ಕಾಪು: ಸಂತರನ್ನು ಗುರುತಿಸಿ ಗೌರವಿಸುವ ಕಾರ್ಯ ಅತ್ಯಂತ ಶ್ರೇಷ್ಟ ಕಾರ್ಯವಾಗಿದೆ. ಸಮಾಜದ ಜನರು ಅಂತರಂಗದಲ್ಲಿ ಸದ್ಗುಣಗಳನ್ನು ಅಳವಡಿಸಿ ಕೊಂಡು ಮುನ್ನಡೆಯಲು ಪ್ರೇರಣೆ ನೀಡುವಲ್ಲಿ ಸಂತರ ಪಾತ್ರ ಮಹದ್ವದ್ದಾಗಿದ್ದು, ಸಂತ – ಸತ್ಪುರುಷರಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎಂದು ಕಟಪಾಡಿ ಶೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಜು. 8ರಂದು ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಭವನದಲ್ಲಿ ಚಾತುರ್ಮಾಸ್ಯ ವೃತಾಚರಣೆಯ ಪುರಪ್ರವೇಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆ ಮತ್ತು ಸಂತ ದರ್ಶನ ಕಾರ್ಯಕ್ರಮದಲ್ಲಿ ಅವರು ಪೌರ ಸಮ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಸಮ್ಮಾನ ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕಾಳಹಸ್ತೇಂದ್ರ ಶ್ರೀಗಳ ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ನಿರಂತರ ಶಾಂತಿ, ಸೌಹಾರ್ದತೆ ನೆಲೆಯೂರಲು ಸಾಧ್ಯ ಎಂದರು.
ಉಜಿರೆ ಅಶೋಕ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿ. ಪಂ. ಅಧ್ಯಕ್ಷ ದಿನಕರ ಬಾಬು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೇಂಜ ಶ್ರೀಧರ ತಂತ್ರಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿನೇಶ್ ಬಲ್ಲಾಳ್ ಕುತ್ಯಾರು ಅರಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಮದ್ ಆನೆಗುಂದಿ ಪ್ರತಿಷ್ಟಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಚಾರ್ತುಮಾಸ್ಯ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಕೇಶವ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಮಟ್ಟಾರು, ಸಮಿತಿಯ ಉಪಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಪೈ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು. ಮಾತೃ ಮಂಡಳಿಯ ಅಧ್ಯಕ್ಷೆ ಶಿಲ್ಪಾ ಸುವರ್ಣ ವಂದಿಸಿದರು. ಜಿ. ಪಂ. ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪುರಪ್ರವೇಶ
ಶ್ರೀಗಳ ಚಾತುರ್ಮಾಸ್ಯ ವ್ರತಾ ಚರಣೆಯು ಜು. 9ರಿಂದ ಸೆ. 6ರ ವರೆಗೆ ಕುತ್ಯಾರು ಮೂಲ ಮಠದಲ್ಲಿ ನಡೆಯಲಿದ್ದು, ಸಂತ ದರ್ಶನ ಕಾರ್ಯಕ್ರಮದ ಬಳಿಕ ಅವರು ಬೃಹತ್ ಶೋಭಾಯಾತ್ರೆಯ ಮೂಲಕ ಪಡು ಕುತ್ಯಾರಿನ ಶ್ರೀ ಮಠದ ನಿವೇಶನಕ್ಕೆ ಪ್ರವೇಶಗೈದರು.