Advertisement

ಕ್ವಾರಂಟೈನ್‌ಗೆ ಸಜ್ಜುಗೊಂಡಿಲ್ಲ ಹಾಸ್ಟೇಲ್‌ಗ‌ಳು

03:17 PM May 13, 2020 | Naveen |

ಸಾಗರ: ತಾಲೂಕಿಗೆ ಹೊರಗಿನ ರಾಜ್ಯದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಆರು ಸಾರ್ವತ್ರಿಕ ಹಾಸ್ಟೆಲ್‌ ಗಳನ್ನು ನೋಡಲಾಗಿದೆ. ವರದಹಳ್ಳಿ ರಸ್ತೆಯ ದೇವರಾಜು ಅರಸು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯ, ಕೆಳದಿ, ಕಟ್ಟಿನಕಾರು, ಸಿರಿವಂತೆ, ತಾಳಗುಪ್ಪ ಮೊದಲಾದೆಡೆ ಸ್ಥಳ ಗುರುತಿಸಲಾಗಿದೆ. ಆದರೆ ಈಗಾಗಲೇ ಮರಳುವವರು ಸಾಗರಕ್ಕೆ ಬಂದು ನಿಂತಿದ್ದರೂ ಈ ಹಾಸ್ಟೆಲ್‌ಗ‌ಳು ವಸತಿ ವ್ಯವಸ್ಥೆಗೆ ಸಂಪೂರ್ಣವಾಗಿ ಸಜ್ಜುಗೊಂಡಿಲ್ಲ!

Advertisement

ಮಂಗಳವಾರ ವರದಹಳ್ಳಿ ರಸ್ತೆಯ ಹಾಸ್ಟೆಲ್‌ ನಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಅದರ ನಿರ್ವಹಣೆ ಕುರಿತು ತಾಲೂಕು ಆಡಳಿತದಲ್ಲಿಯೇ ಖಚಿತ ಕಾರ್ಯಕ್ರಮ ನಿರ್ಧಾರ ಆಗದಿರುವುದು ತಹಶೀಲ್ದಾರರ ಮಾತುಗಳಿಂದಲೇ ವ್ಯಕ್ತವಾಯಿತು. ಅವರಲ್ಲಿ ವಿಚಾರಿಸಿದಾಗ, 22 ಜನರಿಗೆ ಕ್ವಾರಂಟೈನ್‌ ಮಾಡಬಹುದಾದ ಈ ಹಾಸ್ಟೆಲ್‌ನಲ್ಲಿ 14 ದಿನ ಉಳಿಯುವವರಿಗೆ ಊಟದ ವ್ಯವಸ್ಥೆ ಮಾಡುವ ಬಗ್ಗೆ ಇನ್ನೂ ತಾಲೂಕು ಆಡಳಿತ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

ಇದೇ ವೇಳೆ ಮಹಾರಾಷ್ಟ್ರದಿಂದ ಬಂದಿರುವ 8 ಜನ ನಾಗರಿಕರ ಗಂಟಲು ದ್ರವ, ರಕ್ತದ ಸ್ಯಾಂಪಲ್‌ ತೆಗೆದು ಸರ್ಕಾರಿ ಆಸ್ಪತ್ರೆಯ ಎದುರು ಕೊವೆಡ್‌ ವಾಹನದಲ್ಲಿ ಇರಿಸಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚು ಹೊತ್ತು ಅಲ್ಲಿ ಮುಕ್ತವಾಗಿ ಇರಿಸಲಾಗುವುದಿಲ್ಲ. ಇಲ್ಲಿಗೆ ದಾಖಲಿಸಲಾಗದಿದ್ದರೆ ಶಿವಮೊಗ್ಗಕ್ಕೆ ವಾಪಾಸು ಕಳಿಸಬೇಕಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದರೆ, ಅವರನ್ನು ಈಗಲೇ ಹಾಸ್ಟೆಲ್‌ ಗೆ ಕರೆತಂದು ಸೇರಿಸಬೇಕು ಎಂದು ತಹಶೀಲ್ದಾರರು ಸೂಚಿಸಿದ ಘಟನೆಯೂ ನಡೆಯಿತು.

ಸಾರ್ವಜನಿಕ ಶೌಚಾಲಯಗಳ ಪರಿಸ್ಥಿತಿ ಇರುವಲ್ಲಿ ಕ್ವಾರಂಟೈನ್‌ ಆಗುವ ಭಿನ್ನ ಭಿನ್ನ ಸ್ಥಳಗಳಿಂದ ಬಂದವರಲ್ಲಿ ಒಬ್ಬರಿಗೆ ಸೋಂಕು ಖಚಿತವಾದರೂ ಉಳಿದ ಅಷ್ಟೂ ಜನರಿಗೆ ಸೋಂಕು ತಗಲುವ ಹೆಚ್ಚಿನ ಸಾಧ್ಯತೆ ಇರುವುದನ್ನು ಆಡಳಿತ ಗಮನಿಸಿಲ್ಲ. ಹಾಗೆಯೇ ಅತ್ಯಂತ ಕನಿಷ್ಟ ಪ್ರಮಾಣದ ಕಾರ್ಯಕರ್ತರು ಈ ಕ್ವಾರಂಟೈನ್‌ ಜನರ ಜೊತೆ ಸಂಪರ್ಕ ಹೊಂದಿ ಅವರ ಅಗತ್ಯಗಳಿಗೆ ಸ್ಪಂದಿಸುವ ನಿರ್ದಿಷ್ಟ ಪ್ಲಾನ್‌ ರೂಪಿಸದಿದ್ದರೆ ಸಮಸ್ಯೆ ಹೆಚ್ಚಲಿದೆ ಎಂದು ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಿತಕರ್‌ ಜೈನ್‌ ಎಚ್ಚರಿಕೆ ನೀಡುತ್ತಾರೆ. ರಕ್ಷಣಾ ಇಲಾಖೆ ಇಂತಹ ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಆದವರತ್ತ ನಿಗಾ ವಹಿಸಲು ರೂಪಿಸಿರುವ ಕಾರ್ಯತಂತ್ರದ ಬಗ್ಗೆ ವಿಚಾರಿಸಿದಾಗಲೂ ನಕಾರಾತ್ಮಕ ಉತ್ತರವೇ ಆ ಇಲಾಖೆಯವರಿಂದ ಲಭ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next