ಗೊರೇಬಾಳ: ವಿಶೇಷ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ತಾಲೂಕಿನ ಸಾಲಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಅವಧಿ ಮೂಗಿದರೂ ಪೂರ್ಣಗೊಂಡಿಲ್ಲ. ಮಾರ್ಚ್-2017ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 15 ತಿಂಗಳ ಕಾಲಮಿತಿಯೊಳಗೆ ಅದರೆ 2018ರ ಜೂನ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಈವರೆಗೆ ಶೇ.60ರಷ್ಟು ಕಾಮಗಾರಿ ಮಾತ್ರ ಆಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸದ ಗುತ್ತಿಗೆದಾರ ಪಿ. ರವೀಂದ್ರ ಅವರಿಗೆ ಇಲಾಖೆ ಈಗಾಗಲೇ ಎರಡೂಮೂರು ಬಾರಿ ನೋಟಿಸ್ ಸಹ ಜಾರಿ ಮಾಡಿದೆ. ಆದರೂ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.
ಸಭೆಯಲ್ಲಿ ಪ್ರಸ್ತಾಪ: ಸಾಲಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಕಳಪೆ ಹಾಗೂ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ತಾಪಂ ಸಭೆಗಳಿಗೆ ಸದಸ್ಯ ಹನುಮೇಶ ಸಾಲಗುಂದ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಅಧಿಕಾರಿಗಳು ಬರಿ ಭರವಸೆ ನೀಡುತ್ತ ಬಂದಿದ್ದಾರೆ. ಆದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನಗಳಾಗಿಲ್ಲ. ಈ ಬಗ್ಗೆ ಸಚಿವರು, ಅಧಿಕಾರಿಗಳು ಎಚ್ಚೆತ್ತು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಮಗಾರಿ ವಿಳಂಬವಾಗುತ್ತಿದೆ. ಈಗಾಗಲೇ ಗುತ್ತಿಗೆದಾರರಿಗೆ ನೋಟೀಸ್ ಸಹ ಜಾರಿ ಮಾಡಲಾಗಿದೆ. ಗುತ್ತಿಗೆದಾರರು ಸರಿಯಾಗಿ ಸ್ಪಂದಿಸದಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಖಾಜಾಸಾಬ್, ಜೆಇ ಆರೋಗ್ಯ ಇಲಾಖೆ