ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ ಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವ ನೌಕರರಿಗೆ ಮೂರು ತಿಂಗಳ ವೇತನ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನೌಕರರು ಆಕ್ರೋಶ ಹೊರಹಾಕಿ ಮುಷ್ಕರ ನಡೆಸುತ್ತಿರುವ ಘಟನೆ ಸೋಮವಾರ (ಆ 05) ನಡೆದಿದೆ.
ಮಳೆಯಿಂದಾಗಿ ರಸ್ತೆ ತೀರ ಹದಗೆಟ್ಟಿದ್ದು ಮಳೆಗಾಲ ಆರಂಭದಿಂದ ಸವಾರರು ತೀರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಮಧ್ಯೆ ರಸ್ತೆ ಸರಿಪಡಿಸಲು ನೌಕರರು ಮೂರು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ ಗುತ್ತಿಗೆದಾರ ಕಂಪೆನಿ ವೇತನ ನೀಡಿಲ್ಲ ಎಂದು ಓಡಿಲ್ನಾಳದಲ್ಲಿರುವ ಕಂಪೆನಿ ಯುನಿಟ್ ನಲ್ಲಿ ಮುಷ್ಕರ ನಿರತರಾಗಿದ್ದಾರೆ.
ಒಬ್ಬೊಬ್ಬರಿಗೆ 35 ರಿಂದ 60 ಸಾವಿರ ರೂ. ವರೆಗೆ ವೇತನಿವಿದ್ದು, ಒಬ್ಬರಿಗೂ ಈವರೆಗೆ ವೇತನ ಕೈ ಸೇರಿಲ್ಲ, ಹೆಂಡತಿ ಮಕ್ಕಳು ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಊಟಕ್ಕೆ ಬೇಕಾದ ಆಹಾರ ಸಾಮಾಗ್ರಿಯಿಲ್ಲ, ಒತ್ತಡದಲ್ಲಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರಂಭದಲ್ಲಿ 3000 ಮಂದಿ ನೌಕರರಿದ್ದು, ಪ್ರಸಕ್ತ 150 ಮಂದಿಯಷ್ಟೆ ನೌಕರರಿದ್ದಾರೆ
ರಾಜ್ಯ ಸರಕಾರ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನಮ್ಮ ಕುಟುಂಬವನ್ನು ಬದುಕಿಸಿ, ಊರಿಗೆ ಹೋಗದೆ ತಿಂಗಳುಗಳಾಗಿವೆ. ನಮ್ಮದು ಗುತ್ತಿಗೆದಾರರ ಮೇಲೆ ಹೋರಾಟವಲ್ಲ, ವೇತನಕ್ಕಾಗಿ ನಮ್ಮ ಬೇಡಿಕೆಯಷ್ಟೆ. ನಮಗೆ ವೇತನ ನೀಡದಿದ್ದಲ್ಲಿ ನಾವು ಕೆಲಸಕ್ಕೆ ಕದಲುವುದಿಲ್ಲ. ಮುಷ್ಕರ ನಡೆಸಿಯೇ ಸಿದ್ಧ. ವೇತನ ನೀಡಿ ಇಲ್ಲವೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಆಗ್ರಹಿಸಿ ಕಂಪೆನಿ ಎದುರು ಮುಷ್ಕರ ಹೂಡಿದ್ದಾರೆ.
ಕಳೆದ ವಾರಗಳ ಹಿಂದೆಯೂ ನೌಕರರು ಮುಷ್ಕರ ನಡೆಸಿದ್ದು, ರಾಜಿ ಸಂದಾನದ ಬಳಿಕ ಬಗೆಹರಿಸಲಾಗಿತ್ತು. ಇದೀಗ ಮತ್ತೆ ವೇತನ ನೀಡದೆ ಸತಾಯಿಸುತ್ತಿರಯವ ವಿರುದ್ಧ ಆಕ್ರೋಶವಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.