ಸೈದಾಪುರ: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೋವಿಡ್ ತಡೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನು ಉಭಯ ಜಿಲ್ಲೆಗಳ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಿ ಕ್ವಾರಂಟೈನ್ ಕೇಂದ್ರಗಳಿಗೆ ಕಳಿಸಲಾಗುತ್ತಿದೆ. ಆದರೆ ಇದನ್ನು ತಪ್ಪಿಸಿಕೊಳ್ಳಲು ಪ್ರಯಾಣಿಕರು ತೆಲಂಗಾಣದ ಕೃಷ್ಣಾ ರೈಲು ನಿಲ್ದಾಣದಲ್ಲೇ ಇಳಿದು ರಸ್ತೆ ಮಾರ್ಗದ ಮೂಲಕ ತಮ್ಮ ಊರಿಗೆ ಸೇರುತ್ತಿದ್ದಾರೆ. ಇದು ಕೋವಿಡ್ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಜೂ.1ರಿಂದ ಮುಂಬಯಿನಿಂದ ಆಗಮಿಸುವ ಮತ್ತು ಮುಂಬಯಿಗೆ ತೆರಳುವ ಪ್ರಯಾಣಿಕರಿಗೆ ಎಕ್ಸ್‌ಪ್ರೆಸ್ ರೈಲು ಆರಂಭಿಸಲಾಗಿದೆ. ನಿತ್ಯ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಮುಂಬಯಿನಿಂದ ಯಾದಗಿರಿ, ರಾಯಚೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಮಧ್ಯದಲ್ಲಿ ತೆಲಂಗಾಣದ ಕೃಷ್ಣಾ ರೈಲು ನಿಲ್ದಾಣವಿದೆ. ಉಭಯ ಜಿಲ್ಲೆಗಳಿಗೆ ಗಡಿಗೆ ಹೊಂದಿಕೊಂಡ ಈ ನಿಲ್ದಾಣದಲ್ಲಿ ಇಳಿವ ಪ್ರಯಾಣಿಕರು ರಸ್ತೆ ಮಾರ್ಗದ ಮೂಲಕ ತಮ್ಮ ಊರಿಗೆ ಸೇರುತ್ತಿದ್ದಾರೆ.
ಆರಂಭದಲ್ಲಿ ನೂರಾರು ಪ್ರಯಾಣಿಕರು: ಪ್ರಾರಂಭದಲ್ಲಿ ಮುಂಬಯಿಂದ ಆಗಮಿಸುತ್ತಿದ್ದ ರೈಲಿನಲ್ಲಿ ನಿತ್ಯ ನೂರಾರು ಜನ ವಲಸೆ ಕಾರ್ಮಿಕರು ರಾಯಚೂರು, ಯಾದಗಿರಿ ಜಿಲ್ಲೆ ನಿಲ್ದಾಣಗಳಲ್ಲಿ ಇಳಿಯುತ್ತಿದ್ದರು. ವಲಸಿಗರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಕಡ್ಡಾಯವಾಗಿ 14 ದಿನ ಸಾಂಸ್ಥಿಕ ಕ್ವಾರಂಟೈನ್ ಗೆ ಕಳಿಸಲಾಗುತ್ತಿತ್ತು. ಇತ್ತೀಚೆಗೆ ತೆಲಂಗಾಣದ ಕೃಷ್ಣಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕೇವಲ ಥರ್ಮಲ್ ಸ್ಕ್ರೀನಿಂಗ್ ಮಾಡಿ ಅವರ ಮಾಹಿತಿ ಸಂಗ್ರಹಿಸಿ ಕಳಿಸಲಾಗುತ್ತಿದೆ. ಇದನ್ನೇ ಬಳಸಿಕೊಂಡ ರಾಯಚೂರು, ಯಾದಗಿರಿ ಜಿಲ್ಲೆಯ ವಿವಿಧ ನಗರ, ಗ್ರಾಮಗಳ ವಲಸಿಗರು ಕೃಷ್ಣಾ ನಿಲ್ದಾಣದಲ್ಲಿ ಇಳಿದು ರಸ್ತೆ ಮಾರ್ಗದ ಮೂಲಕ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದಾರೆ.
ಕೃಷ್ಣಾ ರೈಲು ನಿಲ್ದಾಣದಲ್ಲಿ ತಮ್ಮ ಊರಿನ ಹೆಸರು ಹೇಳದೇ ತೆಲಂಗಾಣದ ಹಿಂದುಪುರ, ಚೇಗುಂಟಾ, ಕುಣಸಿ, ಐನಾಪುರ ಗ್ರಾಮಗಳ ಹೆಸರು ಹೇಳಿ ರಸ್ತೆ ಮಾರ್ಗದ ಮೂಲಕ ರಾಯಚೂರು, ಯಾದಗಿರಿ ಜಿಲ್ಲೆಗೆ ಪ್ರಯಾಣಿಸುತ್ತಿದ್ದಾರೆ ಎಂದು ಕೃಷ್ಣಾ ರೈಲು ನಿಲ್ದಾಣದ ಹೆಸರೇಳಲಿಚ್ಛಿಸದ ಸಿಬ್ಬಂದಿ ಹೇಳುತ್ತಾರೆ. ಮಹಾರಾಷ್ಟ್ರದ ಮುಂಬಯಿ, ಇತರೆಡೆ ಉದ್ಯೋಗದಲ್ಲಿರುವವರು ಮದುವೆ, ಮುಂಜಿ, ತಂದೆ-ತಾಯಿಯನ್ನು ನೋಡಲು ಸಂಬಂಧಿಕರ ಮನೆಗೆ ಆಗಮಿಸುವವರು ಕೃಷ್ಣಾ ನಿಲ್ದಾಣದಲ್ಲಿ ಇಳಿದು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗೆ ತೆರಳುತ್ತಿದ್ದಾರೆ. ಹೀಗಾಗಿ ಈ ಜಿಲ್ಲೆಗಳ ರೈಲು ನಿಲ್ದಾಣಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಇಳಿಯುತ್ತಿದ್ದಾರೆನ್ನಲಾಗಿದೆ. ಮೊದಲೆಲ್ಲ ಕಳ್ಳ ಮಾರ್ಗದ ಮೂಲಕ ಉಭಯ ಜಿಲ್ಲೆಗೆ ಆಗಮಿಸುತ್ತಿದ್ದವರು ಈಗ ಕೃಷ್ಣಾ ರೈಲು ನಿಲ್ದಾಣದಲ್ಲಿ ಇಳಿದು ರಸ್ತೆ ಮಾರ್ಗದ ಮೂಲಕವೇ ಆಗಮಿಸುತ್ತಿದ್ದು, ಉಭಯ ಜಿಲ್ಲೆಗಳಲ್ಲಿ ಕೋವಿಡ್ ಅರ್ಭಟ ಹೆಚ್ಚಳಕ್ಕೆ ಕಾರಣವಾಗುತ್ತಿದ್ದು, ಇದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.
ಮಹಾರಾಷ್ಟ್ರದ ನಂಟಿನಿಂದ ಜಿಲ್ಲೆಯಲ್ಲಿ ಕೋವಿಡ್ ಹಬ್ಬಿದೆ. ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೂ ಕೆಲವರ ಅಡ್ಡ ಮಾರ್ಗ ಹಿಡಿಯುವುದರಿಂದ ಸಮುದಾಯಕ್ಕೆ ಕೋವಿಡ್ ಹರಡುವುದು ಸನ್ನಿಹಿತವಾಗಿದೆ. ಜಿಲ್ಲಾಡಳಿತ ಅಂತಾರಾಜ್ಯ ಗಡಿಯಲ್ಲಿ ಸೂಕ್ತ ತಪಾಸಣೆ ಮಾಡಬೇಕು. ವಲಸಿಗರು ಜಿಲ್ಲಾಡಳಿತದ ಕ್ರಮಗಳನ್ನು ಪಾಲಿಸಬೇಕು.
ಶಶಿಕಲಾ ಬಿ. ಪಾಟೀಲ,
ಜಿಪಂ ಸದಸ್ಯೆ
ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಅನ್ಯ ಮಾರ್ಗಗಳ ಮೂಲಕ ಗ್ರಾಮಗಳಿಗೆ ತೆರಳಿದರೆ ಅವರ ಮಾಹಿತಿ ಕಲೆ ಹಾಕಲು ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ಕೃಷ್ಣಾ ರೈಲು ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಆಗಮಿಸುವವರ ಪತ್ತೆಗೆ ಯಾದಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿಶೇಷ ಚೆಕ್‌ಪೋಸ್ಟ್ ಸ್ಥಾಪನೆಗೆ ಕ್ರಮ ವಹಿಸುವೆ.
ಚನ್ನಮಲ್ಲಪ್ಪ ಘಂಟಿ,
ತಹಶೀಲ್ದಾರ್, ಯಾದಗಿರಿ
ಭೀಮಣ್ಣ ಬಿ. ವಡವಟ್