ಬೆಂಗಳೂರು: ತಿಂಗಳಿನಿಂದ ಪಕ್ಷದ ಜಿಲ್ಲಾವಾರು ಮುಖಂಡರು, ವಿಧಾನಸಭೆ ಕ್ಷೇತ್ರವಾರು ನಾಯಕರ ಸಭೆ ನಡೆಸಿ ಪಕ್ಷ ಸಂಘಟನೆ ಪ್ರಯತ್ನದಲ್ಲಿದ್ದ ಜೆಡಿಎಸ್, ಉಪ ಚುನಾವಣೆ ಎದುರಿಸಲು ಮಾನಸಿಕವಾಗಿ ಸಜ್ಜಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹುಣಸೂರು, ಮಹಾಲಕ್ಷ್ಮಿ ಲೇ ಔಟ್, ಯಶವಂತಪುರ, ಕೆ.ಆರ್.ಪುರ, ಹೊಸಕೋಟೆ ಸೇರಿ ವಿಧಾನಸಭೆ ಕ್ಷೇತ್ರವಾರು ಒಂದು ಸುತ್ತಿನ ಕಾರ್ಯಕರ್ತರು, ಮುಖಂಡರ ಸಭೆ ಪೂರ್ಣಗೊಳಿಸಿದ್ದಾರೆ.
ಅತ್ತ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಇತ್ತ ಮೈಸೂರಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾ ಮುಖಂಡರ ಸಭೆ ನಡೆಸುತ್ತಿದ್ದರು. ಅಲ್ಲಿ ಪ್ರಮುಖವಾಗಿ “ಹುಣಸೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲೇಬೇಕು. 15 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ’ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದರು. ಇತ್ತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷದ ಕಚೇರಿಯಲ್ಲಿ ಅನುಮೋದನೆ ಮಾಡಿದರು.
ಇಂದು ಸಭೆ: ಭಾನುವಾರ ಪಕ್ಷದ ನಾಯಕರ ಸಭೆ ಕರೆದಿದ್ದು 15 ಕ್ಷೇತ್ರಗಳಲ್ಲಿ ಎಷ್ಟು ಕಡೆ ಸ್ಪರ್ಧೆ ಮಾಡಬೇಕು ಎಂಬುದನ್ನು ತೀರ್ಮಾನಿಸಿ ಮುಂದಿನ ವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. 15 ಕ್ಷೇತ್ರಗಳ ಪೈಕಿ ಮಹಾಲಕ್ಷ್ಮಿ ಲೇ ಔಟ್, ಯಶವಂತಪುರ, ಹುಣಸೂರು, ಚಿಕ್ಕಬಳ್ಳಾಪುರ, ಹೊಸಕೋಟೆ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅಭ್ಯರ್ಥಿಗಳ ಕೊರತೆಯಿಲ್ಲ.
ಬೆಂಗಳೂರಿನ ಶಿವಾಜಿನಗರ, ಕೆ.ಆರ್.ಪುರಂನಲ್ಲಿ ಅಭ್ಯರ್ಥಿಗಳಿಗೆ ತಲಾಷೆ ನಡೆಸಬೇಕಾಗಿದೆ. ಜತೆಗೆ, ಗೋಕಾಕ್, ರಾಣೆಬೆನ್ನೂರು, ಕಾಗವಾಡ, ಹಿರೇಕೆರೂರು, ಅಥಣಿ, ಯಲ್ಲಾಪುರ, ವಿಜಯನಗರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆಸಬೇಕಾಗಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕೊಡುವುದಾಗಿ ಹೇಳಿದ್ದು, ತಮ್ಮ ಕುಟುಂಬದವರು ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಗೌಡರು ಏನೆಂದರು?: “ನಾನು ಉಪ ಚುನಾವಣೆ ಹಿನ್ನೆಲೆಯಲ್ಲಿ 2ತಿಂಗಳಿನಿಂದ ಸಭೆ ನಡೆಸುತ್ತಿದ್ದೇನೆ. ಎಲ್ಲರ ಅಭಿಪ್ರಾಯವೂ ಕಾಂಗ್ರೆಸ್ ಜತೆ ಮೈತ್ರಿ ಬೇಡ ಎಂಬುದೇ ಆಗಿದೆ. ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಹೈಕಮಾಂಡ್‌ಗೆ ಗೊಂದಲ ಆಗಿದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ತೀರ್ಮಾನ ಮಾಡುವ ತಲೆನೋವು ಅವರಿಗೆ ಬೇಡ ಎಂದು ನಾವೇ ಮೈತ್ರಿಗೆ ಇತಿಶ್ರೀ ಹಾಡಿದ್ದೇವೆ’ ಎಂದರು.
ಹಾಗೆಯೇ ಚುನಾವಣೆ ಇಷ್ಟು ಬೇಗ ಬರುತ್ತೆ ಎಂದು ನಿರೀಕ್ಷಿಸಿರಲಿಲ್ಲ. ಸೋಲು-ಗೆಲುವು ಆ ಮೇಲಿನದು. ಕಾಂಗ್ರೆಸ್ ಸಹವಾಸ ಸಾಕು ಎಂದು ಕಾರ್ಯಕರ್ತರ ಮಾತಿಗೆ ಬೆಲೆ ನೀಡಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ. ಕೋಡಿ ಮಠ ಶ್ರೀಗಳ ಭವಿಷ್ಯ ಕುರಿತು “ನಾನು ಪ್ರತಿಕ್ರಿಯೆ ನೀಡಲ್ಲ. ಮಧ್ಯಂತರ ಚುನಾವಣೆ ಬಗ್ಗೆ ಈಗಲೇ ಹೇಳಲು ನಾನೇನು ಡಾಕ್ಟ್ರೇ’ ಎಂದು ಪ್ರಶ್ನಿಸಿದರು.
ಉಪ ಚುನಾವಣೆ ಘೋಷಣೆ ಆಗಿದ್ದು ಈಗಾಗಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅನುಭವದ ಆಧಾರದ ಮೇಲೆ ಎಲ್ಲ ಕಡೆ ಸ್ವತಂತ್ರ ಸ್ಪರ್ಧೆ ಎಂದು ಘೋಷಿಸಿದ್ದಾರೆ. ಪಕ್ಷದಲ್ಲಿ ಎಲ್ಲರ ಅಭಿಪ್ರಾಯವೂ ಅದೇ ಆಗಿದೆ.
-ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ
ಉಪ ಚುನಾವಣಾ ಫಲಿತಾಂಶ ರಾಜ್ಯ ರಾಜ ಕೀಯದ ಮುಂದಿನ ಬೆಳವಣಿಗೆ ನಿರ್ಧರಿಸುತ್ತದೆ. ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಹುಣಸೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಹೆಚ್ಚು ಶ್ರಮ ಹಾಕುತ್ತೇವೆ. ಕಾಂಗ್ರೆಸ್ ಜತೆ ಮೈತ್ರಿ ಇಲ್ಲ. 8 ಕ್ಷೇತ್ರ ಗೆಲ್ಲುವ ಗುರಿ ಹೊಂದಲಾಗಿದೆ.
-ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ