Advertisement

ಸಾಲಿಗ್ರಾಮ ಜಂಕ್ಷನ್‌ ಚರ್ಚೆ: ಡಿವೈಡರ್‌ ಸ್ಥಳಾಂತರಕ್ಕೆ ಮನವಿ

12:14 PM May 02, 2022 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ಸಾಮಾನ್ಯ ಸಭೆ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಉದಯವಾಣಿ ಸುದಿನ ಜಂಕ್ಷನ್‌-ಟೆನ್ಶನ್‌ ಕಾಲಂನಲ್ಲಿ ವರದಿ ಮಾಡಿದ ಸಾಲಿಗ್ರಾಮ ಜಂಕ್ಷನ್‌ ಸಮಸ್ಯೆ ಕುರಿತು ವಿಸ್ಕೃತ ಚರ್ಚೆ ನಡೆಯಿತು.

Advertisement

ಪೇಟೆ ವಾರ್ಡ್‌ ಸದಸ್ಯೆ ರತ್ನಾ ನಾಗರಾಜ್‌ ಗಾಣಿಗ ವಿಷಯ ಪ್ರಸ್ತಾವಿಸಿ, ಸಾಲಿಗ್ರಾಮ ಜಂಕ್ಷನ್‌ನ ಡಿವೈಡರ್‌ನಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದು ಹತ್ತಾರು ಸಾವು-ನೋವು ಸಂಭವಿಸಿವೆ. ಮೂಲ ಯೋಜನೆಯ ಪ್ರಕಾರ ಸಾಲಿಗ್ರಾಮ ಜಂಕ್ಷನ್‌ನ ಡಿವೈಡರ್‌ ಕಾರ್ಕಡ ತಿರುವಿನ ಬಳಿ ನಿರ್ಮಾಣವಾಗಬೇಕಿತ್ತು. ಅಲ್ಲಿ ಡಿವೈಡರ್‌ ನಿರ್ಮಾಣವಾಗಿದ್ದರೆ ಕಾರ್ಕಡ ಭಾಗದವರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಸಮಸ್ಯೆ ದೂರವಾಗುತಿತ್ತು ಹಾಗೂ ಒಳಪೇಟೆಗೆ ಬರುವವರು ರಾಷ್ಟ್ರೀಯ ಹೆದ್ದಾರಿ ಮೂಲಕ ಸುತ್ತು ಬಳಸಿ ಬರುವ ಅಗತ್ಯವಿರಲಿಲ್ಲ. ಆದರೆ ಮೂಲ ಯೋಜನೆಯನ್ನು ಗಾಳಿಗೆ ತೂರಿ ಈಗಿರುವ ಕಡೆ ಶಾಶ್ವತ ಡಿವೈಡರ್‌ ನಿರ್ಮಿಸಿದ್ದರಿಂದ ಅಪಘಾತ ವಲಯವಾಗಿ ಗುರುತಿಸಿಕೊಂಡಿದೆ. ಮುಂದಾದರೂ ಈಗಿರುವ ಜಂಕ್ಷನ್‌ ಕೇವಲ ಗುರುನರಸಿಂಹ ದೇಗುಲದ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ಬಳಸಿಕೊಂಡು ಕಾರ್ಕಡ ತಿರುವಿನ ಸಮೀಪ ಹೊಸ ಡಿವೈಡರ್‌ ನಿರ್ಮಿಸಬೇಕು ಎಂದರು. ಈ ಬಗ್ಗೆ ಸದಸ್ಯ ಕಾರ್ಕಡ ರಾಜು ಪೂಜಾರಿ ಮೊದಲಾದ ವರು ಸಹಮತ ವ್ಯಕ್ತಪಡಿಸಿದರು. ಸಂಬಂಧ ಪಟ್ಟ ಇಲಾಖೆಗೆ ಈ ಬಗ್ಗೆ ಮನವಿ ಸಲ್ಲಿಸಿ ಕ್ರಮಕೈಗೊಳ್ಳುವುದಾಗಿ ತೀರ್ಮಾನ ಕೈಗೊಳ್ಳಲಾಯಿತು.

ಚರ್ಚೆ ಅನುಷ್ಠಾನವಾಗುವುದಿಲ್ಲ

ಪ.ಪಂ. ಸಾಮಾನ್ಯ ಸಭೆಗಳಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಿ ನಿರ್ಣಯ ಕೈಗೊಳ್ಳಲಾಗುತ್ತದೆ. ಆದರೆ ಮುಖ್ಯಾಧಿಕಾರಿಗಳು ಆ ನಿರ್ಣಯಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಅನುಷ್ಠಾನವಾಗುವಂತೆ ಮಾಡುವಲ್ಲಿ ಹಿಂದುಳಿದಿದ್ದಾರೆ.

ಇದರಿಂದಾಗಿ ಅಭಿವೃದ್ಧಿ ಹಾಗೂ ಆಡಳಿತ ಯಂತ್ರದ ಕ್ರಿಯಾಶೀಲತೆಗೆ ಹಿನ್ನಡೆಯಾಗಿದೆ ಎಂದು ಸದಸ್ಯ ಶ್ಯಾಮ್‌ಸುಂದರ್‌ ನಾೖರಿ ಆರೋಪಿಸಿದರು. ರಾ.ಹೆದ್ದಾರಿಯ 40 ಮೀ ಒಳಗೆ ಕಟ್ಟಡ ನಿರ್ಮಾಣ ಪರವಾನಿಗೆ ನೀಡಬಾರದೆಂದು ಕಾನೂನಿದೆ ಹಾಗೂ ಈ ಬಗ್ಗೆ ಕೌನ್ಸಿಲ್‌ ನಿರ್ಣಯ ಕೂಡ ಆಗಿದೆ. ಆದರೆ ಸಾಲಿಗ್ರಾಮದಲ್ಲಿ ಕೆಲವೆಡೆ ನಿಯಮ ಮೀರಿ 40 ಮೀಟರ್‌ನೊಳಗೆ ಪರವಾನಿಗೆ ನೀಡಲಾಗುತ್ತಿದೆ. ಇದರಿಂದ ಹೆ„ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ ಎಂದು ಶ್ಯಾಮ್‌ಸುಂದರ್‌ ತಿಳಿಸಿದರು. ದಾರಿದೀಪ ನಿರ್ವಹಣೆಯ ಬಗ್ಗೆ ಮೂರುಬಾರಿ ಟೆಂಡರ್‌ ಕರೆದರೂ ಒಂದೇ ಟೆಂಡರ್‌ ಸಲ್ಲಿಕೆಯಾಗಿದ್ದು ಅದನ್ನೆ ಅಂಗೀಕರಿಸಲಾಯಿತು. ಇನ್ನುಳಿದಂತೆ ರಸ್ತೆ,ಚರಂಡಿ,ತ್ಯಾಜ್ಯ ವಿಲೇವಾರಿ ಅನುದಾನ ಹಂಚಿಕೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಉಪಾಧ್ಯಕ್ಷೆ ಅನಸೂಯಾ ಹೇರ್ಳೆ, ಮುಖ್ಯಾಧಿಕಾರಿ ಶಿವ ನಾಯ್ಕ ಹಾಗೂ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

ಜಿಲ್ಲಾಧಿಕಾರಿಯ ಭೇಟಿ ಮಾಹಿತಿ ಇಲ್ಲ

ಪ.ಪಂ. ವ್ಯಾಪ್ತಿಯ ವಿವಿಧ ಜಮೀನುಗಳ ಪರಿಶೀಲನೆಗೆ ಹಾಗೂ ಉಳ್ತೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಾದಿರಿಸಿದ ಸ್ಥಳ ವೀಕ್ಷಣೆಗೆ ಉಡುಪಿ ಜಿಲ್ಲಾ ಧಿಕಾರಿ ಇತ್ತೀಚೆಗೆ ಪ.ಪಂ. ಭೇಟಿ ನೀಡಿದ್ದರು. ಆದರೆ ಈ ಬಗ್ಗೆ ಪ.ಪಂ. ಸದಸ್ಯರಿಗೆ ಯಾವುದೇ ಮಾಹಿತಿ ಇರಲಿಲಲ್ಲ. ಈ ರೀತಿಯ ಶಿಷ್ಟಾಚಾರ ಉಲ್ಲಂಘನೆ ಸರಿಯಲ್ಲ ಎಂದು ಹಿರಿಯ ಸದಸ್ಯ ಶ್ರೀನಿವಾಸ್‌ ಅಮೀನ್‌ ಅಸಮಾಧಾನ ವ್ಯಕ್ತಪಡಿಸಿದರು.

ಹಾಪ್‌ಕಾಮ್ಸ್‌ ಮಳಿಗೆಗೆ ಅನುಮತಿ

ಜಿಲ್ಲಾ ಹಾಪ್‌ಕಾಮ್ಸ್‌ ವತಿಯಿಂದ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಸಾಲಿಗ್ರಾಮದಲ್ಲಿ ಸ್ಥಳಾವಕಾಶಕ್ಕಾಗಿ ಕೋರಿರುವರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಹಾಪ್‌ಕಾಮ್ಸ್‌ ನ್ಯಾಯಯುತ ದರದಲ್ಲಿ ಹಣ್ಣು ಮತ್ತು ತರಕಾರಿ ವಿಕ್ರಯಿಸುವುದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ. ಸ್ಥಳ ನೀಡುವಂತೆ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next