ಹೊಸದಿಲ್ಲಿ: ಫಿಟ್‌ನೆಸ್ ಸಮಸ್ಯೆ ಯಿಂದಾಗಿ ಸೈನಾ ನೆಹ್ವಾಲ್ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಜತೆಗೆ ಪುರುಷರ ಡಬಲ್ಸ್ ಜೋಡಿಯಾಗಿರುವ ಕುಶಲ್ ರಾಜ್-ಪ್ರಕಾಶ್ ರಾಜ್ ಕೂಡ ಹಿಂದೆ ಸರಿದಿದ್ದಾರೆ.
ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (ಬಿಎಐ) ಮೇ 4ರಿಂದ 7ರ ತನಕ ತೆಲಂಗಾಣದ “ಜ್ವಾಲಾ ಗುಟ್ಟಾ ಅಕಾಡೆಮಿ ಆಫ್ ಎಕ್ಸಲೆನ್ಸ್’ನಲ್ಲಿ ಆಯ್ಕೆ ಟ್ರಯಲ್ಸ್ ಹಮ್ಮಿಕೊಂಡಿದೆ.
ಚೀನದಲ್ಲಿ ಸೆ. 23ರಿಂದ ಅ. 8ರ ತನಕ ನಡೆಯುವ ಏಷ್ಯಾಡ್‌ಗಾಗಿ ಭಾರತದ ಬ್ಯಾಡ್ಮಿಂಟನ್ ತಂಡವನ್ನು ಇಲ್ಲಿ ಅಂತಿಮಗೊಳಿಸಲಾಗುವುದು ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.
ಬಿಎಐ ಈಗಾಗಲೇ ಸಾಧನೆಯ ಆಧಾರದಲ್ಲಿ ಪಿ.ವಿ. ಸಿಂಧು, ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ವನಿತಾ ಡಬಲ್ಸ್ ಜೋಡಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಅವರನ್ನು ನೇರವಾಗಿ ಆಯ್ಕೆ ಮಾಡಿದೆ.
ಆಯ್ಕೆ ಟ್ರಯಲ್ಸ್‌ನಲ್ಲಿ ಕೆ. ಶ್ರೀಕಾಂತ್, ಲಕ್ಷ್ಯ ಸೇನ್, ಪ್ರಿಯಾಂಶು ರಾಜಾವತ್, ಮಿಥುನ್ ಮಂಜುನಾಥ್, ಬಿ. ಸಾಯಿ ಪ್ರಣೀತ್, ಆಕರ್ಷಿ ಕಶ್ಯಪ್, ಮಾಳವಿಕಾ ಬನ್ಸೋಡ್, ಅಶ್ಮಿತಾ ಚಾಲಿಹಾ, ಉನ್ನತಿ ಹೂಡಾ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಪುರುಷರ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ತಲಾ ಮೂವರು, 2 ಮಿಶ್ರ ಡಬಲ್ಸ್ ಜೋಡಿ, ಪುರುಷರ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ತಲಾ ಒಂದು ಜೋಡಿಯನ್ನು ಏಷ್ಯಾಡ್‌ಗಾಗಿ ಆರಿಸಬೇಕಿದೆ.