Advertisement
ಈ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗವು ಬುಧವಾರ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರನ್ನು ಭೇಟಿ ಮಾಡಿ “ಸಕಾಲ’ದಡಿ ಸದ್ಯ ಸರ್ಕಾರಿ ನೌಕರರಿಗೆ ಕಲ್ಪಿಸಿರುವ ಸೇವೆಗಳನ್ನು ಮುಂದುವರಿಸುವಂತೆ ಮನವಿ ಮಾಡಿದೆ. ಇದಕ್ಕೆ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂಘಕ್ಕೆ ಸಮಾಧಾನ ತಂದಿದೆ.
ಸರ್ಕಾರಿ ನೌಕರರಿಗೆ ಸಂಬಂಧಪಟ್ಟಂತೆ “ಸಕಾಲ’ದಡಿ ಕಲ್ಪಿಸಿರುವ ಸೇವೆಗಳ ಪೈಕಿ ಆಯ್ದ ಸೇವೆಗಳನ್ನು ಕೈಬಿಡುವ ಬಗ್ಗೆ ನೌಕರರ ಸಂಘಗಳೊಂದಿಗೆ ಚರ್ಚಿಸಿ ಒಪ್ಪಿದರಷ್ಟೇ ಈ ಬಗ್ಗೆ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಆಯ್ದ ಸೇವೆಗಳು ಅಗತ್ಯವಿದ್ದು, ಮುಂದುವರಿಸುವಂತೆ ನೌಕರರ ಸಂಘಗಳು ಕೋರಿದರೆ ಮುಂದುವರಿಸಲಾಗುವುದು. ನೌಕರರ ಸಂಘಗಳು ಒಪ್ಪದೆ ಯಾವ ಸೇವೆಯನ್ನೂ ಕೈಬಿಡುವುದಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ “ಉದಯವಾಣಿ’ಗೆ ತಿಳಿಸಿದರು.
Related Articles
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು, ಸರ್ಕಾರಿ ನೂತನ ಪಿಂಚಣಿ ಯೋಜನೆ ಅಡಿಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗ ಸೇರಿದಂತೆ ಇತರೆ ಪದಾಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ “ಸಕಾಲ’ದಲ್ಲಿರುವ ಸೇವೆಗಳನ್ನು ಮುಂದುವರಿಸುವಂತೆ ಮನವಿ ಮಾಡಿದರು.
Advertisement
ಸರ್ಕಾರಿ ನೌಕರರಿಗೆ ಸಂಬಂಧಪಟ್ಟಂತೆ “ಸಕಾಲ’ದಡಿ ಕಲ್ಪಿಸಿರುವ ಸೇವೆಗಳನ್ನು ಮುಂದುವರಿಸುವಂತೆ ಕೋರಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ಸಂಘದ ಪ್ರಮುಖರ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನಿಡಿದ್ದಾರೆ ಎಂದು ಎಚ್.ಕೆ.ರಾಮು ಹೇಳಿದರು.ರಾಜ್ಯ ಸರ್ಕಾರಿ ನೌಕರರು, ಸಿಬ್ಬಂದಿಗೆ ಸಂಬಂಧಪಟ್ಟಂತೆ 21 ಸೇವೆಗಳನ್ನು “ಸಕಾಲ’ ವ್ಯಾಪ್ತಿಗೆ 2011ರಲ್ಲೇ ಅಳವಡಿಸಲಾಗಿತ್ತು. ಈ ಪೈಕಿ ಆಯ್ದ 18 ಸೇವೆಗಳನ್ನು “ಸಕಾಲ’ದಿಂದ ಕೈಬಿಡುವ ಪ್ರಯತ್ನ ನಡೆದಿತ್ತು. ಈ ಕುರಿತು “ಉದಯವಾಣಿ’ ಆ.6ರಂದು “ಸರ್ಕಾರಿ ಸಿಬ್ಬಂದಿ ಸಕಾಲಕ್ಕೆ ಸಂಚಕಾರ’ ತಲೆಬರಹದಡಿ ವಿಶೇಷ ವರದಿ ಪ್ರಕಟಿಸಿತ್ತು. ಇದು ಸರ್ಕಾರಿ ನೌಕರರ ವರ್ಗದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿತ್ತು.