ಸಾಗರ: ಸಾಗರ ನಗರದೊಳಗಿನ ಸಂಚಾರ ವ್ಯವಸ್ಥೆ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲೂ ಸಾಗುವ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ನಗರ ಠಾಣೆ ಪೊಲೀಸರು ಶುಕ್ರವಾರ ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನವನ್ನು ವಶಕ್ಕೆ ತೆಗೆದುಕೊಳ್ಳುವುದರ ಜೊತೆಗೆ ಅದರ ಚಾಲಕನ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿರುವ ಪ್ರಕರಣ ನಡೆದಿದೆ.
ನಗರದ ಮೈಸೂರು ಕೆಫೆ ಎದುರಿನ ಏಕಮುಖ ಸಂಚಾರ ರಸ್ತೆಯಲ್ಲಿ ಲಗೇಜ್ ಕ್ಯಾರಿಯರ್ ರಿಕ್ಷಾವೊಂದು ನಿಯಮ ಉಲ್ಲಂಘಿಸಿ ಬರುತ್ತಿದ್ದ ಸಮಯದಲ್ಲಿ ಟ್ರಾಫಿಕ್ ಜ್ಯಾಮ್ ಸ್ಥಿತಿ ನಿರ್ಮಾಣವಾಯಿತು.
ಮಾರುದ್ದದ ವಾಹನಗಳ ಸಾಲು ಸಾಲು ಕಾಣುವಂತಾಯಿತು. ಸಿಸಿ ಕ್ಯಾಮೆರಾ ಮೂಲಕ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆಟೋವನ್ನು ವಶಕ್ಕೆ ತೆಗೆದುಕೊಂಡರು.
ಈಗಾಗಲೇ ಸಂಚಾರಿ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಪಾರ್ಕ್ ಮಾಡುವ ವಾಹನಗಳ ಮಾಲಿಕರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸುವ ಕ್ರಮ ಕಳೆದ ವಾರದಿಂದ ಜಾರಿಯಲ್ಲಿದೆ.
ಪೊಲೀಸರು ಪ್ರತಿ ದಿನ 20ರಿಂದ 25 ಪ್ರಕರಣಗಳನ್ನು ಸದ್ಯ ಸಾಗರದಲ್ಲಿ ದಾಖಲಿಸುತ್ತಿದ್ದಾರೆ ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ ಟಿ. ತಿಳಿಸಿದ್ದಾರೆ.