ಬೆಂಗಳೂರಿನ ವಿಷಯವಾಗಿ ಹಲವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಈ ನಿಷ್ಠುರ ಸತ್ಯಗಳ ನಡುವೆಯೇ ಮನಸ್ಸನ್ನು ಬೆಚ್ಚಗಾಗಿಸುವ ಪ್ರಸಂಗಗಳೂ ಈ ಬೆರಗಿನ ಬೆಂಗಳೂರಲ್ಲಿ ನಡೆದು ಬಿಡುತ್ತವೆ. ಅಂತಹ ಹೃದ್ಯ ಪ್ರಸಂಗದ ಅನಾವರಣಕ್ಕೆ ಈ ಅಂಕಣ ಮೀಸಲು.
ಕನ್ನಡದ ತಿಂಡಿ ಕೇಂದ್ರ ಎಂದೊಡನೆಯೇ ಅನೇಕ ಬೆಂಗಳೂರಿಗರಿಗೆ ನೆನಪಾಗುವುದು ಚಾಮರಾಜಪೇಟೆಯ ಎರಡನೇ ಮುಖ್ಯರಸ್ತೆಯಲ್ಲಿನ ರಾಮಚಂದ್ರರ ಚಿತ್ರಾನ್ನ, ಮೊಸರನ್ನ, ರೈಸ್‌ಬಾತಿನ ಹೋಟೆಲ್ ಅವರನ್ನು ಮಾತಿಗೆಳೆದೆ, “ಸರ್, ಬೆಂಗಳೂರಿನಲ್ಲಿ ನೀವು ಕಂಡಿರುವ ಮಾನವೀಯ ಪ್ರಸಂಗಗಳನ್ನು ಹೇಳಿರಿ’ ಎಂದು ಕೇಳಿದೆ. ಅವರು, “ಸಾರ್, ಈ ನಗರ ನಮಗೆ ಏನು ಕೊಟ್ಟಿದೆ ಎಂದಲ್ಲ, ಸಾರ್, ನಾವು ಈ ನಗರಕ್ಕೆ ಏನು ಕೊಟ್ಟಿದ್ದೇವೆ ಎಂದು ಯೋಚನೆ ಮಾಡಬೇಕು ಎಂದರು. ಚಾರಿಟಿ ಶುಡ್ ಬಿಗಿನ್ ಅಟ್ ಹೋಮ್.. ಎಂಬಂತೆ ಮಾನವೀಯತೆ ಇವರ ಹೋಟೆಲಿನಲ್ಲಿ ಆರಂಭ! ಅರ್ಹ ಹತ್ತಾರು ಬಡವರಿಗೆ ಇವರು ನಿತ್ಯ ಉಚಿತವಾಗಿ ಊಟ ಒದಗಿಸುತ್ತಾರೆ. “ಸಾರ್, ಯಾರೇ ಆಗಲಿ ಹೊಟ್ಟೆ ತುಂಬ ತಿನ್ನಬೇಕು’ ಎನ್ನುತ್ತಾ ಅವರು ಸಾಕು ಸಾಕು ಎಂದು ಎಲೆಯ ಮೇಲೆ ಮೈ ಬಗ್ಗಿಸುವಷ್ಟು ಬಡಿಸುತ್ತಾರೆ.
ಹಬ್ಬ ಹರಿದಿನಗಳಲ್ಲಿ ಇಂತಹ ಸೇವೆ ದುಪ್ಪಟ್ಟಾಗುತ್ತದೆ. ಅನೇಕ ಕನ್ನಡಪರ ಕಾರ್ಯಕ್ರಮಗಳಿಗೆ ಇವರದ್ದು ಉಚಿತ ಉಪಾಹಾರ, ಮಜ್ಜಿಗೆ/ಪಾನೀಯ ಸೇವೆ. ಕನ್ನಡ ರಾಜ್ಯೋತ್ಸವದಂದು ಅವರ ಹೋಟಲಿಗೆ ಬರುವ ಎಲ್ಲರಿಗೂ ಕನ್ನಡ ಪತ್ರಿಕೆಗಳನ್ನು ಉಚಿತವಾಗಿ ನೀಡಿ ಓದಿ ಎನ್ನುತ್ತಾರೆ. ಕನ್ನಡ ರತ್ನಕೋಶದ ನೂರಾರು ಪ್ರತಿಗಳನ್ನು ತಂದಿಟ್ಟುಕೊಂಡಿದ್ದಾರೆ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಇತರರಿಗೆ ಕೊಟ್ಟು ಬಳಸಿಕೊಳ್ಳಿ ಎನ್ನುತ್ತಾರೆ. ಪ್ರತಿ ವರ್ಷ ಕೆಲವು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವ ಯೋಜನೆ ಹಾಕಿಕೊಂಡಿ¨ªಾರೆ. ಅವರದೇ ಹೋಟೆಲಿನಲ್ಲಿ ತರಕಾರಿ ಹೆಚ್ಚುತ್ತಿದ್ದ ಹುಡುಗನ ಬೌದ್ಧಿಕ ಸಾಮರ್ಥ್ಯ ಅರಿತು ಯುಕ್ತ ತರಬೇತಿ ಕೊಡಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರಿಸಿದರು. ಇಂದು ಆ ವ್ಯಕ್ತಿ ವಿಧಾನಸೌಧದಲ್ಲಿ ಎರಡನೆ ದರ್ಜೆ ಗುಮಾಸ್ತ ! ಇದು ಅವರಲ್ಲಿನ ಮಾನವೀಯತೆಯ ಇನ್ನೊಂದು ಮುಖ!
ಹಾಗೆ ನೋಡಿದರೆ, ಅವರದ್ದು ಶ್ರೀಮಂತ ಕುಟುಂಬದ ಹಿನ್ನೆಲೆಯಲ್ಲ. ಇವರ ಇಂದಿನ ಸಾಧನೆಯ ಹಿಂದೆ ಅವರ ಬೆವರು ಮಾತ್ರವಲ್ಲ, ಕಣ್ಣೀರೂ ಇದೆ! ಒಂದು ತುತ್ತಿಗಲ್ಲ ಸರ್, ಒಂದೊಂದು ಅಗುಳು ಅನ್ನಕ್ಕೂ ಕಷ್ಟಪಟ್ಟಿದ್ದೇನೆ ಎನ್ನುತ್ತಾರೆ. ಹಾಗೆಯೇ, ತುಸು ತಡೆದು ಸಾರ್, ಇವತ್ತು ನನಗೆ ಕಾರ್‌ಬಂದಿದೆ. ಆದ್ರೆ ಅದ್ರಲ ಒಂದ್ ರೌಂಡ್ ಹಾಕ್ಸಣ ಅಂದ್ರೆ ನಮ ತಂದೆ ತಾಯಿ ಬದುಕಿಲ್ಲ ಎಂದು ಹನಿಗಣ್ಣಾಗುತ್ತಾರೆ. ಕಳೆದ ವರ್ಷದಿಂದ ಅವರೊಂದು ಹೊಸ ಯೋಜನೆ ಆರಂಭಿಸಿದರು. ಅದೇ ಅಂಗಾಂಗ ದಾನ, ದೇಹದಾನದ ಪ್ರಚಾರ ಮತ್ತು ನೋಂದಣಿ! ಅವರ ಶ್ರಮ ವ್ಯರ್ಥವಾಗಲಿಲ್ಲ. ಅನೇಕರು ಅವರ ಕರೆಗೆ ಓಗೊಟ್ಟು ದೇಹದಾನ, ಅಂಗಾಂಗದಾನಕ್ಕೆ ಒಪ್ಪಿ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಬರೆದುಕೊಟ್ಟಿದ್ದಾರೆ. ಹಲವು ಕ್ಷೇತ್ರದ ಗಣ್ಯರು ಇಲ್ಲಿಗೆ ಬಂದು ಹೋಗಿದ್ದಾರೆ. ಅವರಲ್ಲಿ ತಂದೆಯ ಆಶಯದಂತೆ ಮರಣಾನಂತರ ಅವರ ದೇಹವನ್ನು ವಿಚ್ಛೇದಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಡಾ. ಮಹಾಂತೇಶ ರಾಮಣ್ಣನವರ ಸೇರಿದ್ದಾರೆ. ಸಾರ್ ಬೆಂಗಳೂರು ನಮಗೆ ಸಾಕಷ್ಟು ಕೊಟ್ಟಿದೆ. ನಾವು ಬದುಕು ಕಟ್ಟಿಕೊಂಡಿರುವುದೇ ಇಲ್ಲಿ. ಅದು ಸಾಧ್ಯವಾದದ್ದೇ ಈ ಊರಿನ ಮಹಿಮೆಯಲ್ಲವೆ ಎಂದು ಕೇಳುತ್ತಾರೆ. (ದೇಹದಾನ, ಅಂಗಾಂಗ ದಾನ ಮಾಡಲಿಚ್ಚೆಯಿರುವವರು ಇವರನ್ನು ಸಂಪರ್ಕಿಸಬಹುದು: 9342921229)
ಕಲ್ಗುಂಡಿ ನವೀನ್