Advertisement

ಲೇಟಾಗಿ ಬಂದ್ರೆ ಸ್ಯಾಲರಿ ಕಟ್

01:16 AM Aug 11, 2019 | Team Udayavani |

ಬೆಂಗಳೂರು: ಹಲವು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿಗಾಗಿ ಈಗಾಗಲೇ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಇನ್ನೂ ಬಯೋಮೆಟ್ರಿಕ್‌ ಸಾಧನ ಅಳವಡಿಸಿಲ್ಲ. ಹೀಗಾಗಿ, ಅಧಿಕಾರಿಗಳು, ಸಿಬ್ಬಂದಿ ಬಂದು ಹೋಗುವುದೇ ಕಚೇರಿ ಸಮಯವಾಗಿಹೋಗಿದೆ.

Advertisement

ಇದನ್ನು ಗಂಭೀರವಾಗಿ ಪರಿಗಣಿಸುರುವ ಬಿಡಿಎ ಆಡಳಿತ ಮಂಡಳಿ, ಪ್ರಾಧಿಕಾರದ ಕಚೇರಿಯಲ್ಲಿ ಬಯೋಮೆಟ್ರಿಕ್‌ ಯಂತ್ರ ಅಳವಡಿಸುತ್ತಿದೆ. ಬಿಡಿಎ ಮುಖ್ಯ ಕಚೇರಿ ಆವರಣ, ಎಂಜಿನಿಯರಿಂಗ್‌ ವಿಭಾಗ ಮತ್ತು ಕಂದಾಯ ವಿಭಾಗಗಳಲ್ಲಿ ಬಯೋಮೆಟ್ರಿಕ್‌ ಸಾಧನಗಳ ಅಳವಡಿಕೆ ಆರಂಭವಾಗಿದೆ. ಪ್ರಾಧಿಕಾರದಲ್ಲಿ ಸುಮಾರು 800 ನೌಕರರಿದ್ದು, ಅವರ ಬೆರಳಚ್ಚು ಪಡೆಯುವ ಕೆಲಸ ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಗುರುತಿನ ಚೀಟಿ ಕಡ್ಡಾಯ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಪ್ರತಿನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ. ಇವರಲ್ಲಿ ಸಿಬ್ಬಂದಿ ಯಾರು, ಸಾರ್ವಜನಿಕರು ಯಾರು ಎಂಬುವುದೇ ಗೊತ್ತಾಗುವುದಿಲ್ಲ. ಈ ಗೊಂದಲ ತಪ್ಪಿಸಲು ಬಿಡಿಎ ಸಿಬ್ಬಂದಿ ತಮ್ಮ ಕೊರಳಲ್ಲಿ ಗುರುತಿನ ಚೀಟಿಯನ್ನು ಹಾಕಿ ಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದಾಗಿ ಅಧಿಕಾರಿಗಳು ಯಾರು, ಹೊರಗಿನವರು ಯಾರು ಎಂಬುವುದು ತಿಳಿಯಲಿದೆ.

ಸಿಸಿ ಕ್ಯಾಮೆರಾ ಅಳವಡಿಕೆ: ಬಿಡಿಎ ಆವರಣದಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು, ಹಲವೆಡೆ ಕ್ಯಾಮೆರಾ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಕೆಲವೆ ದಿನಗಳಲ್ಲಿ ಪ್ರಾಧಿಕಾರದ ಕಚೇರಿ ಆವರಣ ಸಿಸಿ ಕ್ಯಾಮೆರಾ ಕಣ್ಗಾವಲಿಗೆ ಒಳಪಡಲಿದೆ.

ಆಯುಕ್ತರ ದಿಢೀರ್‌ ಭೇಟಿ: ಬಿಡಿಎ ಅಧಿಕಾರಿಗಳು, ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುತ್ತಿರಲಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನೂತನ ಆಯುಕ್ತರು ಆ.7ರಂದು ಬೆಳಗ್ಗೆ, ಕೆಲವು ವಿಭಾಗಗಳ ಕಚೇರಿಗೆ ಭೇಟಿ ದಿಢೀರ್‌ ಕೊಟ್ಟಿದ್ದರು. ಈ ವೇಳೆ ಹಲವು ಅಧಿಕಾರಿಗಳು ಹಾಜರಿರಲಿಲ್ಲ. ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಬಿಡಿಎ ಆಯುಕ್ತ ಡಾ.ಜಿ.ಸಿ.ಪ್ರಕಾಶ್‌, ಅಧಿಕಾರಿಗಳಿಗೆ ಪೂರ್ಣ ಮಾಹಿತಿ ನೀಡಿ, ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಲಾಗುವುದು. ಬಳಿಕ ಕಚೇರಿಗೆ ತಡವಾಗಿ ಬರುವವರ ವೇತನ ಕಡಿತ ಮಾಡಲಾಗುವುದು ಎಂದು ತಿಳಿಸಿದರು.

Advertisement

ಆಡಳಿತದ ಸುಧಾರಣೆ ದೃಷ್ಟಿಯಿಂದ ಬಿಡಿಎ ಕೆಲವು ಕ್ರಮ ಕೈಗೊಂಡಿದೆ. ಇದರಲ್ಲಿ ನೌಕರರು ಕಚೇರಿಗೆ ತಡವಾಗಿ ಬಂದರೆ ಅವರ ಸಂಬಳಕ್ಕೆ ಕತ್ತರಿ ಹಾಕುವುದು ಕೂಡ ಒಂದು.
-ಡಾ.ಜಿ.ಸಿ.ಪ್ರಕಾಶ್‌, ಬಿಡಿಎ ಆಯುಕ್ತ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next