10 ದಿನ ಮುನ್ನ ಆದ ಬಲ ಮೊಣಕಾಲಿನ ಜಾಯಿಂಟ್‌ನಲ್ಲಿನ ಗಾಯ ನಂತರದಲ್ಲಿ ತರಬೇತಿ ಹಾಗೂ ಪಂದ್ಯದಲ್ಲಿ ಪಾಲ್ಗೊಂಡಿದ್ದರಿಂದ ಹೆಚ್ಚು ಗಂಭೀರವಾಗಿತ್ತು. ಇಂತಿಪ್ಪ ಸೈನಾ ಸರ್ಜರಿಗೊಳಗಾದರು. ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ನಾನು ಸುಧಾರಿಸಲಿ ಎಂದು ಪ್ರಾರ್ಥಿಸಿ ಎಂದು ಪ್ರಾರ್ಥಿಸಿದರು. ಬೇಗ ಗುಣಮುಖ ರಾಗಿ ಅಂಕಣಕ್ಕೆ ಮರಳುವುದು ಕಷ್ಟ ಎಂದರು. ಮತ್ತೆ ವೃತ್ತಿಪರವಾಗಿ ಬ್ಯಾಡ್ಮಿಂಟನ್ ಆಡುವುದೇ ಕಠಿಣ ಎಂತಲೂ ಹೇಳಿದರು. ಇವೆಲ್ಲ ಆದಮೇಲೆ, ಕಳೆದ ವಾರ ಮಲೇಷಿಯಾ ಮಾಸ್ಟರ್ನಲ್ಲಿ ವಿಜೇತರಾದರು!
Advertisement
ಬ್ಯಾಡ್ಮಿಂಟನ್ ಎಂದರೆ ಪ್ರಕಾಶ್ ಪಡುಕೋಣೆ ಮಾತ್ರ ನೆನಪಾಗುತ್ತಿದ್ದ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಅದಕ್ಕೊಂದು ಮಹಿಳಾ ಸ್ವರೂಪ ಕೊಟ್ಟಿದ್ದು ಸೈನಾ. ಭಾರತದ ಮಟ್ಟಿಗೆ ಟಾಪ್ ಒನ್ ಸ್ಥಾನ ತಲುಪಿದ ಎರಡನೇ ಬ್ಯಾಡ್ಮಿಂಟನ್ ಪ್ರತಿಭೆ. ಮೂರು ಒಲಂಪಿಕ್ಸ್‌ಗಳಲ್ಲಿ ಆಡಿದ್ದು ಹಾಗೂ 2012ರ ಲಂಡನ್ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದು ಈಗ ಐತಿಹಾಸಿಕ. 10 ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಪಡೆದಿರುವುದು ಸಾಮಾನ್ಯದ ಮಾತಲ್ಲ. 2009ರಿಂದ ಈ ಗಾಯ, ಸೋಲು, ಸಮಸ್ಯೆಗಳ ಹೊರತಾಗಿಯೂ ಟಾಪ್ 10ರಲ್ಲಿ ಸ್ಥಾನ ಉಳಿಸಿಕೊಂಡಿರುವುದಕ್ಕೆ ಹ್ಯಾಟ್ಸ್‌ಆಫ್!
ಸೈನಾಗೆ ಗಾಯಗಳು ಹೊಸದಲ್ಲ. 2016ರಲ್ಲಿಯೂ ಆಕೆ ಹಲವು ಬಾರಿ ಗಾಯಾಳುವಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ ಅಥವಾ ಫಿಟ್‌ನೆಸ್ ಕಾರಣಕ್ಕೆ ಹಲವು ಬಾರಿ ಶೇ.100ರ ಪ್ರದರ್ಶನ ನೀಡಲಾಗಿರಲಿಲ್ಲ. ಒಂದು ಫ್ಲಾಶ್‌ಬ್ಯಾಕ್‌ಗೆ ಹೋಗುವುದಾದರೆ, 2011ರಲ್ಲಿಯೇ ಒಂದು ಸೋಲಿನ ನಂತರ ಸೈನಾ ಕೋಚ್ ಪಿ.ಗೋಪಿಚಂದ್ ಬಳಿ, ನಾನು ಆಟದಿಂದ ಹಿಂದೆಸರಿಯುತ್ತೇನೆ ಎಂಬರ್ಥದ ಹೇಳಿಕೆಯನ್ನು ಕಣ್ಣೀರಧಾರೆ ಸಮೇತ ಹೇಳುತ್ತಾರೆ. ಆ ವೇಳೆಗೆ ರಾಷ್ಟ್ರೀಯ ಕೋಚ್ ಎಂದೆನಿಸಿಕೊಂಡಿದ್ದ ಗೋಪಿಚಂದ್, ಸೈನಾರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. ಬೆಳಿಗ್ಗೆ ನಾಲ್ಕೂವರೆಯಿಂದ ಕಠಿಣ ತರಬೇತಿ ಆರಂಭವಾಗುತ್ತಿತ್ತು. ಸಿನೆಮಾ ಇಲ್ಲ, ತಡ ರಾತ್ರಿ ಟಿವಿ ಶೋ ವೀಕ್ಷಣೆ ಸಲ್ಲ, ರಾತ್ರಿ ಪಾರ್ಟಿಗಳಿಗಂತೂ ಅಕ್ಷರಶಃ ನಿಷೇಧ.
ವಾಸ್ತವವಾಗಿ ಇದು ಕೇವಲ ಸೈನಾಗೆ ಹಾಕಿದ್ದ ಕಡಿವಾಣವಾಗಿರಲಿಲ್ಲ. ಕೋಚ್ ಗೋಪಿಗೆ ಕೂಡ ಅನ್ವಯಿಸಿತ್ತು. ಸೈನಾರಿಗೆ ಲಂಡನ್ ಒಲಂಪಿಕ್ಸ್ ಪದಕ ಪಡೆದುಕೊಳ್ಳುವಂತೆ ಮಾಡಲು ಹೆಚ್ಚು ಶ್ರಮ ವಹಿಸುವ ಜವಾಬ್ದಾರಿ ತೆಗೆದುಕೊಳ್ಳುವ ಮುನ್ನ ಖುದ್ದು ಗೋಪಿ ತಮ್ಮ ತಂದೆತಾಯಿ ಹಾಗೂ ಪತ್ನಿಗೆ ಸಹಕರಿಸಲು ಕೇಳಿದ್ದರಂತೆ. ಸಿನೆಮಾ ಇಲ್ಲ, ತಡ ರಾತ್ರಿ ಟಿವಿ ಶೋ ವೀಕ್ಷಣೆ ಇಲ್ಲ, ರಾತ್ರಿ ಪಾರ್ಟಿಗಳಿಗಂತೂ ಅಕ್ಷರಶಃ ನಿಷೇಧ, ಗೋಪಿ ಕುಟುಂಬಕ್ಕೂ ಅನ್ವಯವಾಗಿತ್ತು!
Related Articles
Advertisement
ಸೈನಾ ಒಳ್ಳೆಯತನಕ್ಕೆ ಸೋತ ಟೀಕಾಕಾರರುಸೈನಾ ನೆಹ್ವಾಲ್‌ರ ಪ್ರತಿಭೆಗೆ ಪ್ರಶ್ನೆಗಳಿಲ್ಲದಿದ್ದರೂ ಅವರು ವಿಶ್ವದ ಇತರ ಅಗ್ರ ಆಟಗಾರರ ಎದುರು ಕಿಲ್ಲರ್ ಇನ್‌ಸ್ಟಿಂಗ್ಟ್ನ ಕೊರತೆ ಅನುಭವಿಸುತ್ತಾರೆ ಎಂಬ ಆರೋಪ ಪುರಾತನವಾದುದು. 2009ರಲ್ಲಿಯೇ 2ನೇ ರ್‍ಯಾಂಕಿಂಗ್‌ಗೆ ಬಡ್ತಿ ಪಡೆದ ಸೈನಾ ಅಗ್ರಪಟ್ಟ ಅಲಂಕರಿಸಿದ್ದು 2015ರಷ್ಟು ವಿಳಂಬವಾಗಿ. ಈ ಹಿನ್ನೆಲೆಯಲ್ಲಿ ಕಳೆದ ಒಲಂಪಿಕ್ಸ್‌ನ ಘಟನೆಯನ್ನು ಪ್ರಸ್ತಾಪಿಸಬೇಕು. ಭಾರತದ ಇನ್ನೋರ್ವ ಪ್ರತಿಭೆ ಪಿ.ವಿ.ಸಿಂಧು ಜಪಾನ್‌ನ ಓಕುಹರಾ ಅವರನ್ನು ಮಣಿಸಿ ಒಲಂಪಿಕ್ಸ್‌ನ ಫೈನಲ್ ಪ್ರವೇಶಿಸಿದರು. ಅಂದರೆ ಕೊನೆಪಕ್ಷ ಬೆಳ್ಳಿ ಖಚಿತ ಎಂದಾಗಿತ್ತು. ಇತ್ತ ಸೈನಾ ಲಂಡನ್ ಒಲಂಪಿಕ್ಸ್‌ನಲ್ಲಿ ಗೆದ್ದಿದ್ದು ಕೇವಲ ಕಂಚು. ಈ ಹಂತದಲ್ಲಿ ಟ್ವೀಟರ್‌ನಲ್ಲಿ ಕಾಣಿಸಿದ ಸೈನಾ ಟೀಕಾಕಾರು ಬರೆದ, ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಕೊಳ್ಳಿ ಸೈನಾ, ನಾವು ವಿಶ್ವದ ಟಾಪ್ ಆಟಗಾರ್ತಿಯರನ್ನು ಸೋಲಿಸಬಲ್ಲ ಸ್ವದೇಶದ ಪ್ರತಿಭೆಯನ್ನು ಕಂಡುಕೊಂಡಿದ್ದೇವೆ! ಸೈನಾ ಸಿಟ್ಟಾಗಲಿಲ್ಲ. “ಖಂಡಿತ. ಸಿಂಧು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಇದು ಭಾರತಕ್ಕೂ ಗೌರವ…ಎಂದರು. ತಮ್ಮ ಟೀಕೆಗೆ ಈ ಮಾದರಿಯ ಉತ್ತರ ನೋಡಿದ ಟ್ವೀಟಿಗ ಸುಸ್ತಾಗಿ, ತಕ್ಷಣ ಕ್ಷಮೆ ಕೋರಿದ. ಸೈನಾ “ನೋ ಪ್ರಾಬ್ಲಿಮ್, ಫ್ರೆಂಡ್ ಎಂದರು. ಸಮಾಧಾನಗೊಳ್ಳದ ಟೀಕಾಕಾರ ಅಲವತ್ತುಗೊಂಡ, ನಾನು ಆಡಿದ ಮಾತುಗಳಿಗೆ ಕ್ಷಮೆ ಕೋರುತ್ತೇನೆ. ಅವು ಕೆಟ್ಟ ಅಭಿರುಚಿಯದಾಗಿತ್ತು. ಈ ಮಾತುಗಳನ್ನು ವಾಪಾಸು ಪಡೆಯುತ್ತೇನೆ. ನಾನು ಸೈನಾ ಅಭಿಮಾನಿ ಮತ್ತು ಯಾವತ್ತಿಗೂ! ಹಿಂಗೂ ಸೈನಾ ಗೆದ್ದಿದ್ದರು! ಮಾ.ವೆಂ.ಸ.ಪ್ರಸಾದ್