ಬೆಳಗಾವಿ: ಇಂದಿನ ತಾಂತ್ರಿಕ ಯುಗದಲ್ಲಿ ಅಧ್ಯಯನ ಪ್ರವೃತ್ತಿ ಕಡಿಮೆಯಾಗುತ್ತಿದೆ. ಓದುವುದರಿಂದ ಜ್ಞಾನಿಗಳ, ವಿಚಾರವಾದಿಗಳ ಮಹತ್ವದ ಒಳ್ಳೆಯ ವಿಚಾರಗಳು ನಮಗೆ ಲಭ್ಯವಾಗುತ್ತವೆ. ಗುರುಗಳ ಆಶಿರ್ವಾದ ನಮ್ಮ ಮೇಲಿರುತ್ತದೆ. ಶಾಲೆಯ ಓದಿಗಿಂತ ಜೀವನದ ಓದು ಹೆಚ್ಚು ಕಲಿಸುತ್ತದೆ ಎಂದು ಹಿರಿಯ ಪತ್ರಕರ್ತ ಕಿರಣ ಠಾಕೂರ ಹೇಳಿದರು.
ನಗರದ ಶಹಪೂರದ ಸರಸ್ವತಿ ವಾಚನಾಲಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಾಯಿ ಠಾಕೂರ ಸಭಾಗೃಹ ನವೀಕರಣ, ಡಾ| ಶಕುಂತಲಾ ಗಿಜರೆ ಸಭಾಗೃಹ ಉದ್ಘಾಟನೆ ಹಾಗೂ ಬೆಳಗಾವಿ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಓದುವ ಹವ್ಯಾಸ ಬೆಳೆಸುವ ಕಾರ್ಯವನ್ನು ಹಲವಾರು ದಶಕಗಳಿಂದ ಮಾಡುತ್ತ ಬಂದಿರುವ ಸರಸ್ವತಿ ವಾಚನಾಲಯದ ಕೆಲಸ ಪ್ರಶಂಸನಾರ್ಹ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ ಮಾತನಾಡಿ, ಧರ್ಮಯೋಗ, ಭಕ್ತಿಯೋಗ, ಧ್ಯಾನಯೋಗ ಹಾಗೂ ಜ್ಞಾನಯೋಗಗಳಲ್ಲಿ ಜ್ಞಾನಯೋಗ ಮಹತ್ತರವಾದುದು. ಈ ಮಹತ್ವದ ಕಾರ್ಯವನ್ನು ಹಲವಾರು ದಶಕಗಳನ್ನು ಸರಸ್ವತಿ ವಾಚನಾಲಯ ಮಾಡುತ್ತ ಬಂದಿದೆ ಎಂದು ಹೇಳಿದರು.
ಸ್ತ್ರೀರೋಗ ತಜ್ಞ ಡಾ. ದತ್ತಪ್ರಸಾದ ಗಿಜರೆ ಮಾತನಾಡಿ, ಸರಸ್ವತಿಯನ್ನು ಒಲಿಸಿಕೊಂಡರೆ ಲಕ್ಷ್ಮೀ ತಾನಾಗಿಯೇ ಒಲಿದು ಬರುತ್ತಾಳೆ. ನಾವು ಓದುವ ಹವ್ಯಾಸವನ್ನು ಬೆಳಿಸಿಕೊಳ್ಳಬೇಕು. ಇಂದು ಬೆಳೆಯುತ್ತಿರುವ ತಾಂತ್ರಿಕತೆಯಿಂದ ಓದು ಕೊನೆಯ ಸ್ಥಾನ ಪಡೆದಿರುವುದು ಖೇದದ ಸಂಗತಿ. ಇಂತ ವಾತಾವರಣದಲ್ಲಿಯೂ ಸರಸ್ವತಿ ವಾಚನಾಲಯದವರು ಓದುವ ಅಭಿರುಚಿ ಬೆಳೆಸುತ್ತಿರುವ ಕಾರ್ಯ ಮೆಚ್ಚುವಂತಹದ್ದು ಎಂದರು.
ಇದೇ ಸಂದರ್ಭದಲ್ಲಿ ಕಿರಣ ಠಾಕೂರ ಅವರಿಗೆ ಬೆಳಗಾವಿ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಲ್ಲಿಕಾರ್ಜುನ ಜಗಜಂಪಿ, ಜಗದೀಶ ಕುಮಟೆ, ಪಿ.ಜಿ. ಕುಲಕರ್ಣಿ, ಸವಿತಾ, ಮಿಲಿಂದ ಗಾಡಗೀಳ, ಮಹೇಶ ನಾಯಿಕ, ಸುಧಾ ಬಾತಖಾಂಡೆ, ಸರಳಾ ಹೇರೇಕರ, ವಿಲಾಸ ಅಧ್ಯಾಪಕ, ಅಮಿತ ಜೈನ ಮುಂತಾದವರನ್ನು ಸನ್ಮಾನಿಸಲಾಯಿತು. ಜ್ಞಾನದೀಪ ಸ್ಮರಣ ಸಂಚಿಕೆಯನ್ನು ಪಿ. ಎಸ್. ಕುಲಕರ್ಣಿ ಬಿಡುಗಡೆ ಮಾಡಿದರು. ಡಾ| ದತ್ತಪ್ರಸಾದ ಗಿಜರೆ, ಸುಹಾಸ ಸಾಂಗ್ಲಿಕರ ಇದ್ದರು.ಪಿ. ಜಿ. ಕುಲಕರ್ಣಿ ಸ್ವಾಗತಿಸಿದರು. ಆನಂದರಾವ ಕುಲಕರ್ಣಿ ವಂದಿಸಿದರು. ಮೀರಾ ಅಜಗಾಂವಕರ ಪ್ರಿಯಾ ಕವಟೆಕರ ನಿರೂಪಿಸಿದರು.