ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಇತ್ತೀಚೆಗೆ ನಡೆಸಿದ ಪ್ರಾಪರ್ಟಿ ಎಕ್ಸ್‌ಪೋಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದು, 75 ಕೋಟಿ ರೂ. ಮೌಲ್ಯದ 225 ಫ್ಲ್ಯಾಟ್‌ಗಳು ಮಾರಾಟವಾಗಿವೆ. ಇದರಿಂದ ಉತ್ತೇಜಿತವಾಗಿರುವ ಮಂಡಳಿಯು ಶೇ.2ರ ರಿಯಾಯ್ತಿ ಸೌಲಭ್ಯವನ್ನು ಅ.4ರವರೆಗೆ ವಿಸ್ತರಿಸಿದೆ.
ಮಂಡಳಿಯು ಇದೇ ಮೊದಲ ಬಾರಿಗೆ ಕೆಂಗೇರಿ ಪ್ಲಾಟಿನಂನಲ್ಲಿ ಸೆ.22ರಿಂದ ಸೆ.24ರವರೆಗೆ ಆಯೋಜಿಸಿದ್ದ ಪ್ರಾಪರ್ಟಿ ಎಕ್ಸ್‌ಪೋನಲ್ಲಿ ಕೆಂಗೇರಿ ಉಪನಗರದಲ್ಲಿನ ಕೆಂಗೇರಿ ಪ್ಲಾಟಿನಂನಲ್ಲಿ 178 ಫ್ಲ್ಯಾಟ್‌ಗಳು ಮಾರಾಟವಾಗಿವೆ. ಕೆಂಗೇರಿ ಬಂಡೇಮಠದಲ್ಲಿರುವ ಕೆಂಗೇರಿ ಡೈಮಂಡ್ ಅಪಾರ್ಟ್‌ಮೆಂಟ್‌ನಲ್ಲಿ 25 ಸೇರಿದಂತೆ ಸೂರ್ಯನಗರಿಯ ಸೂರ್ಯ ಎಲಿಗೆನ್ಸ್‌ನಲ್ಲಿ ಮನೆ, ಫ್ಲ್ಯಾಟ್‌ಗಳು ಮಾರಾಟವಾಗಿವೆ.
ಕರ್ನಾಟಕ ಗೃಹ ಮಂಡಳಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಪ್ರಾಪರ್ಟಿ ಎಕ್ಸ್‌ಪೋಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಮೂರು ದಿನದ ಮೇಳದಲ್ಲಿ 225 ಫ್ಲ್ಯಾಟ್‌ಗಳ ಮಾರಾಟವಾಗಿದ್ದು, ಒಂದು ಲಕ್ಷ ರೂ. ಮುಂಗಡ ನೀಡಿದವರಿಗೆ ಹಂಚಿಕೆ ಪತ್ರ ನೀಡಲಾಗಿದೆ. ಮೂರು ದಿನದಲ್ಲಿ 75 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಫ್ಲ್ಯಾಟ್‌ಗಳು ಮಾರಾಟವಾಗಿದ್ದು, ಮಂಡಳಿ ಇತಿಹಾಸದಲ್ಲೇ ದಾಖಲೆ ಎನಿಸಿದೆ ಎಂದು ಮಂಡಳಿಯ ಡಿಜಿಎಂ (ಹಂಚಿಕೆ) ಸುರೇಶ್ ತಿಳಿಸಿದರು.
ಶೇ.2ರ ರಿಯಾಯ್ತಿ ಸೌಲಭ್ಯ ವಿಸ್ತರಣೆ: ದಸರಾ ವಿಶೇಷ ಕೊಡುಗೆಯಾಗಿ ಮೇಳದಲ್ಲಿ ಒಂದು ಲಕ್ಷ ರೂ. ಮುಂಗಡ ನೀಡಿದವರಿಗೆ ಹಂಚಿಕೆ ಪತ್ರದೊಂದಿಗೆ ಶೇ.2ರಷ್ಟು ರಿಯಾಯ್ತಿ ನೀಡಲಾಗಿತ್ತು. ಖರೀದಿದಾರರ ಅನುಕೂಲಕ್ಕಾಗಿ ಈ ಸೌಲಭ್ಯವನ್ನು ಅ.4ರವರೆಗೆ ವಿಸ್ತರಿಸಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪಾರದರ್ಶಕವಾಗಿ ಖರೀದಿದಾರರು ಬಯಸಿದ ಫ್ಲ್ಯಾಟ್‌ಗಳನ್ನು ತಕ್ಷಣವೇ ಮಂಜೂರು ಮಾಡಿ ಹಂಚಿಕೆ ಮಾಡಿದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮೂರ್‍ನಾಲ್ಕು ಮಂದಿ ಪೂರ್ಣ ಮೊತ್ತ ಪಾವತಿಸಿದ್ದು, ಅವರಿಗೆ ಸ್ಥಳದಲ್ಲೇ ಫ್ಲ್ಯಾಟ್‌ನ ಕೀ ಕೂಡ ನೀಡಲಾಯಿತು. ಅವರು ಸಹ ಪಾರದರ್ಶಕ ಹಾಗೂ ಮುಕ್ತ ಹಂಚಿಕೆ ವ್ಯವಸ್ಥೆಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಗುಣಮಟ್ಟದ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ರಿಯಾಯ್ತಿ ದರದಲ್ಲಿ ಫ್ಲ್ಯಾಟ್ ಹಂಚಿಕೆಗೆ ಮಂಡಳಿ ಆದ್ಯತೆ ನೀಡುತ್ತಿದೆ. ಇದೀಗ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಸದ್ಯದಲ್ಲೇ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸೂರ್ಯನಗರಿಯಲ್ಲೂ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.