ಹೊಸದಿಲ್ಲಿ: 1984ರ ಸಿಖ್ ನರಮೇಧ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಕಾಂಗ್ರೆಸ್‌ನ ಮಾಜಿ ನಾಯಕ ಸಜ್ಜನ್ ಕುಮಾರ್ ಅವರು ನ್ಯಾಯಾಲಯದ ಮುಂದೆ ತಮ್ಮ ಶರಣಾಗತಿಗೆ ಜ. 31ರವರೆಗೆ ಕಾಲಾವಕಾಶ ಕೋರಿದ್ದಾರೆ.
ಪ್ರಕರಣದ ತೀರ್ಪಿ ನೀಡಿದ್ದ ನ್ಯಾಯಾಲಯವು ಡಿ.31 ರೊಳಗೆ ಎಲ್ಲ ಅಪರಾಧಿಗಳೂ ಶರಣಾಗ ಬೇಕು ಎಂದೂ ಆದೇಶಿಸಿತ್ತು.
ಆದರೆ, ಶರಣಾಗತಿಗೂ ಮುನ್ನ ತಮ್ಮ ಆಸ್ತಿಯನ್ನು ನಾಲ್ವರು ಮಕ್ಕಳು ಹಾಗೂ ಎಂಟು ಮೊಮ್ಮಕ್ಕಳಿಗೆ ಹಂಚಿಕೆ ಮಾಡಬೇಕಿದ್ದು ಇದಕ್ಕೆ ಒಂದು ತಿಂಗಳ ಕಾಲಾವಧಿ ಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಮನವಿಯ ವಿಚಾರಣೆ ಶುಕ್ರವಾರ ನಡೆಯಲಿದೆ.
ಆದರೆ, ಸಜ್ಜನ್ ಅವರ ಮನವಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಸಿಖ್ ದಂಗೆಯಲ್ಲಿ ನೊಂದ ಕುಟುಂಬಗಳ ಪರವಾಗಿ ವಾದ ಮಂಡಿಸಿರುವ ವಕೀಲ ಎಚ್.ಎಸ್. ಫುಲ್ಕಾ ತಿಳಿಸಿದ್ದಾರೆ. ಇದೇ ವೇಳೆ, ಸಜ್ಜನ್ ಪರ ವಕೀಲರಾದ ಅನಿಲ್ ಶರ್ಮಾ ಅವರು, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದಿದ್ದಾರೆ. ಮತ್ತೂಂದೆಡೆ, ಗುರುವಾರ ಸಜ್ಜನ್ ಕುಮಾರ್ ಅವರು ಬಿಗಿಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಹಾಜ ರಾಗಿ, ತಮ್ಮ ಮೊಬೈಲನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.