Advertisement
ಕೋಟ: ಸಾಲಿಗ್ರಾಮ ಮುಖ್ಯ ಪೇಟೆ ಅಭಿವೃದ್ಧಿಯ ಪ್ರಸ್ತಾವನೆ ಎಲ್ಲಿಗೆ ಹೋಯಿತು? ಇದೇ ಪ್ರಶ್ನೆ ಪ್ರಸ್ತುತ ಚರ್ಚೆಯಲ್ಲಿದೆ. ಪೇಟೆ ಕೇವಲ ಪಟ್ಟಣ ಪಂಚಾಯತ್ ವ್ಯಾಪ್ತಿಗಷ್ಟೇ ಮುಖ್ಯವಲ್ಲ. ಬದಲಾಗಿ ಸುತ್ತಲಿನ ಹಲವು ಗ್ರಾಮ ಗಳಿಗೆ ಮುಖ್ಯವಾದ ಪೇಟೆ. ಅದರಲ್ಲೂ ಕಾರಂತ ಬೀದಿ ಸದಾ ವಾಣಿಜ್ಯ ಚಟುವಟಿಕೆಗಳ ತಾಣ. ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಯಿಂದ ಹಿಡಿದು ಔಷಧದ ಅಂಗಡಿವರೆಗೂ ಎಲ್ಲವೂ ಇಲ್ಲಿವೆ.
ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು 503 ವಾಣಿಜ್ಯ ಸಂಕೀರ್ಣಗಳಿವೆ. 8 ಖಾಸಗಿ ಕ್ಲಿನಿಕ್‌ಗಳು, 4 ಮೆಡಿಕಲ್ ಶಾಪ್, 2 ಲ್ಯಾಬ್‌ಗಳಲ್ಲಿ ಹೆಚ್ಚಿನವು ಕಾರಂತ ಬೀದಿಯಲ್ಲಿದೆ. 4 ರಾಷ್ಟ್ರೀಕೃತ ಬ್ಯಾಂಕ್, 11 ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತಿವೆೆ. ಪುರಾಣ ಪ್ರಸಿದ್ಧ ಆಂಜನೇಯ ದೇವಸ್ಥಾನ ಕೂಡ ಇಲ್ಲಿದೆ. ಐರೋಡಿ, ಪಾಂಡೇಶ್ವರ, ಕೋಡಿ, ಕೋಟ, ಕೋಟತಟ್ಟು, ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಜನರು ಈ ಪೇಟೆಯನ್ನೇ ಆಶ್ರಯಿಸಿದ್ದಾರೆ. ಹೀಗಾಗಿ ಅತೀ ಹೆಚ್ಚಿನ ಜನಸಂಚಾರ ಸಾಮಾನ್ಯ. ಆದರೆ ಇರುವ ಸ್ಥಳವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯೋಜನೆಗಳನ್ನು ರೂಪಿಸಿಲ್ಲ. ಆದ ಕಾರಣ, ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿವೆ. 2002-2004ರಲ್ಲಿ ಸುಮಾರು 2 ಕೋ.ರೂ. ವೆಚ್ಚದಲ್ಲಿ ಈ ರಸ್ತೆ ಕಾಂಕ್ರೀಟ್, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಮೀನು ಮಾರುಕಟ್ಟೆ, ಶೌಚಾಲಯ ಹೊರತುಪಡಿಸಿದರೆ ಪೇಟೆಯಲ್ಲಿ ಬೇರೆ ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲ.
Related Articles
ಪೇಟೆಯ ಅಭಿವೃದ್ಧಿಯಾಗಬೇಕಿದ್ದರೆ ಒತ್ತುವರಿಯನ್ನು ತೆರವುಗೊಳಿಸಬೇಕು ಹಾಗೂ ರಸ್ತೆಯ ಮೇಲೆ ನಡೆಯುವ ವ್ಯಾಪಾರ ಚಟುವಟಿಕೆಗೆ ಕಡಿವಾಣ ಹಾಕಬೇಕು ಎನ್ನುವ ಸಲಹೆ ಪ್ರತಿ ಸಾಮಾನ್ಯ ಸಭೆಗಳಲ್ಲಿ ಕೇಳಿ ಬರುತ್ತದೆ. ಆದರೆ ಸರ್ವೆ ನಡೆಸಲು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಕ್ರಮಕೈಗೊಂಡಿಲ್ಲ ಎನ್ನುವ ಸಬೂಬು ಮೂರು ವರ್ಷಗಳಿಂದ ಪಟ್ಟಣ ಪಂಚಾಯತ್ ಆಡಳಿತ ವ್ಯವಸ್ಥೆ ಹೇಳುತ್ತಲೇ ಇದೆ. ಇದು ದಿನದೂಡುವ ವ್ಯಾಪಾರ ಎಂದು ಸ್ಪಷ್ಟವಾಗಿ ಅರಿವಿಗೆ ಬರುವಂಥದ್ದು. ಒಳರಸ್ತೆಯ ಮಧ್ಯ ಭಾಗದಿಂದ 9 ಮೀಟರ್ ಸ್ಥಳವನ್ನು ಬಿಟ್ಟು ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬೇಕಿದೆ. ಈ ನಿಯಮ ಪಟ್ಟಣ ಪಂಚಾಯತ್‌ಗೆ ತಿಳಿದಿರುವಂಥದ್ದೇ. ಒತ್ತುವರಿ ತೆರವುಗೊಳಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಬೇಕಾದ ಪಟ್ಟಣ ಪಂಚಾಯತ್ ಅಧಿಕಾರಿಗಳೇ ನಿಯಮ ಗೊತ್ತಿದ್ದೂ 2-3 ಮೀಟರ್‌ನೊಳಗೆ ಹೊಸ ಕಟ್ಟಡಕ್ಕೆ ಅವಕಾಶ ನೀಡುತ್ತಿರುವ ಆರೋಪ ಸಾರ್ವತ್ರಿಕವಾಗಿ ಕೇಳಿ ಬಂದಿದೆ. ಹೀಗಾದರೆ ವ್ಯವಸ್ಥೆಯನ್ನು ಸರಿಪಡಿಸುವವರಾರು ಎಂಬುದೇ ಯಕ್ಷಪ್ರಶ್ನೆ.
Advertisement
ಪೇಟೆಯ ಅಭಿವೃದ್ಧಿಗೆ ಏನೆಲ್ಲ ಮಾಡಬಹುದು?ಸರ್ವೆ ನಡೆಸಿ ಪಾದಚಾರಿ ರಸ್ತೆ ಹಾಗೂ ವಾಹನ ಪಾರ್ಕಿಂಗ್‌ಗೆ ಅಗತ್ಯವಿರುವಷ್ಟು ಸ್ಥಳವನ್ನು ಮೀಸಲಿಡಬೇಕು. ರಸ್ತೆ ಮೇಲಿನ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಕಾರಂತ ಬೀದಿಯ ಆರಂಭದಿಂದ ಅಂತ್ಯದ ತನಕ ಎರಡೂ ಕಡೆಗಳಲ್ಲಿ ಒಳಚರಂಡಿ ಅಭಿವೃದ್ಧಿಪಡಿಸಬೇಕು. ಮೀನುಮಾರುಕಟ್ಟೆ ಬಳಿ ಹಾಗೂ ಬಸ್ಸು ನಿಲ್ದಾಣದ ಬಳಿ ಹೈಮಾಸ್ಟ್ ದೀಪವನ್ನು ಅಳವಡಿಸಬೇಕು. ಈಗಿರುವ ಬಸ್ ನಿಲ್ದಾಣ ತೆರೆದ ಸ್ಥಿತಿಯಲ್ಲಿದ್ದು. ಮಳೆಗಾಲದಲ್ಲಿ ಪ್ರಯಾಣಿಕರಿಗೆ ನಿಲ್ಲಲು ಅನುಕೂಲವಾಗುವಂತೆ ಸುಸಜ್ಜಿತಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಸುತ್ತಲೂ ಇಂಟರ್‌ಲಾಕ್ ಅಳವಡಿಸಬೇಕು. ನಡೆದಾಡುವ ವಿಶ್ವಕೋಶ ಡಾ| ಶಿವರಾಮ ಕಾರಂತರು ತಮ್ಮ ಕೊನೆಯ ದಿನಗಳನ್ನು ಸಾಲಿಗ್ರಾಮದಲ್ಲಿ ಕಳೆದಿದ್ದರು. ಹೀಗಾಗಿ ಈ ಬೀದಿಗೆ ಕಾರಂತ ಬೀದಿ ಎಂದು ಹೆಸರಿಡಲಾಗಿದೆ. ಇಲ್ಲಿಗೆ ಪ್ರವೇಶವಾಗುವಲ್ಲಿ ಡಾ|ಶಿವರಾಮ ಕಾರಂತರ ಪ್ರತಿಮೆ ಸ್ಥಾಪನೆ ಬೇಡಿಕೆ ಕೂಡಲೇ ಈಡೇರಬೇಕು. ಶಾಸಕರ ಶಿಫಾರಸಿನ ಮೇರೆಗೆ 25 ಲಕ್ಷ ರೂ. ಇಂಟರ್‌ಲಾಕ್ ಅಳವಡಿಕೆಗೆ ಮಂಜೂರಾಗಿದೆ ಎಂಬ ಮಾಹಿತಿ ಲಭ್ಯವಿದ್ದು, ಇದರಲ್ಲಿ ಎಷ್ಟು ಕಾಮಗಾರಿ ನಡೆಯಲಿದೆ ಎಂದು ಕಾದು ನೋಡಬೇಕಿದೆ. ನಡೆದು ಹೋಗುವುದೇ ಕಷ್ಟ
ಕಾರಂತ ಬೀದಿಯಲ್ಲಿ ಸಂಜೆ ಹೊತ್ತು ನಡೆದು ಹೋಗುವುದೇ ದೊಡ್ಡ ಸಾಹಸ. ಒಂದೆಡೆ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿರುತ್ತದೆ. ಚತುಷcಕ್ರ ವಾಹನಗಳು, ಹಲವು ಬಾರಿ ಬಸ್‌ಗಳೂ ಈ ಬೀದಿಯಲ್ಲಿ ಸಾಗುವುದುಂಟು. ಅರ್ಧ ಕಿ.ಮೀ. ನಷ್ಟು ದೂರದ ಬೀದಿಯಲ್ಲಿ ವೈವಿಧ್ಯಮಯವಾದ ವಾಣಿಜ್ಯ ಮಳಿಗೆಗಳಿರುವುದರಿಂದ ಜನಸಂದಣಿಯೂ ಹೆಚ್ಚು. ಹಾಗಾಗಿ ವಾಹನಗಳ ನಿಯಂತ್ರಣ ಕಷ್ಟವಾಗಿದ್ದು, ಜನರು ತ್ರಾಸ ಪಡಬೇಕಿದೆ. ಇದರೊಂದಿಗೆ, ಕೆಲವೆಡೆ ವಾಹನಗಳನ್ನು ನಿಲ್ಲಿಸುವ ಕಾರಣ, ದೊಡ್ಡ ವಾಹನಗಳು ಬಂದರೆ ಟ್ರಾಫಿಕ್ ಜಾಮ್ ಸಾಮಾನ್ಯವಾಗಿ ಬಿಡುತ್ತದೆ. ಪ. ಪಂಚಾಯತ್, ಜನರ ಹಾಗೂ ವ್ಯಾಪಾರಸ್ಥರ ಸಲಹೆ ಪಡೆದು, ಯಾವ ರೀತಿಯಲ್ಲಿ ಎಲ್ಲರಿಗೂ ಅನುಕೂಲ ಕಲ್ಪಿಸಬಹುದು ಎಂದು ಯೋಚಿಸಿ ಕ್ರಿಯಾಶೀಲವಾಗಬೇಕಿದೆ.