ಒಂದು ಸಲ ಒಬ್ಬ ಪಾಳೆಯಗಾರ ಎಲ್ಲಿಗೋ ಹೋಗುವಾಗ ಹಾದಿ ತಪ್ಪಿಹೋಗುತ್ತದೆ. ಹಸಿದು, ಬಾಯಾರಿ, ಬಳಲಿ ಅಲೆದಾಡುತ್ತಿ ದ್ದಾಗ ಒಂದು ಗುಡಿಸಲು ಕಾಣಿಸುತ್ತದೆ. ಅಲ್ಲಿ ಒಬ್ಬಳು ಮುಪ್ಪಾನು ಮುದುಕಿ ಒಲೆಯ ಮುಂದೆ ಕೂತಿರುತ್ತಾಳೆ. ದಣಿದು ಬಂದ ಪಾಳೆಯಗಾರನನ್ನು ಕೂರಿಸಿ ನೀರು ಕೊಡುತ್ತಾಳೆ. ಹಸಿದವನಿಗೆ ಕೊಡಲು ಮನೆಯಲ್ಲಿ ಏನೂ ಇರುವುದಿಲ್ಲ. ಕಡೆಗೆ, ಮನೆಯಲ್ಲಿದ್ದ ಬೇಯಿಸಿದ ಕಾಳುಗಳನ್ನು ಕೊಡುತ್ತಾಳೆ. ಪಾಳೆಯಗಾರನ ಹಸಿವು ಇಂಗುತ್ತದೆ. ದಣಿವಾರಿಸಿಕೊಂಡವನು ಸುಮ್ಮನೆ ಹಿಂದಿರುಗುವುದಿಲ್ಲ. ತನ್ನ ಹಸಿದ ಹೊಟ್ಟೆಗೆ ಆಹಾರ ಕೊಟ್ಟು ಕಾಪಾಡಿದ ಆ ನೆಲದಲ್ಲಿ ಒಂದು ಊರು ಕಟ್ಟಬೇಕೆಂದು ನಿಶ್ಚಯಿಸಿಕೊಳ್ಳುತ್ತಾನೆ. ಆ ಪಾಳೆಯಗಾರನ ಹೆಸರು ಕೆಂಪೇಗೌಡ! ಆ ಊರು ಬೆಂಗಳೂರು!! ಇದು ಎಲ್ಲರಿಗೂ ಗೊತ್ತು. ಹಾಗಾದರೆ ಆ ಅಜ್ಜಿಯ ಹೆಸರು? ಉಹೂಂ… ಯಾರಿಗೂ ಗೊತ್ತಿಲ್ಲ. ಅದಿರಲಿ, ಕೆಂಪೇಗೌಡ ಮತ್ತೆ ಆ ಅಜ್ಜಿಯ ಮನೆಗೆ ಹೋದನೆ? ಗೊತ್ತಿಲ್ಲ. ಆದರೆ ನನಗೆ ಯಾವಾಗಲೂ ಆ ಅಜ್ಜಿ ಬೆಂಗಳೂರಿನ ರೂಪಕವಾಗಿ ಕಾಣುತ್ತಾಳೆ. ನಾವೆಲ್ಲರೂ ಕೆಂಪೇಗೌಡನ ತುಣುಕುಗಳು.
ನನಗೆ ನೆನಪು ಬಂದ ಮೇಲೆ ಮೊದಲ ಸಲ ನಾನು ಈ ಬೆಂಗಳೂರಿಗೆ ಕಾಲಿಟ್ಟಾಗ ಅಪ್ಪನ ಮೊಣಕಾಲುಗಳೆತ್ತರ ಇದ್ದೆ. ಆಗೆಲ್ಲಾ ನಮಗೆ ಬೆಂಗಳೂರು ಕನಸಿನ ಊರು. ಆಮೇಲೆ ಬೆಂಗಳೂರಿಗೆ ನೆಲೆಸಲು ಬಂದಾಗ ಇದು ನನ್ನ ಕರ್ಮಭೂಮಿಯೂ ಆಯಿತು. ಇಲ್ಲೇ ಇರಲು ಬಂದ ಮೊದಲ ಕ್ಷಣದಿಂದಲೂ ಇದು ನನ್ನೂರೇ ಅನ್ನಿಸಿದೆ. ಈ ಊರಲ್ಲಿ ನಾನು ಪಡೆದ ಮೊದಲ ತಿಂಗಳ ಸಂಬಳ 900 ರೂ. ಅಷ್ಟರಲ್ಲೂ ನನ್ನನ್ನು ಪೊರೆದಿದೆ, ಈಗಲೂ ಪೊರೆಯುತ್ತಿದೆ. ಅಲ್ಲಿರುವುದು ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಎಂದು ನನಗೆ ಎಂದಿಗೂ ಅನ್ನಿಸಿಲ್ಲ. ಬೆಂಗಳೂರನ್ನು ನಾನೂ ಸಂಪೂರ್ಣವಾಗಿ ಒಳಗೆ ಬಿಟ್ಟುಕೊಂಡಿದ್ದೇನೆ ಹಾಗೆಯೇ ಬೆಂಗಳೂರು ಸಹ ನನ್ನನ್ನು ಒಪ್ಪಿಕೊಂಡಿದೆ.
ಮೆಜೆಸ್ಟಿಕ್ಕು, ಅಲಂಕಾರ್ ಪ್ಲಾಜಾ, ಸ್ಟೇಟ್ಸು, ತ್ರಿವೇಣಿ… ಟ್ರೇನು ಹತ್ತಿ ಬಂದಿಳಿದರೆ ಬೆಂಗಳೂರು ಮಾಯಾಬಜಾರ್ ಸಿನಿಮಾದ ಮತ್ತೂಂದು ಮಜಲು. ಯಾರೋ ತೆರೆದಿಟ್ಟ ಪೆಟ್ಟಿಗೆಯಿಂದ ಹೊರಬಿದ್ದ ಕನಸೊಂದು ರಕ್ತಬೀಜಾಸುರನಾಗಿ ಹುಟ್ಟಿ ಭಸ್ಮಾಸುರನಾದಂತೆ ಮೊದಲೆÇÉಾ ಹೆದರಿಕೆ, ಸಂಜೆ ಟ್ರೇನಿನ ಕನವರಿಕೆ. ಟ್ರೇನಿನಿಂದ ಇಳಿದೊಮ್ಮೆ ಇÇÉೇ ನಿಂತೆ. ಅರೆ, ಬೆಂಗಳೂರಿನ ಬಾನಿನಲ್ಲೂ ಇದೆ ಕಾಮನಬಿಲ್ಲು, ಎಂ.ಜಿ ರೋಡಿನ ಕಡಲೆಬೀಜದ ಗಾಡಿಯವನೂ ವಾರಕ್ಕೊಮ್ಮೆ ಸಿಕ್ಕಾಗ ನಕ್ಕು, ನಾ ಹೇಳುವ ಮೊದಲೇ ಪೊಟ್ಟಣ ಕೈಗಿಡುತ್ತಾನೆ ಗಂಟೆಗಟ್ಟಲೆ ಕೂತು ಚಾ ಹೀರುತ್ತಾ ಸ್ನೇಹದ ಓನಾಮ ಕಲಿಸುವ ಕಾಫೀ ಶಾಪು, ಬ್ಲಾಸಮ್ಮು, ಕೋಶೀಸು ಬೆಂಗಳೂರೆಂದರೆ ಮಾಲ…, ಮೆಟ್ರೋ, ಟ್ರಾಫಿಕ್ಕು ಅಷ್ಟೇ ಅಲ್ಲ ಕಣ್ರೀ, ಇಲ್ಲಿ ಬಂದವರಿಗೆ ಬೆಂಗಳೂರು ತೆರೆದಷ್ಟೂ ಬಾಗಿಲು!
ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚು ಎನ್ನುವಾಗ, ಬೆಂಗಳೂರಿಗೆ Incoming call ಗಳೂ ಹೆಚ್ಚು Incoming ಕಾಲುಗಳೂ ಹೆಚ್ಚು ಎನ್ನುವುದನ್ನು ಮರೆಯುತ್ತೇವೆ, ಇಲ್ಲಿ ಯಾರು ಯಾರಿಗೂ ಇಲ್ಲ ಅನ್ನುವಾಗ ನಾವೂ ಸಹ ಪಕ್ಕದ ಮನೆಯವರನ್ನು ಮಾತನಾಡಿಸಿ ದಿನಗಳೇ ಉರುಳಿತು ಎನ್ನುವುದನ್ನು ಮರೆಯುತ್ತೇವೆ. ಇಲ್ಲಿ ಎಲ್ಲೆಲ್ಲೂ ಜನ, ಆದರೆ ನಾವು ಸಹ ಆ ಜನವೇ ಎನ್ನುವುದನ್ನು ಮರೆಯುತ್ತೇವೆ. ನಮ್ಮ ಮನಸ್ಸಿನಲ್ಲಿ ನೋವಿಲ್ಲದ, ಸಾವಿಲ್ಲದ ಶಾಂಗ್ರಿಲಾವಾಗಿ ಉಳಿದ ನಮ್ಮ ಬಾಲ್ಯದ ಊರನ್ನು ಮೊದಲ ಪ್ರೇಮದಂತೆ ಎದೆಯೊಳಗಿಟ್ಟುಕೊಂಡು, ಬೆಂಗಳೂರಿನ ಜೊತೆ ಮನಸ್ಸಿಲ್ಲದ ಮನಸ್ಸಿನಿಂದ ಸಂಸಾರ ಮಾಡುತ್ತಾ ಬೆಂಗಳೂರು ನಮ್ಮದಾಗಲಿಲ್ಲ ಎಂದು ಕೊರಗುತ್ತೇವೆ. ಬೆಂಗಳೂರು ಮಾತ್ರ ಮಾತೇ ಆಡದೆ ನಮ್ಮ ತಟ್ಟೆಗೆ ಬೆಂದ ಕಾಳುಗಳನ್ನು ಬಡಿಸುತ್ತಿರುತ್ತದೆ. ಬೆಂಗಳೂರು ಒಂದು ಘಟನೆಯಾಗಿ, ಒಂದು ವ್ಯಕ್ತಿಯಾಗಿ, ಒಂದು ಸಂದರ್ಭವಾಗಿ ಅಲ್ಲಾ ಇಡಿಯಾಗಿ ನನ್ನನ್ನು ಕಾಡುತ್ತದೆ, ಕಾಪಾಡುತ್ತದೆ.
– ಸಂಧ್ಯಾರಾಣಿ