ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ(ಮೇ 10) ಸಿಎಸ್‌ಕೆ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಇಬ್ಬರೂ ಅಮೋಘ ಶತಕಗಳನ್ನು ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ವೇಗದ 1000 ರನ್
ಸಾಯಿ ಸುದರ್ಶನ್ ಅವರು ಐಪಿಎಲ್ ನಲ್ಲಿ ವೇಗದ 1000 ರನ್‌ಗಳ ಹೆಗ್ಗುರುತನ್ನು ತಲುಪಿದ ಭಾರತೀಯ ದಾಖಲೆಯನ್ನು ನಿರ್ಮಿಸಿದರು. ಎಡಗೈ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ರುತುರಾಜ್ ಗಾಯಕ್ವಾಡ್ ಜಂಟಿಯಾಗಿ ಹೊಂದಿದ್ದ ದಾಖಲೆಯನ್ನು ಮುರಿದರು. ಸಚಿನ್ ತೆಂಡೂಲ್ಕರ್ ಮತ್ತು ರುತುರಾಜ್ ಗಾಯಕ್ವಾಡ್, ಇಬ್ಬರೂ ತಮ್ಮ 31 ನೇ ಇನ್ನಿಂಗ್ಸ್‌ನಲ್ಲಿ ಮೈಲಿಗಲ್ಲನ್ನು ತಲುಪಿದ್ದರು.
ಸುದರ್ಶನ್ ಅವರು ಮ್ಯಾಥ್ಯೂ ಹೇಡನ್ ಜತೆಗೆ 1000 ಐಪಿಎಲ್ ರನ್ ಗಳಿಸಿದ ಜಂಟಿ ಮೂರನೇ ವೇಗದ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ಐಪಿಎಲ್ 2008 ರಲ್ಲಿ ಪಂಜಾಬ್ ಪರ ಆಡುವಾಗ ಆರೆಂಜ್ ಕ್ಯಾಪ್ ಗೆದ್ದ ಶಾನ್ ಮಾರ್ಷ್ 21 ಇನ್ನಿಂಗ್ಸ್‌ಗಳಲ್ಲಿ ದಾಖಲೆ ಹೊಂದಿದ್ದರು. ಲೆಂಡ್ಲ್ ಸಿಮನ್ಸ್ ಎರಡನೇ ಸ್ಥಾನದಲ್ಲಿದ್ದಾರೆ (23 ಇನ್ನಿಂಗ್ಸ್). ಜಾನಿ ಬೈರ್‌ಸ್ಟೋವ್, ಕ್ರಿಸ್ ಗೇಲ್, ಕೇನ್ ವಿಲಿಯಮ್ಸನ್ ಮತ್ತು ಮೈಕಲ್ ಹಸ್ಸಿ ಕ್ರಮವಾಗಿ 26, 27, 28 ಮತ್ತು 30 ಇನ್ನಿಂಗ್ಸ್‌ಗಳಲ್ಲಿ ದಾಖಲೆ ಬರೆದಿದ್ದರು.
2023 ರ ಐಪಿಎಲ್ ಫೈನಲ್‌ನಲ್ಲಿ, ಸುದರ್ಶನ್ ಅವರು 96 ರನ್ ಗೆ ಔಟಾಗಿ ಸಿಎಸ್‌ಕೆ ವಿರುದ್ಧ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ ಶುಕ್ರವಾರ ಅವಕಾಶವನ್ನು ಅವರು ಕಳೆದುಕೊಳ್ಳಲಿಲ್ಲ. ತನ್ನ ಚೊಚ್ಚಲ ಐಪಿಎಲ್ ಶತಕವನ್ನು 50 ಎಸೆತಗಳಲ್ಲಿ ಗಳಿಸಿದರು. ಅವರು 32 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿ ನಂತರ ಶತಕವನ್ನು ಸಿಮರ್ಜೀತ್ ಸಿಂಗ್ ಅವರ ಎಸೆತವನ್ನು ಲಾಂಗ್ ಲೆಗ್‌ಗೆ ಸಿಕ್ಸರ್‌ಗೆ ಅಟ್ಟಿದರು.
50 ಎಸೆತಗಳಲ್ಲಿ ಶತಕ ಪೂರೈಸಿದ ಶುಭಮನ್ ಗಿಲ್ ಜತೆಗೆ ಸುದರ್ಶನ್ ಸೂಪರ್ ಕಿಂಗ್ಸ್‌ಗೆ ಸಾಕಷ್ಟು ತಲೆನೋವು ತಂದರು. ಗಿಲ್ ಮತ್ತು ಶುಭಮನ್ ಐಪಿಎಲ್ ಇತಿಹಾಸದಲ್ಲಿ ಆರನೇ 200 ಪ್ಲಸ್ ಜತೆಯಾಟವನ್ನು ದಾಖಲಿಸಿದರು. ಇವರಿಬ್ಬರು ಅಂತಿಮವಾಗಿ 17.2 ಓವರ್‌ಗಳಲ್ಲಿ ಆರಂಭಿಕ ವಿಕೆಟ್‌ಗೆ 210 ರನ್‌ಗಳ ಜತೆಯಾಟವನ್ನು ಆಡಿದರು. ಗುಜರಾತ್ ತಂಡ 3 ವಿಕೆಟ್ ನಷ್ಟಕ್ಕೆ 231 ರನ್ ಕಲೆ ಹಾಕಿತು.