ಸಾಗರ: ಇಲ್ಲಿನ ವರದಹಳ್ಳಿ ರಸ್ತೆಯಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿತರಣೆ ಮಾಡಲು ಮೀಸಲಿಟ್ಟಿದ್ದ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ತಹಶೀಲ್ದಾರ್ ಸೈಯದ್ ಕಲಿಮುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಪತ್ರಕರ್ತರಿಗೆ ಮೀಸಲಾಗಿರಿಸಿದ್ದ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಕಳಲೆ ಗ್ರಾಮದ ಸರ್ವೇ ನಂ. 40 ರಲ್ಲಿ 0.35 ಗುಂಟೆ ಜಾಗವನ್ನು ಕೆಲವರು ಅತಿಕ್ರಮ ಪ್ರವೇಶ ಮಾಡಿ ರಾತ್ರೋರಾತ್ರಿ ಅಕ್ರಮ ಶೆಡ್ ನಿರ್ಮಾಣ ಮಾಡಿದ್ದಾರೆ. ಈ ವಿಚಾರವನ್ನು ತಿಳಿದ ತಹಶೀಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ತಹಶೀಲ್ದಾರ್ ಸೈಯದ್ ಕಲಿಮುಲ್ಲಾ, ಅತಿಕ್ರಮ ಪ್ರವೇಶ ಮಾಡಿದವರನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸ್ಥಳಕ್ಕೆ ಭೇಟಿ ನೀಡಿದಾಗ ಅಕ್ರಮವಾಗಿ ತರಾತುರಿಯಲ್ಲಿ ಶೆಡ್ ನಿರ್ಮಿಸಿರುವುದು ಕಂಡುಬಂದಿದೆ. ಇದು ಕಾನೂನುಬಾಹಿರವಾಗಿದ್ದು, ಯಾರೇ ಸರ್ಕಾರಿ ಜಾಗ ಒತ್ತುವರಿ ಮಾಡಿದರೆ ಕಂದಾಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ಇದೆ. ಆದ್ದರಿಂದ ಅಕ್ರಮ ಪ್ರವೇಶ ಮಾಡಿದವರು ಶುಕ್ರವಾರ ಸಂಜೆಯೊಳಗೆ ಶೆಡ್ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಒಂದೊಮ್ಮೆ ತೆರವುಗೊಳಿಸದೆ ಹೋದಲ್ಲಿ ಕಂದಾಯ ಇಲಾಖೆ ಕಾನೂನಿನ ಪ್ರಕಾರ ಅವರ ಮೇಲೆ ಅಕ್ರಮ ಪ್ರವೇಶ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಜಮೀನು ನೋಡಿ ಅಕ್ರಮವಾಗಿ ರಾತ್ರೋರಾತ್ರಿ ಬೇಲಿ ಹಾಕಿ, ಅಕ್ರಮ ಶೆಡ್ ನಿರ್ಮಿಸುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ಕರ್ಕಿಕೊಪ್ಪ ಗ್ರಾಮದಲ್ಲಿ ಸೊಪ್ಪಿನ ಬೆಟ್ಟ ಪ್ರದೇಶ, ಅರಣ್ಯ, ಪ್ಲಾಂಟೇಶನ್ ಇನ್ನಿತರ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ ಉದಾಹರಣೆಗಳು ಸಹ ಇವೆ. ಇದೀಗ ಪತ್ರಕರ್ತರ ಜಾಗದ ಮೇಲೆ ಕಣ್ಣು ಹಾಕಿರುವುದರ ಹಿಂದೆ ಕೆಲವು ರಾಜಕೀಯ ಪ್ರಭಾವಿ ಮುಖಂಡರ ಕೈವಾಡ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಇದೇ ಗ್ರಾಮ ಪಂಚಾಯ್ತಿಯ ಬಾಳೆಹಳ್ಳಿ ಗ್ರಾಮದಲ್ಲಿಯೂ ಜನರು ಸೊಪ್ಪಿನ ಬೆಟ್ಟದ ಜಾಗದಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಮನೆ ನಿರ್ಮಿಸಿದರೂ ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯ್ತಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆಯೇ ವಿನಾ ಕಾನೂನುಬಾಹಿರ ಒತ್ತುವರಿಯ ತಡೆಗೆ ಕ್ರಮ ಕೈಗೊಳ್ಳದಿರುವ ಕುರಿತು ಪಂಚಾಯ್ತಿಯ ಜನಪ್ರತಿನಿಧಿಗಳೇ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಪಂಚಾಯ್ತಿಯ ಬೆಳವಣಿಗೆಗಳನ್ನು ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು