Advertisement

ಸದೃಢ ದಾರಿಯಲ್ಲಿ ಸಾಗಲಿ ಭಾರತ

01:38 AM Feb 02, 2021 | Team Udayavani |

ಕೋವಿಡ್‌ ಕಾಲಘಟ್ಟದಲ್ಲಿಯೇ ಬಹುನಿರೀಕ್ಷಿತ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ಹಿಂದೆಂದೂ ಎದುರಾಗದಂಥ ಆರ್ಥಿಕ ಸಂಕಷ್ಟವನ್ನು, ಜಟಿಲತೆಯನ್ನು ದೇಶ ಎದುರಿಸುತ್ತಿರುವ ಈ ಸಮಯದಲ್ಲಿ 2021-22ರ ಬಜೆಟ್‌ಬಗ್ಗೆ ಸಹಜವಾಗಿಯೇ ನಿರೀಕ್ಷೆ ಅಧಿಕವಿತ್ತು. ಉದಾರೀಕರಣ, ಜಾಗತೀಕರಣ, ಬಹುವಿಧ ಸುಧಾರಣೆಗಳಿಗೆ ಭಾರತ ಬಾಗಿಲು ತೆರೆದು 30 ವರ್ಷ ಆಗಲಿರುವ ಹೊತ್ತಲ್ಲೇ, ಭಾರತ ಮತ್ತೂಂದು ಸುತ್ತಿನ ಅಪಾರ ಪಲ್ಲಟ ಹಾಗೂ ಸುಧಾರಣೆಗಳತ್ತ ಮುಖ ಮಾಡುವಂಥ ಅನಿವಾರ್ಯತೆ ಕೋವಿಡ್‌ನಿಂದಾಗಿ ಸೃಷ್ಟಿಯಾಗಿದೆ.

Advertisement

ಈ ಬಾರಿಯ ಬಜೆಟ್‌ ಹೆಚ್ಚಾಗಿ ಮೂಲಸೌಕರ್ಯಾಭಿವೃದ್ಧಿ ಮತ್ತು ಆರೋಗ್ಯ ವ್ಯವಸ್ಥೆಯ ಸುಧಾರಣೆಯತ್ತ ಗಮನಹರಿಸಿದೆ. ಆರೋಗ್ಯ ವಲಯದ ಸುಧಾರಣೆಗಾಗಿ ಕೇಂದ್ರ ಕಳೆದಬಾರಿಗಿಂತಲೂ ಎರಡು ಪಟ್ಟು ಹೆಚ್ಚು ಅನುದಾನ ಮೀಸಲಿಟ್ಟಿರುವುದು ಶ್ಲಾಘನೀಯ. ತನ್ನ ಜಿಡಿಪಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಬಜೆಟ್‌ ಮೀಸಲಿಡುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಒಂದೆಂಬ ಕುಖ್ಯಾತಿ ಮೊದಲಿನಿಂದಲೂ ಭಾರತಕ್ಕೆ ಇತ್ತು. ಆದರೆ, ಈಗ ಆ ಅಪವಾದದಿಂದ ಮುಕ್ತವಾಗುವ ನಡೆ ಇಡಲಾಗಿದೆ.
ಆದಾಗ್ಯೂ ಕೇಂದ್ರವು ಇವೆರಡರ ಜತೆಗೆ ಕೃಷಿ ಕ್ಷೇತ್ರಕ್ಕೂ ಆದ್ಯತೆ ನೀಡಿರುವುದಾಗಿ ಹೇಳುತ್ತಿದೆಯಾದರೂ ಬಜೆಟ್‌ನಲ್ಲಿ ಅಂಥ ದೃಷ್ಟಿಗೋಚರ ಅಂಶಗಳೇನೂ ಕಾಣುತ್ತಿಲ್ಲ. ಇನ್ನು ಆದಾಯ ತೆರಿಗೆಯ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ಈ ವಿಚಾರದಲ್ಲಿ ತೀರಾ ನಿರೀಕ್ಷೆಯಿಟ್ಟುಕೊಂಡಿದ್ದ ಮಧ್ಯಮ ವರ್ಗವಂತೂ ನಿರಾಸೆಗೊಂಡಿದೆ.

ಇವೆಲ್ಲದರ ನಡುವೆಯೇ ಈಗಲೂ ಮೋದಿ ಸರ್ಕಾರಕ್ಕೆ ನಂಬರ್‌ 1 ಸವಾಲು ಎದುರೊಡ್ಡುತ್ತಿರುವ ಸಮಸ್ಯೆಯೆಂದರೆ ನಿರುದ್ಯೋಗ. ಕೋವಿಡ್‌ ಕಾಲಘಟ್ಟದಲ್ಲಿ ಲಕ್ಷಾಂತರ ಜನ ನಿರುದ್ಯೋಗಿಗಳಾಗಿದ್ದಾರೆ. ನೇರವಾಗಿ ಉದ್ಯೋಗ ಸೃಷ್ಟಿಯ ದಿಕ್ಕಿನಲ್ಲಿ ಬಜೆಟ್‌ ಮಾತನಾಡಿಲ್ಲವಾದರೂ, ಎಂಎಸ್‌ಎಂಇಗಳಿಗೆ ಬೆಂಬಲ ದಾಯಕ ಯೋಜನೆಗಳು, ಮೂಲ ಸೌಕರ್ಯಾಭಿವೃದ್ಧಿಯತ್ತ ಗಮನ ಹರಿಸಿರುವುದು, ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ ಅಡಿಯಲ್ಲಿ ಗಮನಾರ್ಹ ಮೊತ್ತವನ್ನು ಮೀಸಲಿಟ್ಟಿರುವುದು ಉದ್ಯೋಗ ಸೃಷ್ಟಿಗೆ ನಾಂದಿ ಹಾಡಬಲ್ಲದು. ಇತ್ತೀಚೆಗಷ್ಟೇ ಆರ್‌ಬಿಐ ಗೃಹ ಖರ್ಚುಗಳು ವೇಗವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದನ್ನು ಆಧರಿಸಿ ಅರ್ಥವ್ಯವಸ್ಥೆ ಸುಧಾರಿಸುತ್ತಿದೆ ಎಂದು ಹೇಳಿದೆ. ಇನ್ನು ದೇಶವೂ ವಿ ಆಕಾರದ ಚೇತರಿಕೆಯತ್ತ ಸಾಗಿರುವುದು ಭರವಸೆ ಮೂಡಿಸುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವ್ಯಾಪಾರ ವಹಿವಾಟುಗಳು ವೇಗವಾಗಿ, ಉದ್ಯೋಗ ವಲಯಗಳು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಒಟ್ಟಲ್ಲಿ ಚೇತರಿಕೆ, ಬೆಳವಣಿಗೆಯ ವಿಚಾರದಲ್ಲಿ ಬಜೆಟ್‌ನ ಬಿತ್ತಿರುವ ಕನಸು ನನಸಾಗಬೇಕೆಂದರೆ, ಅನುದಾನದ ಸಕ್ಷಮ ಬಳಕೆ, ರಾಜ್ಯ-ಕೇಂದ್ರದ ನಡುವೆ ಸಹಭಾಗಿತ್ವವೂ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೇಶವು ಸದೃಢವಾಗಿ ಮುನ್ನಡೆಯುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next