Advertisement
ಸದ್ಯ 1000 ಸಾಯ್ ಕೋಚ್‌ಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ಪರೀಕ್ಷೆ ನಡೆಯಲಿದೆ. ತರಬೇತುದಾರರ ಸಕ್ಷಮತೆ, ತಾಳ್ಮೆ, ಹೊಂದಿಕೊಳ್ಳುವ ಗುಣ ಪರೀಕ್ಷಿಸಲು ತೀರ್ಮಾನ ನಡೆದಿದೆ. ಉತ್ತರ ವಲಯದಿಂದ ಪರೀಕ್ಷೆ ಆರಂಭವಾಗಲಿದೆ. ಸೆಪ್ಟಂಬರ್‌ಗೆ ಪರೀಕ್ಷೆ ಮುಕ್ತಾಯವಾಗಲಿದೆ. ಫಿಟ್ ಆದವರಷ್ಟೇ ಕೋಚ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರಿಗೆ ಸೇವೆಯಿಂದ ಗೇಟ್‌ಪಾಸ್ ಸಿಗಲಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
Related Articles
Advertisement
ಯಾಕಾಗಿ ಇಂತಹ ಕ್ರಮ?: ಇದ್ದಕ್ಕಿದಂತೆ ಕೋಚ್‌ಗಳಿಗೆ ಇಂತಹದೊಂದು ಪರೀಕ್ಷೆಯನ್ನು ನಡೆಸುತ್ತಿರುವುದು ಏಕೆ? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಸ್ವತಃ ಕೇಂದ್ರ ಕ್ರೀಡಾ ಸಚಿವಾಲಯ ಮೂಲಗಳು ಮಾಹಿತಿ ನೀಡಿವೆ. ಕೋಚ್‌ಗಳ ಗುಣಮಟ್ಟ ಹೇಗಿದೆ? ಸದ್ಯ ಅವರು ಉತ್ತಮ ಕೋಚಿಂಗ್ ನೀಡುವಷ್ಟು ಸಶಕ್ತರೇ. ಭಾರತೀಯ ಆ್ಯತ್ಲೀಟ್‌ಗಳಿಗೆ ನೀಡಿ ರುವ ಕೋಚ್‌ಗಳಲ್ಲಿ ಎಷ್ಟು ಜನ ಫಿಟ್ ಆಗಿದ್ದಾರೆ. ಯಾರೆಲ್ಲ ಫಿಟ್‌ನೆಸ್ ಹೊಂದಿಲ್ಲ ಎನ್ನುವಂತಹ ಪ್ರಶ್ನೆಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿದ್ದೇವೆ. ಸಾಯ್ ಕೋಚ್‌ಗಳ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುತ್ತೇವೆ ಎಂದು ತಿಳಿಸಲಾಗಿದೆ.
ಅಂತಿಮ ಫಲಿತಾಂಶ ಪ್ರಕಟಿಸಲಿರುವ ಬಿವಿಪಿ ಸಮಿತಿ: ಸಾಯ್ ಆಡಳಿತ ಮಂಡಳಿ ಮುಖ್ಯಸ್ಥ ಬಿವಿಪಿ ರಾವ್ ನೇತೃತ್ವದಲ್ಲಿ 5 ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ರಾವ್ ನಿವೃತ್ತ ಐಎಎಸ್ ಅಧಿಕಾರಿ. ಪರೀಕ್ಷೆಯಲ್ಲಿ ಇವರ ತಂಡ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಪರೀಕ್ಷೆ ನಡೆಸುವುದು ತಜ್ಞ ವೈದ್ಯರ ತಂಡ. ಅಂತಿಮ ವರದಿಯನ್ನು ರಾವ್ ನೇತೃತ್ವದ ಸಮಿತಿಗೆ ನೀಡಲಿದ್ದಾರೆ. ಅಂತಿಮ ನಿರ್ಧಾರವನ್ನು ಸಮಿತಿಯೇ ಕೈಗೊಳ್ಳಲಿದೆ.
ಅರ್ಹರಿಗಷ್ಟೇ ಕೆಲಸ: ತರಬೇತುದಾರರ ಫಿಟ್‌ನೆಸ್ ವಿಷಯದಲ್ಲಿ ಕ್ರೀಡಾ ಸಚಿವಾಲಯ ಖಡಕ್ ನಿರ್ಧಾರ ಪ್ರಕಟಿಸಿದೆ. ಅರ್ಹರಿಗಷ್ಟೇ ಕೆಲಸ ಎನ್ನುವ ಸಂದೇಶ ಸಾರಿದೆ. ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ರಾಯ್‌ಪುರಕ್ಕೆ ತೆರಳಿದ್ದರು. ಆ್ಯತ್ಲೀಟ್‌ಗಳಿಗೆ ಸಿಗುತ್ತಿರುವ ಕೋಚಿಂಗ್ ಬಗ್ಗೆ ಅಸಮಾಧಾನ ಹೊಂದಿದ್ದರು. ಬಳಿಕ ಕೋಚ್‌ಗಳಿಗೆ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿದ್ದರು.