ್ಳುತ್ತಿದೆ.  

Advertisement

ಜನರಲ್ಲಿ ಸಸ್ಯ ಸಂಪತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ 27 ತಿಮ್ಮಕ್ಕ ಟ್ರೀ ಪಾರ್ಕ್‌ ನಿರ್ಮಾಣವಾಗಲಿದ್ದು, ಅದರಲ್ಲಿ  ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೆಬ್ರಿ ಅರಣ್ಯ ಇಲಾಖೆಯ ಕಚೇರಿ ಹೆಬ್ರಿ ವಲಯ ಅರಣ್ಯಾಧಿಕಾರಿ ಅವರ ಉಸ್ತುವಾರಿಯಲ್ಲಿ  ಪಾರ್ಕ್‌ ತಲೆ ಎತ್ತಲಿದೆ. 


2009ರಲ್ಲಿ ಉದ್ಯಾನವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದರೂ, ಯೋಜನೆ ಬಳಿಕ ನೆನೆಗುದಿಗೆ ಬಿದ್ದಿತ್ತು. ಬಳಿಕ ಗ್ರಾಮ ಅರಣ್ಯ ಸಮಿತಿ ವಿವಿಧ ಸ್ವಸಹಾಯ ಸಂಘಗಳ ಸದಸ್ಯರ ಜತೆಗೂಡಿ ಶ್ರಮದಾನ ನಡೆಸುತ್ತ ಯೋಜನೆಯನ್ನು ಚಾಲ್ತಿಯಲ್ಲಿರಿಸಿತ್ತು. 2016ರಲ್ಲಿ ಜಿ.ಪಂ.ಅನುದಾನದಲ್ಲಿ ಕುಡಿಯುವ ನೀರಿಗೆ ಬಾವಿ ನಿರ್ಮಾಣ, ಪಂಪ್‌ ಶೆಡ್‌,ಅರಣ್ಯ ಸಮಿತಿಯ ಆಶ್ರಯದಲ್ಲಿ ಎದುರಿನ ಆವರಣಗೊಡೆ ನಿರ್ಮಾಣವಾಗಿತ್ತು. ಈಗ ಅದೇ ಸ್ಥಳ ಅರಣ್ಯ ಇಲಾಖೆ ಮೂಲಕ ತಿಮ್ಮಕ್ಕ ಟ್ರೀಪಾರ್ಕ್‌ ಆಗಿ ರೂಪುಗೊಳ್ಳಲಿದೆ. 
 
ಪಾರ್ಕ್‌ನಲ್ಲಿ ಏನೇನಿವೆ? 
ಆಕರ್ಷಕ ಮಹಾದ್ವಾರ ,ಪಕ್ಷಿ ವೀಕ್ಷಣೆ ಪಥ, ನೈಸರ್ಗಿಕ ಪಥ, ಔಷಧ ಸಸ್ಯಗಳ ವನ, ಪಾರ್ಕಿಂಗ್‌ ವ್ಯವಸ್ಥೆ, ಟಿಕೆಟ್‌ ಕೌಂಟರ್‌, ವಾಚ್‌ಮ್ಯಾನ್‌ ಶೆಡ್‌, ಪಾರಾಗೋಲಾ, ರಾತ್ರಿಗೆ ವರ್ಣರಂಜಿತ ಬೆಳಕು, ಟೆಂಟ್‌ ಹೌಸ್‌, 1600 ಮೀಟರ್‌ ಉದ್ದದ ಸಣ್ಣ ಮತ್ತು ದೊಡ್ಡದಾದ ಎರಡು ವಾಕಿಂಗ್‌ ಟ್ರಾÂಕ್‌, ಪ್ರಾಕೃತಿಕ ವನ , ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್‌ಗಳು, ವಾಯು ವಿಹಾರದ ರಸ್ತೆ ಹಾಗೂ ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಅತ್ಯಂತ ಆಕರ್ಷಣೀಯ ಗೋಪುರ ಮಾದರಿಯ ಸಭಾಂಗಣ, ವೀಕ್ಷಣಾ ಗೋಪುರ, ಮುಕ್ತ ಸಭಾಂಗಣ ಪಕ್ಷಿಗಳ ವೀಕ್ಷಣೆ ಸ್ಥಳ ಸಹಿತ ವಿವಿಧ ಸೌಲಭ್ಯಗಳು ಇರಲಿವೆ. ಮುಂದಿನ ಐದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
  
ಮೂಲಸೌಕರ್ಯ
ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್‌ ವ್ಯವಸ್ಥೆ ಈಗಾಗಲೇ ಪೂರ್ಣಗೊಂಡಿದೆ. ಯಾವುದೇ ಇತರ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ನಿರ್ವಹಣೆಗೆ ಸಿಬ್ಬಂದಿ ನೇಮಿಸಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಲಾತ್ತದೆ. ಉದ್ಯಾನವನ ಪ್ರವೇಶಿಸುವಲ್ಲಿ ಕೌಂಟರ್‌ ತೆರೆಯಲಾಗುತ್ತಿದ್ದು ನಿರ್ವಹಣೆಗಾಗಿ ಹೆಬ್ರಿ ವಲಯ ಅರಣ್ಯ ಸಮಿತಿಗೆ ಜವಬ್ದಾರಿ ನೀಡಲಾಗಿದೆ.

600 ಗಿಡಗಳ ನಾಟಿ
ಪ್ರಕೃತಿ ಸೊಬಗಿನ ರಕ್ಷಣೆಯೊಂದಿಗೆ ಪರಿಸರ ಸ್ನೇಹಿಯಾಗಿ ಟ್ರೀ ಪಾರ್ಕ್‌ ನಿರ್ಮಾಣಗೊಳ್ಳುತ್ತಿದೆ.  ಮೀಸಲು ಅರಣ್ಯದ ಯಾವುದೇ ಗಿಡ-ಮರಗಳಿಗೆ ಹಾನಿ ಮಾಡದೇ ಸಸ್ಯ ರಾಶಿಗಳ ಮಧ್ಯೆ ಮಳೆಗಾಲದಲ್ಲಿ ಔಷಧೀಯ ಸಸ್ಯಗಳು ಸೇರಿದಂತೆ ಸುಮಾರು 600 ಗಿಡಗಳನ್ನು ನೆಡುವ ಉದ್ದೇಶವನ್ನು ಹೆಬ್ರಿ ಅರಣ್ಯ ಇಲಾಖೆ ಹೊಂದಿದೆ. ಬಣ್ಣಬಣ್ಣದ ಹೂವು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಮರಗಳನ್ನು ಬೆಳೆದು ಸುಂದರ ಉದ್ಯಾನವನ ಸ್ಥಾಪಿಸಲಾಗುತ್ತಿದೆ.

2019ಕ್ಕೆ ಕಾಮಗಾರಿ ಪೂರ್ಣ
ಮೊದಲ ಹಂತ ಕಾಮಗಾರಿ 2019ರ ಮಾರ್ಚ್‌ ವೇಳೆಗೆ  ಪೂರ್ಣವಾಗಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮಳೆಗಾಲದಲ್ಲಿ ಹೂ ಗಿಡಗಳು, ಔಷದೀಯ ಸಸ್ಯಗಳನ್ನು ನೆಡಲಾಗುವುದು. ಮುಂದಿನ ಐದು ವರ್ಷದಲ್ಲಿ ಪೂರ್ಣ ಪ್ರಮಾಣದ ವೃಕ್ಷೋದ್ಯಾನವನ ಸಿದ್ಧಗೊಳ್ಳಲಿದೆ.
– ಸುಬ್ರಹ್ಮಣ್ಯ ಆಚಾರ್ಯ
ವಲಯ ಅರಣ್ಯ ಅಧಿಕಾರಿ, ಹೆಬ್ರಿ

ಕೊರತೆ ನೀಗಿದೆ
ಈಗಾಗಲೇ ಕೂಡ್ಲು ತೀರ್ಥ,ಜೋಮ್ಲು ತೀರ್ಥ,ವರಂಗ ಕೆರೆ ಬಸದಿ ಮೂಲಕ ಪ್ರವಾಸಿತಾಣವಾಗಿ ಗುರುತಿಸಿಕೊಂಡ ಹೆಬ್ರಿಯಲ್ಲಿ ವೃಕ್ಷೋದ್ಯಾನವನದ ಕೊರತೆಯಿತ್ತು . ಅದು ನಿರಂತರ ಪ್ರಯತ್ನದ ಮೂಲಕ ಪೂರ್ಣ ಗೊಂಡಿದೆ. 
– ಜಯಕರ ಪೂಜಾರಿ
ಅಧ್ಯಕ್ಷರು, ಗ್ರಾಮ ಅರಣ್ಯ ಸಮಿತಿ

Advertisement

– ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next