Advertisement

ಸಾಗರ: ಬದುಕುವ ರೀತಿ ಕಲಿಸಿ ಕೊಟ್ಟಿದ್ದು ಸನಾತನ ಧರ್ಮ

05:58 PM Mar 30, 2024 | Team Udayavani |

ಉದಯವಾಣಿ ಸಮಾಚಾರ
ಸಾಗರ: ಸಾವಿರಾರು ವರ್ಷಗಳಿಂದ ಜಗತ್ತಿಗೆ ಮಾರ್ಗದರ್ಶನ ಹಾಗೂ ಬದುಕುವ ರೀತಿಯನ್ನು ಕಲಿಸಿ ಕೊಟ್ಟಿದ್ದು ಸನಾತನ ಹಿಂದೂ ಧರ್ಮ ಎಂದು ದಕ್ಷಿಣ ಪ್ರಾಂತ್ಯ ಗೋರಕ್ಷಾ ಪ್ರಮುಖ್‌ ಮುರಳಿ ಕೃಷ್ಣ ಪುತ್ತೂರು ಹೇಳಿದರು.

Advertisement

ಇಲ್ಲಿನ ಗಾಂಧಿ  ಮೈದಾನದಲ್ಲಿ ಗುರುವಾರ ವಿಶ್ವಹಿಂದೂ ಪರಿಷತ್‌ ಮತ್ತು ಭಜರಂಗ ದಳದ ವತಿಯಿಂದ ಶಿವಾಜಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಬೃಹತ್‌ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಅನೇಕ ವರ್ಷಗಳಿಂದ ಸನಾತನ ಹಿಂದೂ ಧರ್ಮ ದಬ್ಟಾಳಿಕೆ ಸಹಿಸಿಕೊಂಡು ಪುಟಿದು ಪುಟಿದು ನಿಲ್ಲುತ್ತಿದೆ. ಈಗ ನಾವು ಹಿಂದೂ ಧರ್ಮೀಯರು, ಸನಾತನ ಧರ್ಮ ನಮ್ಮದು ಎಂದು ಎದೆತಟ್ಟಿ ಹೇಳುವ ಕಾಲಘಟ್ಟದಲ್ಲಿದ್ದೇವೆ. ಇಡೀ ವಿಶ್ವ ಸನಾತನ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಂಡಿದೆ. ನಾನೊಬ್ಬ ಹಿಂದೂ ಎಂದು ಹೇಳಲು ನಾವು ಅಂಜಿಕೊಳ್ಳಬೇಕಾದ
ಸಂದರ್ಭ ಇಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ದೇಶವಾಸಿಗಳ ಕನಸು ನನಸಾಗಿದೆ. ವಿಶ್ವಹಿಂದೂ ಪರಿಷತ್‌ ಮತ್ತು ಭಜರಂಗ ದಳ ದೇಶಭಕ್ತಿಯನ್ನು ಬಿತ್ತುವ ಕೆಲಸದಲ್ಲಿ ನಿರತವಾಗಿದೆ ಎಂದು ಹೇಳಿದರು.

ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿವಾಜಿ ಮಹಾರಾಜರ ಪಾತ್ರ ಪ್ರಮುಖವಾಗಿದೆ. ಅವರು ಸಿಡಿದು ನಿಲ್ಲದೆ ಹೋಗಿದ್ದಲ್ಲಿ ಸನಾತನ ಹಿಂದೂ ಧರ್ಮವನ್ನು ಮೂಲೆಗುಂಪು ಮಾಡುವ ಸಾಕಷ್ಟು ಪ್ರಯತ್ನ ನಡೆದಿತ್ತು. ಶಿವಾಜಿ ಮಹಾರಾಜರು ನಮಗೆಲ್ಲಾ ಸ್ಪೂರ್ತಿಸ್ವರೂಪರು. ಹಿಂದೂ ಸಮಾಜೋತ್ಸವದ ಮೂಲಕ ನಮ್ಮಲ್ಲಿನ ಒಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು, ಮಕ್ಕಳಿಗೆ ಸನ್ನಡತೆ, ಸಂಸ್ಕಾರಯುತ ಶಿಕ್ಷಣ ಕಲಿಸುವುದು ಪ್ರತಿಯೊಬ್ಬ ತಂದೆ- ತಾಯಿಯ ಕರ್ತವ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳು ತುಳಿತಕ್ಕೆ ಒಳಗಾದವರಿಗೆ ಶಿಕ್ಷಣ ಸಿಗಬೇಕು ಎಂದು ಸಂದೇಶ ನೀಡಿ ಅದನ್ನು ಕಾರ್ಯಗತಗೊಳಿಸುವ ಪ್ರಯತ್ನ ನಡೆಸಿದವರು.

Advertisement

ಮಕ್ಕಳನ್ನು ವೈದ್ಯ, ಎಂಜಿನಿಯರ್‌ ಇನ್ನಿತರೆ ಹುದ್ದೆಗೆ ಕಳಿಸುವ ಜೊತೆಗೆ ಅವರಿಗೆ ಸಂಸ್ಕಾರ ಕಲಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಭಜರಂಗ ದಳದ ಜಿಲ್ಲಾ ಸಂಯೋಜಕ ಸಂತೋಷ್‌ ಶಿವಾಜಿ, ರಾಜೇಶ್‌ ಗೌಡ ಇದ್ದರು. ಕೀರ್ತಿ ಗಣೇಶ್‌ ಪ್ರಾರ್ಥಿಸಿದರು. ಶ್ವೇತಾ ಅನಿಲ್‌ ಸ್ವಾಗತಿಸಿದರು. ಸುಪ್ರಿತಾ ವಂದಿಸಿದರು. ಅರ್ಚನಾ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕರಸೇವಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಮಹಾಗಣಪತಿ ದೇವಸ್ಥಾನದಿಂದ ಶಿವಾಜಿ ಮಹಾರಾಜರ ಪುತ್ಥಳಿ ಹೊತ್ತ ಬೃಹತ್‌ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next