Advertisement
ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಮಾರಿಕಾಂಬಾ ದೇವಿಯ ತಾಳಿ ಮತ್ತು ಆಭರಣಗಳಿಗೆ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ವಿಧಿವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ನೆರವೇರಿಸಿದರು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಪದಾಧಿಕಾರಿಗಳ ಪಾಲ್ಗೊಂಡಿದ್ದರು. ನಂತರ ಸಂಪ್ರದಾಯದಂತೆ ಪುರೋಹಿತ ರಮೇಶ ಭಟ್ಟರ ಮನೆಯಲ್ಲಿ ಪೂಜಾ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.
Related Articles
Advertisement
ರಾತ್ರಿಯಿಂದಲೇ ದೇವರ ದರ್ಶನಕ್ಕೆ ಕಾದುನಿಂತ ಭಕ್ತರು : ಶ್ರೀ ಮಾರಿಕಾಂಬಾಜಾತ್ರೆಯ ಮೊದಲ ದಿನದಂದು ತವರುಮನೆಯಲ್ಲಿ ಶ್ರೀ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೋಮವಾರ ರಾತ್ರಿ 2 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಮಂಗಳವಾರ ಬೆಳಿಗ್ಗೆ ಪೂಜೆಯ ಸಂದರ್ಭದಲ್ಲಿ ದೇವರದರ್ಶನಕ್ಕೆ ನಿಂತಿದ್ದ ಸರದಿ ಸಾಲು ಸಾಗರ ಸಣ್ಣಮನೆ ಬಡಾವಣೆಯ ಸೇತುವೆಯನ್ನು ದಾಟಿದ್ದು ವಿಶೇಷವಾಗಿತ್ತು. ನೀರು ಮತ್ತು ಉಪಹಾರ ಪೂರೈಕೆ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಯೋಧನಮನ ಟ್ರಸ್ಟ್, ದೈವಜ್ಞ ಸಮಾಜ ಯುವಕರು ಹಾಗೂ ಆನಂದ ಸಾಗರ ಟ್ರಸ್ಟ್ ವತಿಯಿಂದ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಚಹಾ, ಕಾಫಿ, ಬಾದಾಮಿ ಹಾಲನ್ನು ಉಚಿತವಾಗಿ ವಿತರಿಸಿದರು. ಜಾತ್ರೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಜಾತ್ರಾ ಸಮಿತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸ್ನೇಹಿತರು ಬಳಗದಿಂದ ಊಟ : ಇಲ್ಲಿನ ಸ್ನೇಹಿತರು ಸಾಗರ ಸಂಸ್ಥೆ ವತಿಯಿಂದ ಜಾತ್ರಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನು ನಗರಸಭೆ ಕಾಂಪ್ಲೆಕ್ಸ್‌ನಲ್ಲಿ ಏರ್ಪಡಿಸಲಾಗಿತ್ತು. ಸತತ 15ನೇ ಜಾತ್ರೆಯಲ್ಲಿ ಸ್ನೇಹಿತರು ಸಾಗರ ಈ ಸೇವಾ ಕಾರ್ಯವನ್ನು ಚಾಚೂತಪ್ಪದೆ ನಡೆಸಿಕೊಂಡು ಬರುತ್ತಿದೆ. ಪ್ರತಿದಿನ 8 ರಿಂದ 10 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಸಂಸ್ಥೆ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಬರುವ ಭಕ್ತಾದಿಗಳಿಗೆ ಶುದ್ದವಾದ ನೀರು ಮತ್ತು ಊಟವನ್ನು ಜಾತ್ರೆ ಮುಗಿಯುವವರೆಗೂ ನೀಡಲಾಗುತ್ತದೆ ಎಂದು ಬಳಗದ ಪರವಾಗಿ ಬಿ.ಎಚ್.ಲಿಂಗರಾಜ್ ತಿಳಿಸಿದ್ದಾರೆ. ಶಾಸಕ ಹಾಲಪ್ಪ-ಮಾಜಿ ಸಚಿವ ಕಾಗೋಡು ದರ್ಶನ : ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಏಕಕಾಲದಲ್ಲಿ ಕುಟುಂಬ ಸಮೇತವಾಗಿ ಅಮ್ಮನವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದು, ಅಮ್ಮನವರಿಗೆ ಇಬ್ಬರು ಜನಪ್ರತಿನಿಧಿಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಗುಂಡ್ಲುಪೇಟೆ: ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ