Advertisement

ಕೋವಿಡ್‌ ನಿಷೇಧಾಜ್ಞೆ ನಡುವೆಯೂ ಸೈಲಿಂಗ್‌ ಸ್ಪರ್ಧೆ

05:21 PM Aug 22, 2021 | Team Udayavani |

ಮಂಡ್ಯ: ಕೋವಿಡ್‌ ನಿಷೇಧಾಜ್ಞೆ ನಡುವೆಯೂ ಶ್ರೀರಂಗಪಟ್ಟಣದ ಕೆಆರ್‌ಎಸ್‌ ಹಿನ್ನೀರಿನಲ್ಲಿ ನ್ಯಾಷನಲ್‌ ಸೈಲಿಂಗ್‌ ಚಾಂಪಿಯನ್‌ ಶಿಪ್‌ ಸ್ಪರ್ಧೆ (ದೋಣಿ ಸ್ಪರ್ಧೆ) ಏರ್ಪಡಿಸಲಾಗುತ್ತಿದೆ. ಇದಕ್ಕೆ ಯಾವುದೇ ಅನುಮತಿಯೂ ಪಡೆದಿಲ್ಲ. ಇದರ ಬಗ್ಗೆ ಕೇಳಲು ಹೋದ ಕೆಆರ್‌ಎಸ್‌ ಇಂಜಿನಿಯರ್‌ಗೆ ಆಯೋಜಕ ಉಡಾಫೆ ಉತ್ತರ ನೀಡಿ ಉದ್ಧಟತನ ಪ್ರದರ್ಶಿಸಿರುವ ಘಟನೆ ನಡೆದಿದೆ.

Advertisement

ಭಾರತ ವಿಹಾರ ಕೂಟ (ಯಾಚಿಂಗ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ) ಹಾಗೂ ಕರ್ನಾಟಕ ವಿಹಾರ ಕೂಟ (ಯಾಚಿಂಗ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕ), ತ್ರಿಶ್ನಾ ನೌಕಾಯಾನ ಕ್ಲಬ್‌, ಮದ್ರಾಸ್‌ ಸಪ್ಪರ್ಸ್‌ ಯಾಚಿಂಗ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕ ಮತ್ತು ಜನರಲ್‌ ತಿಮ್ಮಯ್ಯ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ವೆಂಚರ್‌ ವತಿಯಿಂದ ಆ.26ರಿಂದ 31ರವರೆಗೆ ಕೆಆರ್‌ಎಸ್‌ನ ಹಿನ್ನೀರಿನಲ್ಲಿ ವೈಎಐ ಮಲ್ಟಿ ಕ್ಲಾಸ್‌ ಸೈಲಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ಆಯೋಜಿಸಲಾಗಿದೆ.

ಆದರೆ, ಇದಕ್ಕೆ ಕಾವೇರಿ ನೀರಾವರಿ ನಿಗಮ, ಪರಿಸರ, ಮೀನುಗಾರಿಕೆ, ಪೊಲೀಸ್‌ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗಿದೆ. ಆದರೆ ಇದನ್ನು ಆಯೋಜಕರು ಪಡೆದಿಲ್ಲ.

ಆಯೋಜಕನಿಂದ ಉದ್ಧಟತನ: ಇದರ ಬಗ್ಗೆ ಶನಿವಾರ ನೀರಾವರಿ ಇಲಾಖೆ ಅಧಿಕಾರಿ ಸುರೇಶ್‌ ಬಾಬು ಸ್ಥಳಕ್ಕೆ ತೆರಳಿ ಸ್ಪರ್ಧೆ ಆಯೋಜನೆಗೆ ಅನುಮತಿ ಪತ್ರ ತೋರಿಸುವಂತೆ ಕೇಳಿದ್ದಾರೆ. ಆದರೆ ಸ್ಪರ್ಧೆ ಆಯೋಜಕ ಡಾ.ಅರವಿಂದ್‌ ಶರ್ಮ ಉದ್ಧಟತನ ಪ್ರದರ್ಶಿಸಿದ್ದಾನೆ. ಅನುಮತಿ ಪತ್ರಗಳನ್ನು ನೀಡದೆ ಅಧಿಕಾರಿ ಸುರೇಶ್‌ಬಾಬುಗೆ ಉಡಾಫೆ ಉತ್ತರ ನೀಡಿದ್ದಾನೆ. ಅಲ್ಲದೆ, ನಾನು ಇಲ್ಲೇ ಇದ್ದೇನೆ. ಎನಿ ಟೈಮ್‌ ಯು ಕ್ಯಾನ್‌ ಅರೆಸ್ಟ್‌ ಮೀ ಎಂದು ಅವಾಜ್‌ ಹಾಕಿದ್ದಾನೆ.

ಇದನ್ನೂ ಓದಿ:ವಿರಾಟ್ ಕೊಹ್ಲಿಯ ಅಗ್ರೆಶನ್ ಮಿತಿಯಲ್ಲಿರಬೇಕು: ಫಾರುಖ್ ಇಂಜಿನಿಯರ್

Advertisement

ನೋಟಿಸ್‌ ಕೊಡಿ: ನಿಮಗೆ ಏನ್‌ ಬೇಕು, ರೈಟಿಂಗ್‌ನಲ್ಲಿ ನೋಟಿಸ್‌ಕೊಡಿ. ನಿಮ್ಮ ಇಲಾಖೆ ಮೇಲೆ ನಿಮಗೆ ಬೆಲೆಯಿಲ್ಲ. ಕಾವೇರಿ ನೀರಾವರಿ ನಿಗಮವೇ ನಮಗೆ ಅನುಮತಿ ನೀಡಿದೆ. ದಾಖಲಾತಿಗಳನ್ನೆಲ್ಲ ಇಲಾಖೆಯ ಕಚೇರಿಗೆ ತಲುಪಿಸಿದ್ದೇನೆ. ನನ್ನನ್ನೇನು ನೀವು ಕೇಳುವಂತಿಲ್ಲ ಎಂದು ಅಧಿಕಾರಿಗೆ ಅವಾಜ್‌ ಹಾಕಿ ವಾಪಸ್‌ ಕಳುಹಿಸಿದ್ದಾನೆ.

ವಿಕೇಂಡ್‌ ಕರ್ಫ್ಯೂ ಇದ್ದರೂ ಕ್ರಮ ಕೈಗೊಳ್ಳದ ಪೊಲೀಸರು: ಸೈಲಿಂಗ್‌ ಚಾಂಪಿಯನ್‌ ಶಿಪ್‌ ಸ್ಪರ್ಧೆಗೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಇದು ಮೈಸೂರು ವ್ಯಾಪ್ತಿಯ ಕೆಆರ್‌ಎಸ್‌ ಹಿನ್ನೀರಿಗೆ ಸೇರಿದ ಸ್ಥಳವಾಗಿದ್ದು, ಇಲವಾಲ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರಲಿದೆ. ಈಗಾಗಲೇ ಕೋವಿಡ್‌  ಸೋಂಕಿನಿಂದ ಮೈಸೂರಿನಲ್ಲಿ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದೆ. ಇಂಥ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೂ ಸೈಲಿಂಗ್‌ ಚಾಂಪಿಯನ್‌ ಶಿಪ್‌ ನಡೆಸಲಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಡೆಯಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.

ಹೆಚ್ಚು ಜನ ಸೇರುವ ಸ್ಪರ್ಧೆ
ಕೆಆರ್‌ಎಸ್‌ ಹಿನ್ನೀರಿನಲ್ಲಿ ದೋಣಿ ವಿಹಾರ ನಡೆಸಲಾಗುತ್ತದೆ. ಅಲ್ಲದೇ, ಇದರಲ್ಲಿ ಸ್ಪರ್ಧೆಗಳು ನಡೆಯಲಿವೆ. ಇದರಿಂದ ಹೆಚ್ಚು ಜನ ಸೇರುವ
ಸಾಧ್ಯತೆ ಇದೆ. ಇದರಿಂದಕೋವಿಡ್‌ ಸೋಂಕಿನ 3ನೇ ಅಲೆಯ ಭೀತಿಯ ನಡುವೆಯೂ ಸ್ಪರ್ಧೆ ಏರ್ಪಡಿಸುತ್ತಿರುವುದು ಆತಂಕಕ್ಕೆಕಾರಣವಾಗಿದೆ

ಕಾರ್ಯಕ್ರಮಗಳ ವಿವರ
ಆ.25ರಂದು12ಕ್ಕೆ ಪತ್ರಿಕಾಗೋಷ್ಠಿ,27ರಂದು ಸಂಜೆ5ಕ್ಕೆ ಉದ್ಘಾಟನಾಕಾರ್ಯಕ್ರಮ, ಆ.28 ರಿಂದ31 ರವರೆಗೆ ಬೆಳಗ್ಗೆ 8ರಿಂದ ಸಂಜೆ5ರವರೆಗೆ
ಸ್ಪರ್ಧೆಗಳು ನಡೆಯಲಿವೆ. ಆ.31ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next