ಅದು ವಿಶಾಲವಾದ, ವಿಸ್ತಾರವಾದ ಜಾಗ. ನೋಟ ಹಾಯಿಸಿದಷ್ಟೂ ಕೊನೆಯೇ ಇಲ್ಲವೆಂಬಂತೆ. ಅಲ್ಲಿ ಮಧ್ಯದಲ್ಲಿ ನಿಂತು ಸುತ್ತು ನೋಡಿದರೆ ಬರೀ ಬಿಳಿಯ ಬಣ್ಣದ ನೆಲ. ಪ್ರಕೃತಿಯ ಇನ್ನೊಂದು ವಿಸ್ಮಯ ಕಣ್ಣ ಮುಂದಿತ್ತು. ಅಗಾಧ ಸಮುದ್ರ, ಮರುಭೂಮಿಯನ್ನೇ ಕಂಡ ನಮಗೆ ಹೀಗೂ ಒಂದು ಜಾಗವಿರವಬಹುದೇ ಎಂದು ಆಶ್ಚರ್ಯವಾಗದೇ ಇರದು. ಒಂದು ರೀತಿಯಲ್ಲಿ ಇದು ಉಪ್ಪಿನ ಮರುಭೂಮಿ. ಚಪ್ಪಟೆಯಾಕಾರದಲ್ಲಿರುವ ಈ ಸ್ಥಳವು ಸಾಲ್ಟ್ ಲ್ಯಾಂಡ್ ಎಂದೇ ಪ್ರಸಿದ್ಧಿ. ಉಪ್ಪುಭೂಮಿಯ ಕೌತುಕದ ಕಥನ ಇಲ್ಲಿದೆ…
ಈ ಭೂಮಿಯ ಮೇಲಿರುವ ವಿಸ್ಮಯಗಳು ಮಾನವನ ಊಹೆಗೆ ನಿಲುಕದಂತಹ, ಸೃಷ್ಟಿಗೆ ಎಟುಕದಂತಹ, ಅದೆಷ್ಟು ಜನ್ಮಗಳನ್ನು ಎತ್ತಿದರೂ ನೋಡಿ ಮುಗಿಸಲಿಕ್ಕೆ ಅಸಾಧ್ಯವಾಗಿರುವಂತಹ ಬೆರಗನ್ನು ತುಂಬಿಕೊಂಡಿವೆ. ನಾವು ಅಮೆರಿಕದ ಮಧ್ಯಪಶ್ಚಿಮ ಭಾಗದಲ್ಲಿ ವಾಸವಿದ್ದಾಗ ಮನೆಯ ಮುಂದಿದ್ದ ಕೆರೆ ಚಳಿಗಾಲದಲ್ಲಿ ಹಿಮಗಟ್ಟುತ್ತಿತ್ತು. ಬೇಸಗೆಯಲ್ಲಿ ಮೈದುಂಬಿ ಹರಿಯುತ್ತಿದ್ದ ಈ ನೀಲಿ ನೀರಿನ ಕೆರೆ ಅಲ್ಲಿದ್ದ ಚಳಿಯ ತಾಪಮಾನಕ್ಕೆ ನೀರೆಲ್ಲ ಹಿಮವಾಗಿ ಅದರ ಮೇಲೆ ಓಡಾಡಿದರೂ ಒಂದಿನಿತು ಬಿರುಕು ಬಿಟ್ಟುಕೊಳ್ಳದಷ್ಟು ಗಟ್ಟಿಯಾಗುತ್ತಿತ್ತು. ಅದೇ ಮೊದಲ ಬಾರಿಗೆ ನೀರು ಈ ಪರಿಯಾಗಿ ಹಿಮಗಟ್ಟುವುದನ್ನು ನೋಡಿದ ನನಗೇ ವಿಶ್ವದ ಅದ್ಭುತವೊಂದನ್ನು ನೋಡಿದಂತಹ ಅಚ್ಚರಿ.
ಧೋ ಎಂದು ಹಿಮ ಸುರಿದಾಗ ಶರತ್ಕಾಲಕ್ಕೆ ಎಲೆ ಸುರಿಸಿ ಬೋಳಾಗಿರುವ ಮರದ ರೆಂಬೆ ಕೊಂಬೆಗಳ ಮೇಲೆ ಶುಭ್ರ ಬಿಳಿ ಹಿಮ ಬಿದ್ದು ದೇವಲೋಕದಲ್ಲಿರುವ ಮರದಂತೆ ಹೊಳೆಯುತ್ತದಲ್ಲ ಅದನ್ನು ನೋಡಿದ್ದು ಇನ್ನೊಂದು ಅಚ್ಚರಿ. ಚಾರಣಕ್ಕೆ ಹೋದಾಗ ಹಸುರು ವನರಾಶಿಯ ಮಧ್ಯದಲ್ಲಿ ಪುಟ್ಟ ಜಿಂಕೆಮರಿಯೊಂದು ಪಿಳಿಪಿಳಿ ಕಣ್ಣು ಬಿಡುತ್ತ ನಿಂತಿದ್ದನ್ನು ನೋಡಿದ್ದು ಮತ್ತೂಂದು ಅಚ್ಚರಿ. ಹೀಗೆ ಎಲ್ಲವನ್ನು ಹೇಳುತ್ತ ಹೋದರೆ ಅದೆಷ್ಟು ಉದ್ದದ ಪಟ್ಟಿಯಾಗುವುದೋ ಗೊತ್ತಿಲ್ಲ. ನೀರಿನ ರುಚಿ ಗೊತ್ತಿಲ್ಲದೇ ಇರುವವನಿಗೆ ಕವಿತೆಯ ರುಚಿ ಗೊತ್ತಿರಲು ಹೇಗೆ ಸಾಧ್ಯ ಎಂದು ಬೇಂದ್ರೆಯವರು ಹೇಳುತ್ತಾರಲ್ಲ ಹಾಗೇ ಹೂವರಳುವುದರಲ್ಲಿ ವಿಸ್ಮಯವನ್ನು ಕಾಣದವನಿಗೆ ಯಾವುದೂ ಸಹ ಅಚ್ಚರಿ ಎಂದೆನ್ನಿಸಲಿಕ್ಕೆ ಸಾಧ್ಯವೇ ಇಲ್ಲವೆನೋ..
ವಸಂತ ಮಾಸದ ಚಿಗುರೆಲೆಗಳನ್ನು, ಹುಲ್ಲಿನ ಮಧ್ಯದಲ್ಲಿ ಪುಟ್ಟದಾಗಿ ಅರಳಿರುವ ಬಿಳಿ ಹೂವನ್ನು ಆಸ್ವಾದಿಸುವ ನನಗೆ ಕಾಣುವ ಪ್ರತಿಯೊಂದು ಹೊಸ ಕೌತುಕವೂ ಅಚ್ಚರಿಯೇ.. ಇಷ್ಟೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ ಮೈಲುಗಟ್ಟಲೇ ಹಬ್ಬಿದ ಉಪ್ಪುಪ್ಪಾದ ಚಪ್ಪಟೆ ಭೂಮಿಯನ್ನು ನೋಡಿದಾಗಲೂ ಇಷ್ಟೇ ಅಚ್ಚರಿ ನನ್ನೊಳಗೆ ತುಂಬಿಕೊಂಡಿತ್ತು. ಅದುವರೆಗೂ ಭೂಮಿಯೆಂದರೆ ಕಪ್ಪು, ಕೆಂಪು, ಅಥವಾ ಕಂದು ಬಣ್ಣದ, ಒಣಗಿದ, ಹಸಿಯಾದ ಅಥವಾ ಬಿರುಕು ಬಿಟ್ಟ, ಹೂವು, ಗಿಡಮರ, ನೀರು, ಬೆಟ್ಟ ಗುಡ್ಡ, ರಸ್ತೆ, ಹಿಮ, ಅಥವಾ ಕಟ್ಟಡಗಳನ್ನು ಹೊಂದಿದ ಈ ಜಗತ್ತಿನ ಮೂಲಾಧಾರ ಎಂದಷ್ಟೇ ಗೊತ್ತಿತ್ತು.
ಅದರಾಚೆಗೆ ಭೂಮಿಯೆಂದರೆ ಈ ಮೇಲೆ ಬಣ್ಣಿಸಿದ ಎಲ್ಲಕ್ಕಿಂತ ಹೊರತಾಗಿರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ. ಕೆಲಸದ ಮೇರೆಗೆ ನಾವು ಶಿಕಾಗೋದ ಬ್ಲೂಮಿಂಗ್ಟನ್ ಎಂಬ ಪುಟ್ಟ ಹಳ್ಳಿಯಿಂದ ಅಮೆರಿಕದ ಪ್ರಸಿದ್ಧ ನಗರ ಸ್ಯಾನ್‌ಫ್ರಾನ್ಸಿಸ್ಕೋಗೆ ಬರಬೇಕಿತ್ತು. ಸುಮಾರು ಮೂರು ಸಾವಿರ ಮೈಲಿಗಳನ್ನು ಕಾರಿನಲ್ಲಿ ಕೇವಲ ಮೂರೇ ದಿನದಲ್ಲಿ ಪ್ರಯಾಣಿಸಿದ್ದೇವು. ಆಗ ಮಾರ್ಗ ಮಧ್ಯದಲ್ಲಿ ಸಿಕ್ಕಿದ್ದೇ ಈ ಚಪ್ಪಟೆ ಉಪ್ಪು ಭೂಮಿ.
ಇಂಗ್ಲಿಷ್‌ನಲ್ಲಿ ಸಾಲ್ಟ್ ಫ್ಲಾಟ್ ಲ್ಯಾಂಡ್ ಎಂದು ಕರೆಯುತ್ತಾರೆ. ಯೂಟಾ ರಾಜ್ಯದಲ್ಲಿ ನೆವಾಡಾ ಗಡಿಭಾಗದಲ್ಲಿ, ಸರಿಯಾಗಿ ಹೇಳಬೇಕೆಂದರೆ ಸಾಲ್ಟ್ ಲೇಕ್ ನಗರದಿಂದ ಸುಮಾರು ನೂರು ಮೈಲಿಗಳಷ್ಟು ಅಂತರದಲ್ಲಿ ಬಾನವಿಲ್ಲೇ ಸಾಲ್ಟ್ ಫ್ಲಾಟ್ಸ್ ಎಂಬ ತಾಣ ಸಿಗುತ್ತದೆ. ಅದರ ಬಗ್ಗೆಯೇ ನಾನಿವತ್ತು ಹೇಳಲಿಕ್ಕೆ ಹೊರಟಿದ್ದು.
ಮರುಭೂಮಿಯಂತಹ ಪ್ರದೇಶಗಳಲ್ಲಿ ಉಪ್ಪು ಮತ್ತು ಇತರೆ ಖನಿಜಗಳು ಸೇರಿಕೊಂಡು ಸಾಲ್ಟ್ ಪ್ಯಾನ್ ಎಂದರೆ ಉಪ್ಪು ಪ್ರದೇಶ ನಿರ್ಮಾಣವಾಗುತ್ತದೆ. ನೋಡಲಿಕ್ಕೆ ಇದು ಅಚ್ಚ ಬಿಳಿಯ ಬಣ್ಣದಲ್ಲಿರುತ್ತದೆ. ಸಮುದ್ರವೇ ಇಂಗಿ ಭೂಮಿಯೊಳಗೆ ಸೇರಿಕೊಂಡಿದೆಯೆನೋ ಎನ್ನುವಷ್ಟು ಬಿಳಿ. ಇದು ಹೂ ಹಾಸಿಗೆಯಲ್ಲ, ಉಪ್ಪಿನ ಹಾಸಿಗೆ. ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಕೆರೆಯಾಗಿದ್ದ ಬಾನುವೆಲ್ ಎಂಬ ಹೆಸರಿನ ಕೆರೆ ಹಿಮಯುಗದ ಕಾಲದಲ್ಲಿ ಇಂಗಲಿಕ್ಕೆ ಶುರುವಾಗಿ ಕೊನೆಗೆ ಒಂದು ಹನಿ ನೀರಿಲ್ಲದಂತೆ ಭೂಮಿಯೊಳಗೆ ಇಂಗಿದ ಪರಿಣಾಮವೇ ಈ ಚಪ್ಪಟೆ ಉಪ್ಪು ಭೂಮಿ.
ಒಂದು ಕಾಲದಲ್ಲಿ ಯೂಟಾ ರಾಜ್ಯದ ಮೂರನೇ ಒಂದು ಭಾಗವನ್ನು ಆಕ್ರಮಿಸಿಕೊಳ್ಳುವಷ್ಟು ದೊಡ್ಡದಾಗಿತ್ತು ಈ ಕೆರೆ! ಸದ್ಯಕ್ಕೆ ಈ ಚಪ್ಪಟೆ ಭೂಮಿ ಸುಮಾರು ಮೂವತ್ತು ಸಾವಿರ ಎಕ್ರೆಯಷ್ಟು ಜಾಗದಲ್ಲಿ ಹಬ್ಬಿದ್ದು ಹನ್ನೆರಡು ಮೈಲಿಗಳಷ್ಟು ಉದ್ದ ಮತ್ತು ಐದು ಮೈಲಿಗಳಷ್ಟು ಅಗಲವಿದೆ. ಮಧ್ಯದ ಭಾಗದಲ್ಲಿ ಹೆಪ್ಪುಗಟ್ಟಿದ ಉಪ್ಪಿನ ದಪ್ಪ ಐದು ಅಡಿಗಳಷ್ಟು! ಇದರ ಆಧಾರದ ಮೇಲೆಯೇ ಭೂಮಿಯ ಮೇಲಿನ ಹೆಪ್ಪುಗಟ್ಟಿದ್ದ ಈ ಉಪ್ಪಿನ ಸಾಂದ್ರತೆಯನ್ನೂ ಮತ್ತು ಒಂದು ಕಾಲದಲ್ಲಿ ಭವ್ಯವಾಗಿ ಹರಿಯುತ್ತಿದ್ದ ಬಾನುವೆಲ್ ಕೆರೆಯ ಅಗಾಧತೆಯನ್ನೂ ನೀವು ಊಹಿಸಿಕೊಳ್ಳಬಹುದು. ಇದನ್ನು ಬಿಟ್ಟರೆ ಹೆಚ್ಚೇನು ಇಲ್ಲ ಈ ಜಾಗದಲ್ಲಿ. ಆದರೆ ಈ ಉಪ್ಪುಭೂಮಿಯೊಂದೇ ಸಾಕು ನಮ್ಮ ಮನಸ್ಸನ್ನು ಸೆಳೆಯಲು. ಅದರಲ್ಲೂ ಈ ಜಾಗದಲ್ಲಿ ಮನೋಹರವಾಗಿ ಮೂಡುವ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲೇ ಬೇಕು. ವಿಚಿತ್ರವೆಂದರೆ ಚಳಿಗಾಲದಲ್ಲಿ ಇಲ್ಲಿ ಹೆಪ್ಪುಗಟ್ಟಿರುವ ಉಪ್ಪು ಕರಗಿ ಸುಮಾರು ಒಂದು ಅಂಗುಲದಷ್ಟು ನೀರಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗ್ಳಲ್ಲಿ ಫೋಟೋ ಹಾಕಬೇಕೆಂದು ಯಾರು ಎಂದೂ ಕಂಡಿರದಂತಹ ಚೆಂದನೆಯ ಜಾಗವನ್ನು ಹುಡುಕಿಕೊಂಡು ಹೋಗಿ ಅಲ್ಲಿ ಬಗೆಬಗೆಯ ಧಿರಿಸಿನಲ್ಲಿ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳುವುದು ಅಚ್ಚರಿಯೇನಿಲ್ಲ. ಹಾಗಾಗಿಯೇ ಈ ಜಾಗ ಇನ್‌ಸ್ಟಾಗ್ರಾಂ ಪ್ರಿಯರಿಗೆ ಅಚ್ಚುಮೆಚ್ಚು.
ಕಣ್ಣು ಹಾಯಿಸಿದಷ್ಟು ಅಚ್ಚ ಬಿಳಿಯ ಭೂಮಿ ಕಾಲಡಿಯಲ್ಲಿ, ಮೇಲೆ ನೀಲಿ ಮುಗಿಲು, ದೂರದಲ್ಲಿ ಭವ್ಯವಾಗಿ ನಿಂತಿರುವ ರಿಷೆಲ್ ಪರ್ವತ. ಇಷ್ಟು ಸಾಕಲ್ಲವೇ ಒಂದೊಳ್ಳೆಯ ಫೋಟೋ ತೆಗೆಯಲಿಕ್ಕೆ? ಹಾಗಾಗಿ ಈ ಜಾಗಕ್ಕೆ ಸಾವಿರಾರು ಜನ ಪ್ರವಾಸಿಗರು ಭೇಟಿ ಕೊಡುತ್ತಾರೆ. ಉಚಿತ ಪ್ರವೇಶ ಮತ್ತು ಕಾರನ್ನು ಎಲ್ಲಿ ಬೇಕಾದಲ್ಲಿ ನಿಲ್ಲಿಸುವ ಸ್ವಾತಂತ್ರ್ಯ ಇದೆಯಾದ್ದರಿಂದ ಪಾರ್ಕಿಂಗ್ ಕಟ್ಟುಪಾಡುಗಳಿಲ್ಲ.
ನಾವು ಹೋದಾಗ ಸಂಜೆಯಾಗಿತ್ತು. ಇನ್ನೇನು ಸೂರ್ಯ ಮುಳುಗುವ ಸಮಯ. ಪರ್ವತದ ಕೆಳಗಿನಿಂದ ಸೂರ್ಯ ಜಾರುತ್ತಿದ್ದರೆ ಇಲ್ಲಿ ಭೂಮಿ ಅವನನ್ನು ಬೀಳ್ಕೊಡಲಿಕ್ಕೆ ಮುನಿದುಕೊಂಡು ನಿಂತಂತೆ ಕಾಣಿಸುತ್ತಿತ್ತು. ಅಲ್ಲಲ್ಲಿ ಒಂದಿಷ್ಟು ಜನರನ್ನು ಹೊರತುಪಡಿಸಿದರೆ ಇಡೀ ಜಾಗ ನಮ್ಮದೇ ಎನ್ನುವಷ್ಟು ನಿರ್ಜನವಾಗಿತ್ತು. ಈ ಜಾಗದ ಮಧ್ಯದಲ್ಲಿ ನಿಂತು ಸುತ್ತುವರಿದ ಬಿಳಿಯ ಭೂಮಿಯನ್ನು ನೋಡುತ್ತಿದ್ದರೆ ಯಾವುದೋ ಬೇರೆಯ ಲೋಕಕ್ಕೆ ಬಂದಿಳಿದಿದ್ದೇವೆನೋ ಎಂಬಂತಹ ಹೊಸ ಬಗೆಯ ಅನುಭವ.
ಬಾನುವೆಲ್ ಸ್ಪೀಡವೇ ಎಂದೇ ಹೆಸರಾಗಿರುವ ಈ ಜಾಗದಲ್ಲಿ ಅನೇಕ ಬಗೆಯ ರೇಸಿಂಗ್ ಚಟುವಟಿಕೆಗಳು ನಡೆಯುತ್ತವೆ. ಕಾರ್ ರೇಸಿಂಗ್ ಸ್ಪರ್ಧೆ, ಮೋಟಾರ್ ಸೈಕಲ್‌ಗಳ ಸ್ಪೀಡ್ ಟೆಸ್ಟಿಂಗ್ ಇನ್ನು ವಿಶ್ವದಾಖಲೆಗಳಿಗಾಗಿ ನಡೆಸುವ ಸ್ಪರ್ಧೆಗಳು ಇತ್ಯಾದಿ…2004 ರಲ್ಲಿ ನಾಸಾ ತನ್ನ ಸ್ಟಾರಡಸ್ಟ್ ಬಾಹ್ಯಾಕಾಶ ನೌಕೆಯ ಮರಳಿ ಬರುವ ಮಾದರಿಗಳನ್ನು ಈ ಬಾನುವೆಲ್ ಪ್ರದೇಶದಲ್ಲಿ ಲ್ಯಾಂಡ್ ಆಗುವಂತೆ ಬಿಡುಗಡೆ ಮಾಡಿತ್ತು.
ವಿಮಾನದಲ್ಲಿ ಕೂತಾಗ ಕೆಳಗೆ ಬಿಳಿಯ ಸಮುದ್ರದಂತೆ ಕಾಣಿಸುವ ಈ ಜಾಗ ತನ್ನ ವಿಭಿನ್ನ ರೂಪದಿಂದಾಗಿ, ವರ್ಷಗಳ ಕಾಲ ಅದೇ ವಿದ್ಯಮಾನವನ್ನು ಕಾಪಿಟ್ಟುಕೊಂಡು ಪೊರೆಯುತ್ತಿರುವುದಕ್ಕಾಗಿ ಪ್ರಸಿದ್ಧಿಯಾಗಿದೆ. ಆದರೆ ಹೆಚ್ಚುತ್ತಿರುವ ರೇಸಿಂಗ್ ಸ್ಪರ್ಧೆಗಳಿಂದಾಗಿ ಈ ಜಾಗ ಪರಿಸರ ಹಾನಿಗೊಳಗಾಗುತ್ತಿದೆ. ಈ ಭೂಮಿಯ ಮಧ್ಯದಲ್ಲಿರುವ ನೀಲಿ ನೀರಿನ ಕೆನಾಲುಗಳಲ್ಲಿ ಕೆಲವು ಕೈಗಾರಿಕೆಗಳಿಂದ ಬರುವ ಪೊಟ್ಯಾಶ್ ಅನ್ನು ಬಿಡಲಾಗುತ್ತದೆ. ಇದರಿಂದ ಉಪ್ಪಿನ ಸಾಂದ್ರತೆ ನಿಧಾನವಾಗಿ ಶಿಥಿಲವಾಗುತ್ತ ಹೋಗುತ್ತಿದೆ ಮತ್ತು ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಮನುಷ್ಯ ಇದರ ಮೇಲೆ ಕಾಲಿಡದಂತಾಗುತ್ತದೆ ಎಂಬುದು ಪ್ರಕೃತಿಪ್ರಿಯರ ಕಳಕಳಿ.
*ಸಂಜೋತಾ ಪುರೋಹಿತ್