Advertisement

ರಾಯಚೂರು-ಯಾದಗಿರಿ ಮಾರ್ಗದಲ್ಲಿ ವಿಶೇಷ ರೈಲು

12:21 PM May 28, 2020 | Naveen |

ಸೈದಾಪುರ: ಕೋವಿಡ್ ಲಾಕ್‌ಡೌನ್‌ ವಿನಾಯಿತಿ ಬಳಿಕ ದಕ್ಷಿಣ ಮಧ್ಯ ರೈಲ್ವೆ ಜೂನ್‌ 1ರಿಂದ ರಾಯಚೂರು ಮತ್ತು ಯಾದಗಿರಿ ಮಾರ್ಗವಾಗಿ ಬೆಂಗಳೂರು, ಮುಂಬೈ, ತಿರುಪತಿ ಮತ್ತು ನಿಜಮಾಬಾದ್‌ ನಗರಗಳಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಯಾಣಿಕ ರೈಲು ಪ್ರಾರಂಭಿಸಲಿದೆ.

Advertisement

ದಕ್ಷಿಣ ಮಧ್ಯ ರೈಲ್ವೆ ವಲಯ ವ್ಯಾಪ್ತಿಯ ಸೇಡಂ, ನಾಲವಾರ(ಕಲಬುರಗಿ ಜಿಲ್ಲೆ), ಯಾದಗಿರಿ, ಸೈದಾಪುರ ಮತ್ತು ರಾಯಚೂರು ರೈಲು ನಿಲ್ದಾಣಗಳಲ್ಲಿ ಮೇ 22ರಿಂದ ಮುಂಗಡ ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರದ ವರೆಗೆ ಒಟ್ಟು 26 ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿದ್ದಾರೆ. ಮುಂಬೈ-ಬೆಂಗಳೂರು ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲು ಸಮಯದಲ್ಲಿಯೇ ವಿಶೇಷ ಡೇಲಿ ಎಕ್ಸ್‌ಪ್ರಸ್‌(01301/02) ಬೆಳಗ್ಗೆ 8:10ಕ್ಕೆ ಮುಂಬೈಯಿಂದ ಹೊರಟು ದಾದರ್‌, ಸೊಲ್ಲಾಪುರ, ಅಕ್ಕಲಕೋಟ ರಸ್ತೆ, ದುಧನಿ, ಗಂಗಾಪುರ ರಸ್ತೆ, ಕಲಬುರಗಿ, ಶಹಾಬಾದ, ವಾಡಿ, ನಾಲವಾರ, ಯಾದಗಿರಿ, ಸೈದಾಪುರ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಆದೋನಿ ಮತ್ತು ಗುಂತಕಲ್‌ ಮಾರ್ಗವಾಗಿ ಬೆಂಗಳೂರಿಗೆ ಮರುದಿನ ಬೆಳಗ್ಗೆ 8:50ಕ್ಕೆ ತಲುಪಲಿದೆ. ಅದೇ ರೀತಿಯಾಗಿ ನಿಜಾಮಾಬಾದ-ತಿರುಪತಿ- ನಿಜಾಮಾಬಾದ್‌ ರಾಯಲಸೀಮಾ ಎಕ್ಸ್ ಪ್ರೆಸ್‌ ರೈಲು ಸಮಯದಲ್ಲಿಯೇ ವಿಶೇಷ ಡೇಲಿ ಎಕ್ಸ್‌ಪ್ರೆಸ್‌ (02793/94) ಬೆಳಗ್ಗೆ 2:00ಕ್ಕೆ ನಿಜಾಮಾಬಾದಿಂದ ಹೊರಟು ಸಿಕಂದ್ರಬಾದ್‌ ಮೂಲಕ ಸೇಡಂ, ಚಿತ್ತಾಪುರ, ಹಲಕಟ್ಟಿ, ನಾಲವಾರ, ಯಾದಗಿರಿ, ಸೈದಾಪುರ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ ಗುಂತಕಲ್‌ ಜಂಕ್ಷನ್‌ ಮೂಲಕ ಮರುದಿನ ಬೆಳಗ್ಗೆ 6:00ಕ್ಕೆ ತಿರುಪತಿಗೆ ತಲುಪಲಿದೆ. ಇದರಿಂದ ಈ ಭಾಗದಿಂದ ಹೋಗುವ ಮತ್ತು ಬರುವ ವಲಸೆ ಕಾರ್ಮಿಕರಿಗೆ ಮತ್ತು ಇತರ ಪ್ರಯಾಣಿಕರಿಗೆ ವಿಶೇಷ ರೈಲು ಅನುಕೂಲವಾಗಲಿದೆ.

ಪ್ರಯಾಣ ಮಾರ್ಗಸೂಚಿ
ಅಧಿಕೃತ ವೆಬ್‌ಸೈಟ್‌ ಮೂಲಕ ಮತ್ತು ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ಕಾಯ್ದಿರಿಸಬಹುದು. ವೇಟಿಂಗ್‌ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಪ್ರಯಾಣಿಸುವ ಮತ್ತು ಟಿಕೆಟ್‌ ರದ್ದು ಮಾಡುವ ಅವಕಾಶವಿಲ್ಲ ಹಾಗೂ ಪ್ರತಿಯೊಬ್ಬ ಪ್ರಯಾಣಿಕರಿಗೂ ಸ್ಕ್ರೀನಿಂಗ್‌ ಕಡ್ಡಾಯವಾಗಿದೆ. ರೋಗದ ಲಕ್ಷಣ ಇಲ್ಲದವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಮತ್ತು ರೈಲಲ್ಲಿ ಹೊದಿಕೆ ಒದಗಿಸಲಾಗುವುದಿಲ್ಲ ಎಂದು ರೈಲ್ವೆ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ಲ್ಲಿ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಟಿಕೆಟ್‌ ಕಾಯ್ದಿರಿಸಲು ಜನ ವಿರಳ
ದಕ್ಷಿಣ ಮಧ್ಯ ರೈಲ್ವೆ ವಲಯ ಮೇ 22ರಿಂದ ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆ ಆರಂಭಿಸಿದೆ. ಬುಧವಾರದ ವರೆಗೆ ಸೈದಾಪುರದಿಂದ ಮುಂಬೈಗೆ ತೆರಳುವ ಪ್ರಯಾಣಿಸುವರ ಒಬ್ಬರು ಮತ್ತು ಬೆಂಗಳೂರುಗೆ 25 ಜನ ಪ್ರಯಣಿಕರು ತಮ್ಮ ಟಿಕೆಟ್‌ ಕಾಯ್ದಿರಿಸಿದ್ದಾರೆ. ಆದರೆ ಮಹಾನಗರಗಳಿಂದ ಆಗಮಿಸುವ ಪ್ರಯಾಣಿಕರಿಗೆ ಜಿಲ್ಲಾಡಳಿತ ಯಾವ ಮುಂಜಾಗೃತ ಕ್ರಮ ಕೈಗೊಳ್ಳುತ್ತದೆ ಎಂಬುದುನ್ನು ಕಾಯ್ದು ನೋಡಬೇಕಾಗಿದೆ.

ಭೀಮಣ್ಣ ಬಿ. ವಡವಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next