ಸೈದಾಪುರ: ಶಿಷ್ಯರು ಗುರುವಿನಿಂದ ಜ್ಞಾನ ಮಾತ್ರ ಅಪೇಕ್ಷಿಸಿ. ಇದರಿಂದ ಗುರುವಿನ ಸ್ಥಾನ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ಸೋಮೇಶ್ವರಾನಂದ ಶ್ರೀ ಹೇಳಿದರು.
ಪಟ್ಟಣದ ಸಿದ್ಧಚೇತನಾಶ್ರಮ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮ ನಿಮಿತ್ತ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರಮಾತ್ಮನ ಅವತಾರ ರೂಪ ಗುರು. ಆ ಸ್ಥಾನದಲ್ಲಿರುವ ಯಾವ ವ್ಯಕ್ತಿಯನ್ನಾದರು ಗೌರವದಿಂದ ಕಾಣಿ. ಸ್ಥಳ, ಸಮಯ ಹಾಗೂ ವ್ಯಕ್ತಿ ಬದಲಾದರು ಗುರುವಿನ ಸ್ಥಾನ ಬದಲಾಗದು. ಅಜ್ಞಾನದ ಕತ್ತಲನ್ನು ದೂರ ಮಾಡಿ, ವಿವೇಕದ ಬೆಳಕು ಹರಿಸಿ ವ್ಯಕ್ತಿಯನ್ನು ಸುಜ್ಞಾನದ ಕಡೆ ಕೊಂಡಯ್ಯುವ ಮಾಹನ್ ದೈವಿ ಗುರು ಎಂದು ತಿಳಿಸಿದರು.
ಗುರು ನೀಡಿದ ಸಂದೇಶಗಳನ್ನು ಅರಿತು ಸತ್ಕಾರ್ಯಗಳನ್ನು ಮಾಡುತ್ತಾ ಮನಃ ಶಾಂತಿಯನ್ನು ಪಡೆಯಬೇಕು. ಸನಾತನ ಧರ್ಮ ಸಂಸ್ಕೃತಿಯಲ್ಲಿ ತಂದೆ-ತಾಯಿ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ ಎಂದು ತಿಳಿಸಿದರು.
ನಂತರ ಸೈದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರಿಂದ ಶ್ರೀ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಶ್ರೀ ಸ್ವಾಮೀಜಿ ಅವರಿಗೆ ತುಲಾಭಾರ ಮತ್ತು ಪಾದ ಪೂಜೆಯ ಮೂಲಕ ಗುರುವಂದನಾ ಸಲ್ಲಿಸಲಾಯಿತು.