Advertisement

ಸಲಾಡ್‌ ಎಂಬ ಸವಿರುಚಿ

04:55 PM Feb 07, 2018 | |

ಊಟದ ಜೊತೆ ಸವಿಯುವ ಆರೋಗ್ಯಕರ ಸವಿರುಚಿಯಲ್ಲಿ ಸಲಾಡ್‌ ಕೂಡ ಒಂದು. ಪೋಷಕಾಂಶಗಳಿಂದ ಕೂಡಿದ ತಾಜಾ ತರಕಾರಿಗಳಿಂದ ಕೂಡಿದ ಸಲಾಡ್‌, ಹಣ್ಣುಗಳಿಂದ ತಯಾರಿಸಿದ ಸಲಾಡ್‌, ಊಟದಲ್ಲಿ ಹೊಸರುಚಿ ನೀಡುವುದಲ್ಲದೇ ಜೀರ್ಣಕ್ರಿಯೆಗೂ ಸಹಾಯಕ. ಕಡಿಮೆ ವೆಚ್ಚದಲ್ಲಿ ದೊರೆಯುವ, ಸುಲಭವಾಗಿ, ಕಡಿಮೆ ಸಮಯದಲ್ಲಿ ರುಚಿಕರವಾಗಿ ತಯಾರಿಸಬಹುದಾದ ಕೆಲ ಬಗೆಯ ಸಲಾಡ್‌ಗಳು ಇಲ್ಲಿವೆ. 

Advertisement

1. ವೆಜಿಟೆಬಲ್‌ ಸಲಾಡ್‌
ಬೇಕಾಗುವ ಸಾಮಗ್ರಿ:
ಕ್ಯಾರೆಟ್‌-2, ಎಳೆಯ ಮೂಲಂಗಿ-1, ಸೌತೆಕಾಯಿ-2, ಟೊಮೆಟೊ-1, ಈರುಳ್ಳಿ ಸೊಪ್ಪು-2, ಗೋಡಂಬಿ-5, ಬಾದಾಮಿ-5, ಪಿಸ್ತ-5, ನಿಂಬೆರಸ-1ಚಮಚ, ಕಾಳುಮೆಣಸಿನಪುಡಿ-1ಚಮಚ ಅಥವಾ ಹಸಿಮೆಣಸು-1, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಎಲ್ಲಾ ತರಕಾರಿಗಳ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ನಿಂಬೆರಸ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ ಮಿಶ್ರಣ ಮಾಡಿ. ಗೋಡಂಬಿ, ಬಾದಾಮಿ, ಪಿಸ್ತ ಸಣ್ಣಗೆ ಹೆಚ್ಚಿ, ಬಾಣಲೆಯಲ್ಲಿ ಗರಿಗರಿಯಾಗಿ ಹುರಿದು ನಂತರ ತರಕಾರಿ ಸಲಾಡ್‌ಗೆ ಸೇರಿಸಿ. ಇದರಲ್ಲಿ ನಿಮ್ಮಿಷ್ಟದ ಇನ್ನಿತರ ತರಕಾರಿಗಳನ್ನೂ ಬಳಸಬಹುದು.

2. ಮೊಳಕೆ ಕಾಳಿನ ಸಲಾಡ್‌
ಬೇಕಾಗುವ ಸಾಮಗ್ರಿ:
ಹೆಸರುಕಾಳು- 2 ಕಪ್‌, ಸಣ್ಣದಾಗಿ ಹೆಚ್ಚಿದ ಈರುಳ್ಳಿ-1, ಟೊಮೊಟೊ-1, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ-1, ಕೊತ್ತಂಬರಿ ಸೊಪ್ಪು, ನಿಂಬೆರಸ-1ಚಮಚ, ಕೆಂಪು ಮೆಣಸಿನ ಪುಡಿ-ಅರ್ಧ ಚಮಚ, ಚಾಟ್‌ ಮಸಾಲಾ ಪುಡಿ-1ಚಮಚ, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಹೆಸರುಕಾಳನ್ನು 6-7 ಗಂಟೆ ನೀರಿನಲ್ಲಿ ನೆನೆಸಿ, ನೀರು ಬಸಿದು  2-3ಗಂಟೆ ಮೊಳಕೆ ಬರಲು ಇಡಿ. ನಂತರ ಒಂದು ಪಾತ್ರೆಯಲ್ಲಿ ಮೊಳಕೆ ಬಂದ ಹೆಸರುಕಾಳು, ಈರುಳ್ಳಿ, ಟೊಮೆಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ನಿಂಬೆರಸ, ಮೆಣಸಿನ ಪುಡಿ, ಚಾಟ್‌ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಸಲಾಡ್‌ ರೆಡಿ. ಮೊಳಕೆ ಬಂದ ಹೆಸರು ಕಾಳನ್ನು ಬೇಯಿಸಿಯೂ ಸಲಾಡ್‌ ಮಾಡಬಹುದು. ಹೆಸರು ಕಾಳಿನ ಜೊತೆ ಜೋಳದಕಾಳು, ಮೊಳಕೆ ಬರಿಸಿದ ಮಡಿಕೆ ಕಾಳುಗಳನ್ನೂ ಸೇರಿಸಬಹುದು.

Advertisement

3. ಖಮಂಗ್‌ ಕಾಕಡಿ
ಬೇಕಾಗುವ ಸಾಮಗ್ರಿ:
ಸಣ್ಣಗೆ ಕತ್ತರಿಸಿದ ಸೌತೆಕಾಯಿ ಹೋಳು -2 ಕಪ್‌, ಕಡಲೆಬೀಜದ ಪುಡಿ-ಅರ್ಧ ಕಪ್‌,  ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ-2, ತೆಂಗಿನ ತುರಿ-ಅರ್ಧ ಕಪ್‌, ಕೊತ್ತಂಬರಿ ಸೊಪ್ಪು, ನಿಂಬೆರಸ-1 ಚಮಚ, ಉಪ್ಪು ಮತ್ತು ಸಕ್ಕರೆ-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-ಕಾಲು ಚಮಚ, ಕರಿಬೇವು.

ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಸೌತೆಕಾಯಿಯಲ್ಲಿ ನೀರಿನಂಶ ಇದ್ದರೆ ಹಿಂಡಿ ತೆಗೆದು, ಸೌತೆಕಾಯಿಗೆ ಹುರಿದ ಕಡಲೆ (ಶೇಂಗ) ಬೀಜದ ತರಿತರಿಯಾದ  ಪುಡಿ, ತೆಂಗಿನ ತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ನಿಂಬೆರಸ ಸೇರಿಸಿ ಕಲಸಿ. ಎಣ್ಣೆ, ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ.(ಮೊದಲೇ ಹಾಕಿದರೆ ಸೌತೆಕಾಯಿ ನೀರೊಡೆಯುತ್ತದೆ)

4. ಆಲೂ ದಾಳಿಂಬೆ ಸಲಾಡ್
ಬೇಕಾಗುವ ಸಾಮಗ್ರಿ:
ಬೇಯಿಸಿ ಚೌಕಾಕಾರವಾಗಿ ಸಣ್ಣಗೆ ಕತ್ತರಿಸಿದ ಆಲೂಗಡ್ಡೆ-2, ದಾಳಿಂಬೆ ಕಾಳು-ಮುಕ್ಕಾಲು ಕಪ್‌, ಸಣ್ಣಗೆ ಹೆಚ್ಚಿದ ಈರುಳ್ಳಿ-1, ಟೊಮೆಟೊ-1, ಹೆಚ್ಚಿದ ಪುದೀನ, ಕೆಂಪು ಮೆಣಸಿನ ಪುಡಿ-ಕಾಲು ಚಮಚ, ಚಾಟ್‌ ಮಸಾಲ ಪುಡಿ-1ಚಮಚ, ಹುರಿದ ಜೀರಿಗೆ ಪುಡಿ-1ಚಮಚ, ನಿಂಬೆರಸ-2ಚಮಚ, ಎಣ್ಣೆ-1ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಆಲೂಗಡ್ಡೆ, ದಾಳಿಂಬೆ ಕಾಳು, ಈರುಳ್ಳಿ, ಟೊಮೆಟೊ, ಪುದೀನ ಹಾಕಿ, ಅದಕ್ಕೆ ಮೆಣಸಿನ ಪುಡಿ, ಚಾಟ್‌ ಮಸಾಲಾ, ಜೀರಿಗೆ ಪುಡಿ, ನಿಂಬೆರಸ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಪುದೀನ ಎಲೆಯಿಂದ ಅಲಂಕರಿಸಿ ಸರ್ವ್‌ ಮಾಡಿ.

5. ಹೆಸರುಬೇಳೆ ಕೋಸಂಬರಿ
ಬೇಕಾಗುವ ಸಾಮಗ್ರಿ:
ಹೆಸರುಬೇಳೆ-ಕಾಲು ಕಪ್‌, ಸಣ್ಣದಾಗಿ ಹೆಚ್ಚಿದ ಸೌತೆಕಾಯಿ-ಒಂದು ಕಪ್‌, ತೆಂಗಿನತುರಿ-4ಚಮಚ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ-2, ಕೊತ್ತಂಬರಿ ಸೊಪ್ಪು, ನಿಂಬೆರಸ-1ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಎಣ್ಣೆ-2 ಚಮಚ, ಸಾಸಿವೆ, ಇಂಗು, ಕರಿಬೇವು.

ಮಾಡುವ ವಿಧಾನ: ಹೆಸರುಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆಸಿಡಿ (30ನಿಮಿಷ ಬಿಸಿ ನೀರಿನಲ್ಲಿ ನೆನೆಸಿದರೂ ಸಾಕು). ನೆನೆದ ಹೆಸರು ಬೇಳೆಯಲ್ಲಿನ ನೀರನ್ನು ಪೂರ್ತಿ ಬಸಿದು, ಅದಕ್ಕೆ ಸೌತೆಕಾಯಿ, ತೆಂಗಿನ ತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ನಿಂಬೆರಸ ಸೇರಿಸಿ. ಎಣ್ಣೆ, ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸವಿಯಿರಿ.

* ವಾಸವಿ ಮೋಹನ್‌ 

Advertisement

Udayavani is now on Telegram. Click here to join our channel and stay updated with the latest news.

Next