Advertisement

ಸೈನಾ-ಸಿಂಧು, ಇಬ್ಬರಲ್ಲಿ ಯಾರು ಫೇವರಿಟ್‌?

12:30 AM Mar 09, 2019 | |

ಅದೊಂದು ಕಾಲವಿತ್ತು. ಪುಲ್ಲೇಲ ಗೋಪಿಚಂದ್‌, ಪ್ರಕಾಶ್‌ ಪಡುಕೋಣೆ ಯುಗ ಅಂತಲೇ ಭಾರತೀಯ ಬ್ಯಾಡ್ಮಿಂಟನ್‌ ಅಭಿಮಾನಿಗಳು ಕರೆಯುತ್ತಿದ್ದರು. ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು ಆ ಇಬ್ಬರು ಮಹಾನ್‌ ದಿಗ್ಗಜರು. 

Advertisement

ಭಾರತದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯೇ ಇಲ್ಲ ಎನ್ನುವಂತಹ ಸಂದರ್ಭದಲ್ಲಿ ಗೋಪಿಚಂದ್‌, ಪ್ರಕಾಶ್‌ ಪಡುಕೋಣೆ ತಮ್ಮ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದ್ದರು. ಆ ದಿನಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದರು. 

ಬೇಸರದ ಸಂಗತಿ ಏನೆಂದರೆ ಇವರ ಬಳಿಕ ಭಾರತಕ್ಕೆ ಅಂಥಹ ಮತ್ತೂಬ್ಬ ತಾರೆ ಸಿಕ್ಕಿರಲಿಲ್ಲ. ಹತ್ತು ಹಲವು ವರ್ಷಗಳಾದರೂ ಹೊಸ ಪ್ರತಿಭೆಗಳ ಉದಯವಾಗಲಿಲ್ಲ. ಭಾರತಕ್ಕೆ ಪದಕಗಳು ಬರಲಿಲ್ಲ. ಭಾರತೀಯ ಬ್ಯಾಡ್ಮಿಂಟನ್‌ ಕ್ಷೇತ್ರ ಮತ್ತೆ ಕುಸಿತದತ್ತ ಸಾಗಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಭಾರತೀಯ ಬ್ಯಾಡ್ಮಿಂಟನ್‌ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳಾಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸುವರ್ಣಯುಗ ಎನ್ನಬಹುದು. ಇದಕ್ಕೆ ಸ್ಫೂರ್ತಿ ಇಬ್ಬರು ಮಹಿಳಾ ಮಣಿಗಳು. ಒಬ್ಬರು ಹೈದರಾಬಾದ್‌ನ ಸೈನಾ ನೆಹ್ವಾಲ್‌, ಮತ್ತೂಬ್ಬರು ಅಲ್ಲಿನರೇ ಆದ ಪಿ.ವಿ.ಸಿಂಧು.  

ಆರಂಭದಲ್ಲಿ ಸೈನಾ ನೆಹ್ವಾಲ್‌ ಸದ್ದು ಮಾಡಿದ್ದರು. ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಗೆದ್ದು ಸುದ್ದಿಯಾದರು. ಸೈನಾ ನೆಹ್ವಾಲ್‌ ಭಾರತ ಬ್ಯಾಡ್ಮಿಂಟನ್‌ ಕ್ಷೇತ್ರಕ್ಕೆ ಸಿಕ್ಕ ಧ್ರುವ ತಾರೆ ಎಂದು ಮಾಧ್ಯಮಗಳು ಹಾಡಿ ಹೊಗಳಿದವು. ಮುಂದೆ ಸೈನಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದರು. ಇತಿಹಾಸ ಕೂಡ ನಿರ್ಮಾಣವಾಯಿತು. ಭಾರತದ ಮೊದಲ ಬ್ಯಾಡ್ಮಿಂಟನ್‌ ಆಟಗಾರ್ತಿ ಎನ್ನುವ ಖ್ಯಾತಿಗೂ ಸೈನಾ ಪಾತ್ರಾದರು. ಹೀಗೆ ಸೈನಾ ದಿಗ್ವಿಜಯ ಮುಂದುವರಿಯುತ್ತಲೇ ಇತ್ತು. ಇದಾದ ಕೆಲವೇ ವರ್ಷಗಳಲ್ಲಿ ಸೈನಾಗೆ ಭಾರತದಲ್ಲೇ ಪ್ರಬಲ ಸ್ಪರ್ಧಿ ಹುಟ್ಟಿಕೊಂಡರು. ಅವರೇ ಪಿ.ವಿ.ಸಿಂಧು. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್‌ ಆಟಗಾರ್ತಿ, ಒಟ್ಟಾರೆ ಬ್ಯಾಡ್ಮಿಂಟನ್‌ನಲ್ಲಿ ಸೈನಾ ಬಳಿಕ ಪದಕ ಗೆದ್ದ ಎರಡನೇ ಆಟಗಾರ್ತಿ. ಒಟ್ಟಾರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ನಾಲ್ಕು ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎನ್ನುವ ಹೆಗ್ಗಳಿಕೆಯನ್ನು ಸಿಂಧು ಪಡೆದಿದ್ದಾರೆ. 

ಯಾರು ಬಲಿಷ್ಠರು ಇಬ್ಬರೊಳಗೆ‌?: ಎಲ್ಲರು ಸೈನಾ…ಸೈನಾ ಎನ್ನುವ ಮಂತ್ರ ಜಪಿಸುತ್ತಿದ್ದ ಕಾಲದಲ್ಲಿ ಪಿ.ವಿ.ಸಿಂಧು ಹುಟ್ಟಿಕೊಂಡರು. ಪ್ರಬಲ ಆಟಗಾರ್ತಿಯಾಗಿ ಬೆಳೆದರು. ಸೈನಾ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದರೆ ಸಿಂಧು, ಸೈನಾರನ್ನೇ ಮೀರಿಸುವಂತಹ ಪ್ರದರ್ಶನ ನೀಡಿ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಕೊರಳಿಗೇರಿಸಿಕೊಂಡರು. ಸೈನಾ ವಿಶ್ವ ಬ್ಯಾಡ್ಮಿಂಟನ್‌ ಶ್ರೇಯಾಂಕದಲ್ಲಿ ನಂ.1 ತನಕ ಸಾಗಿದ್ದರು. ಸಿಂಧು ವಿಶ್ವ 2ರ ತನಕ ಬಂದಿದ್ದಾರೆ. ಒಂದು ಲೆಕ್ಕದಲ್ಲಿ ನೋಡುವುದಾದರೆ ಇವರಿಬ್ಬರಲ್ಲಿ ಯಾರು ಬಲಿಷ್ಠ ಎಂದು ತುಲನೇ ಮಾಡುವುದೇ ಕಷ್ಟ. ಒಬ್ಬರಿಗಿಂತ ಒಬ್ಬರು ಮಿಗಿಲಾದ ಪ್ರದರ್ಶನ ನೀಡುತ್ತಿರುವುದೇ ಇದಕ್ಕೆ ಕಾರಣ.

Advertisement

ಇದುವರೆಗೆ ಅಂತಾರಾಷ್ಟ್ರೀಯ ಕೂಟಗಳಲ್ಲಿ ಸೈನಾ -ಸಿಂಧು ಒಟ್ಟಾರೆ 4 ಸಲ ಮುಖಾಮುಖೀಯಾಗಿದ್ದಾರೆ. ಮೂರು ಸಲ ಸೈನಾ ಗೆದ್ದಿದ್ದಾರೆ. 1 ಬಾರಿಯಷ್ಟೇ ಸಿಂಧು ಗೆದ್ದಿದ್ದಾರೆ. 2014ರಲ್ಲಿ ಸೈನಾ ಇಂಡಿಯನ್‌ ಗ್ರ್ಯಾನ್‌ ಫ್ರಿನಲ್ಲಿ 2-0 ಅಂತರದಿಂದ ಸಿಂಧುಗೆ ಸೋಲುಣಿಸಿದ್ದರು, ಇದು ಸಿಂಧು ವಿರುದ್ಧ ಸೈನಾ ಗೆದ್ದ ಮೊದಲ ಪಂದ್ಯ. 2017ರಲ್ಲಿ ಇಂಡಿಯಾ ಓಪನ್‌ನಲ್ಲಿ 2-0 ಅಂತರದಿಂದ ಸೈನಾಗೆ ಸಿಂಧು ಆಘಾತ ನೀಡಿದ್ದರು. ಆಬಳಿಕ ನಡೆದ ಇಂಡೋನೇಷ್ಯಾ ಬ್ಯಾಡ್ಮಿಂಟನ್‌ (2018) ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ (2018)ನಲ್ಲಿ ಸೈನಾ ಎದುರು ಸಿಂಧು ಸೋಲು ಅನುಭವಿಸಿದ್ದರು. 

ಗೋಪಿಚಂದ್‌ ಗರಡಿಯ ಪ್ರತಿಭೆಗಳು: ಗೋಪಿಚಂದ್‌ ಅಕಾಡೆಮಿಯಲ್ಲಿ ಬೆಳೆದ ಪ್ರತಿಭೆಗಳು ಸೈನಾ ನೆಹ್ವಾಲ್‌ ಹಾಗೂ ಸಿಂಧು. ಒಂದು ಹಂತದಲ್ಲಿ ಕೋಚ್‌ ಗೋಪಿಚಂದ್‌ ಜತೆಗಿನ ಮನಸ್ತಾಪದಿಂದಾಗಿ ಸೈನಾ ಅಕಾಡೆಮಿಯನ್ನೇ ತೊರೆದು ಹೊರಬಂದಿದ್ದರು. ನಂತರದ ದಿನಗಳಲ್ಲಿ ಬೆಂಗಳೂರಿನಲ್ಲೇ ಇದ್ದುಕೊಂಡು ಸೈನಾ ಮೂರು ವರ್ಷ ಮಾಜಿ ಆಟಗಾರ ವಿಮಲ್‌ ಕುಮಾರ್‌ ಅವರಿಂದ ಕೋಚಿಂಗ್‌ ಪಡೆದಿದ್ದರು. ಆದರೆ ಸೈನಾ ಪ್ರದರ್ಶನದಲ್ಲಿ ದಿನದಿಂದ ದಿನಕ್ಕೆ ಕುಸಿತವಾಗಿತ್ತು. ಫಾರ್ಮ್ ಕಳೆದುಕೊಂಡು ಅವರು ಕಂಗಾಗಿದ್ದರು. ಇದಾದ ಬಳಿಕ ಗೋಪಿಚಂದ್‌ ಜತೆಗೆ ರಾಜಿ ಮಾಡಿಕೊಂಡ ಸೈನಾ ಮತ್ತೆ ಗೋಪಿಚಂದ್‌ ಅಕಾಡೆಮಿಯನ್ನು ಸೇರಿಕೊಂಡಿದ್ದರು. ಸದ್ಯ ವಿಶ್ವ 9ನೇ ಶ್ರೇಯಾಂಕದಲ್ಲಿದ್ದಾರೆ. 

ನಾವಿಬ್ಬರು ಹಾಯ್‌..ಬಾಯ್‌ ಫ್ರೆಂಡ್ಸ್‌ ಅಷ್ಟೆ!
ಸೈನಾ-ಸಿಂಧು ಸದ್ಯ ಒಂದೇ ಅಕಾಡೆಮಿಯಲ್ಲಿದ್ದಾರೆ. ಪ್ರತ್ಯೇಕವಾಗಿ ಇವರಬ್ಬರಿಗೆ ತರಬೇತಿ ನೀಡಲಾಗುತ್ತಿದೆ. ಒಂದು ಹಂತದಲ್ಲಿ ಇಬ್ಬರೂ ಒಂದೇ ಅಕಾಡೆಮಿಯಲ್ಲಿದ್ದರೆ ಪರಸ್ಪರ ಬಲ, ದೌರ್ಬಲ್ಯ ತಿಳಿದುಕೊಳ್ಳುತ್ತಾರೆ. ಇದರಿಂದ ಆಟಗಾರ್ತಿಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಟೀಕೆಗಳು ಕೇಳಿ ಬಂದಿದ್ದವು. ಬೆನ್ನಲ್ಲೇ ನಾವಿಬ್ಬರು “ಹಾಯ್‌..ಬಾಯ್‌ ಫ್ರೆಂಡ್ಸ್‌ ಅಷ್ಟೆ’ ಎಂದು ಸಿಂಧು ಮಾಧ್ಯಮದ ಎದುರು ಹೇಳಿಕೊಂಡಿದ್ದರು. ಇದು ಇಬ್ಬರು ಆಟಗಾರ್ತಿಯರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಅಂಶವನ್ನು ತೆರದಿಟ್ಟಿತ್ತು.

ಪ್ರಮುಖ 3  ಪ್ರಶಸ್ತಿಗಳು
ಸೈನಾ ನೆಹ್ವಾಲ್‌

ಇಸವಿ    ಕೂಟ
2012    ಲಂಡನ್‌ ಒಲಿಂಪಿಕ್ಸ್‌ (ಕಂಚು)
2015    ವಿಶ್ವ ಚಾಂಪಿಯನ್‌ಶಿಪ್‌ (ಬೆಳ್ಳಿ)
2017    ವಿಶ್ವ ಚಾಂಪಿಯನ್‌ಶಿಪ್‌ (ಕಂಚು)

ಪಿ.ವಿ.ಸಿಂಧು 
ಇಸವಿ    ಕೂಟ
2016    ಒಲಿಂಪಿಕ್ಸ್‌ (ಬೆಳ್ಳಿ)
2017    ವಿಶ್ವ ಚಾಂಪಿಯನ್‌ಶಿಪ್‌ (ಬೆಳ್ಳಿ)
2018    ವಿಶ್ವ ಚಾಂಪಿಯನ್‌ಶಿಪ್‌ (ಬೆಳ್ಳಿ)

Advertisement

Udayavani is now on Telegram. Click here to join our channel and stay updated with the latest news.

Next