Advertisement

ಸಜೀಪನಡು: ಗ್ರಾಮದಲ್ಲಿ ಇನ್ನೂ 11 ದಿನ ಕ್ವಾರಂಟೈನ್‌

10:28 AM Apr 13, 2020 | sudhir |

ಬಂಟ್ವಾಳ: ಕೋವಿಡ್ ಸೋಂಕು ದೃಢಪಟ್ಟಿದ್ದ ಸಜೀಪನಡು ಗ್ರಾಮದ 10 ತಿಂಗಳ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೂ ಗ್ರಾಮದಲ್ಲಿ ಕ್ವಾರಂಟೈನ್‌ ಮುಂದುವರಿಯಲಿದೆ ಎಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ.

Advertisement

ಎಲ್ಲರ ಹಾರೈಕೆಯಂತೆ ಮಗು ಗುಣಮುಖ ಆಗಿರುವುದು ಇಡೀ ಗ್ರಾಮದ ಆತಂಕವನ್ನು ದೂರ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮವು 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುವುದು ಅನಿವಾರ್ಯವಾಗಿದೆ. ಹೀಗಾಗಿ ಮಾ. 27ರಂದು ಗ್ರಾಮದ ಕ್ವಾರಂಟೈನ್‌ ಪ್ರಾರಂಭಗೊಂಡಿತ್ತು. ಪ್ರಸ್ತುತ 17 ದಿನಗಳ ಕ್ವಾರಂಟೈನ್‌ ಅವಧಿ ಪೂರ್ಣಗೊಂಡಿದ್ದು, ಇನ್ನೂ 11 ದಿನಗಳು ಬಾಕಿ ಇವೆ. ಅಲ್ಲಿಯವರೆಗೆ ಗ್ರಾಮಕ್ಕೆ ಪ್ರವೇಶವಾಗಲಿ, ಗ್ರಾಮದಿಂದ ಹೊರಗೆ ಹೋಗುವುದಕ್ಕೆ ಅವಕಾಶವಿಲ್ಲ. ಗ್ರಾಮಸ್ಥರಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ತಾ| ಆಡಳಿತದಿಂದ ಪಡಿತರ
ತಾಲೂಕಿನಲ್ಲಿ 2 ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಜೀಪನಡು ಹಾಗೂ ತುಂಬೆ ಗ್ರಾಮದಲ್ಲಿ ತಾಲೂಕು ಆಡಳಿತದ ಸಿಬಂದಿ ಪಡಿತರ ಅಕ್ಕಿ ವಿತರಿಸುವ ಕಾರ್ಯ ನಡೆಸುತ್ತಿದ್ದಾರೆ. ಸರಕಾರವು ತಿಂಗಳ ಅಕ್ಕಿಯನ್ನು ನೀಡಿದ್ದು, ಅದನ್ನು ಕ್ವಾರಂಟೈನ್‌ನಲ್ಲಿರುವ ಮನೆಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ವಿರಳ ಜನಸಂಚಾರ
ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಬೆಳಗ್ಗಿನ ಹೊತ್ತು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ತಾಲೂಕಿನಲ್ಲಿ ರವಿವಾರ ಎಂದಿಗಿಂತ ಕೊಂಚ ಮಟ್ಟಿನ ಜನಸಂಚಾರ ಕಡಿಮೆ ಇತ್ತು. ಬ್ಯಾಂಕ್‌ ಶಾಖೆಗಳು, ಸಹಕಾರಿ ಸಂಸ್ಥೆಗಳಿಗೆ ರವಿವಾರ ರಜೆ ಇದ್ದ ಹಿನ್ನೆಲೆಯಲ್ಲಿ ಜನಸಂಚಾರ ಕಡಿಮೆಯಾಗಿತ್ತು. ಮಧ್ಯಾಹ್ನದ ಬಳಿಕ ಸಂಪೂರ್ಣ ಬಂದ್‌ ಆಗಿದ್ದು, ಅನಗತ್ಯ ತಿರುಗಾಟ ನಡೆಸುವವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next