Advertisement

ಹೀಗೊಂದು ಪಂಚಾಯ್ತಿ ತೋಟ!

03:00 PM Oct 13, 2019 | Naveen |

ಮಾ.ವೆಂ.ಸ. ಪ್ರಸಾದ್‌
ಸಾಗರ: ಎಡಜಿಗಳೇಮನೆ ಗ್ರಾಪಂ ಕಚೇರಿಯ ಹಿಂದೆ ಒಂದು ಎಕರೆ ಪ್ರದೇಶದಲ್ಲಿ ಅಡಕೆ, ಬಾಳೆ ಗಿಡಗಳಿರುವ ತೋಟ ಹಸಿರಿನಿಂದ ನಳನಳಿಸುತ್ತಿದೆ. ಸಾಗರದಿಂದ ವರದಹಳ್ಳಿಗೆ ಹೋಗುವ ಸಾವಿರಾರು ಜನ ಯಾರೋ ಖಾಸಗಿಯವರು ತಮ್ಮ ಹಕ್ಕಲಿನಲ್ಲಿ ಹೊಸ ತೋಟ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಭಾವಿಸುತ್ತಾರೆ. ಆದರೆ ವಿಚಾರಿಸಿದಾಗ ಮಾತ್ರ ಈ ತೋಟವನ್ನು ಖುದ್ದು ಎಡಜಿಗಳೇಮನೆ ಗ್ರಾಪಂ ನಿರ್ಮಾಣ ಮಾಡುತ್ತಿರುವ ವಿಭಿನ್ನ ಪ್ರಯತ್ನ ಬೆಳಕಿಗೆ ಬರುತ್ತದೆ. ಕಳೆದ ವರ್ಷ ಅಡಕೆ, ಬಾಳೆ ಕೂರಿಸಿದ ಪ್ರದೇಶದಲ್ಲಿ ಬೇಸಿಗೆಯ ಬಿರುಸು ಹಾಗೂ ಮಳೆಯ ಪ್ರತಾಪವನ್ನು ಮೀರಿ ತೋಟದ ಸಸಿಗಳು ಹಸಿರನ್ನು ಸೂಸುತ್ತಿರುವುದು ಗಮನ ಸೆಳೆಯುತ್ತದೆ.

Advertisement

ಹಿಂದೆ ಮಂಡಲ ಪಂಚಾಯತ್‌ ವ್ಯವಸ್ಥೆ ಇದ್ದಾಗ ಅಂದಿನ ಪ್ರಧಾನರಾಗಿದ್ದ ಸೂರ್ಯನಾರಾಯಣರಾವ್‌ ಖಂಡಿಕಾ ಅವರ ಮುತುವರ್ಜಿಯಿಂದ ಪಂಚಾಯತ್‌ ಗೆ ಐದು ಎಕರೆ ಜಾಗ ಖಾತೆಯಾಗಿತ್ತು. ಇದರಲ್ಲಿಯೇ ಹಾಲು ಉತ್ಪಾದಕರ ಸಂಸ್ಥೆಗೆ, ಪಶು ಸಂಗೋಪನಾ ಇಲಾಖೆಗೆ, ಬಿಎಸ್‌ ಎನ್‌ಎಲ್‌ ಕಚೇರಿಗೆ, ಪ್ರವಾಸೋದ್ಯಮ ಇಲಾಖೆ ವಸತಿ ಗೃಹ ಹಾಗೂ ಪಂಚಾಯತ್‌ ಕಚೇರಿಗಳಿಗೆ ಜಾಗ ಕೊಟ್ಟೂ ಒಂದೆಕರೆ ಜಾಗ ಉಳಿದಿತ್ತು. ಈ ಜಾಗದಲ್ಲಿ ಪಂಚಾಯತ್‌ ನೀಲಗಿರಿ ಗಿಡ ಹಾಕಿತ್ತು. 2018ರಲ್ಲಿ ನೀಲಗಿರಿ ಕಟಾವು ಆದ ನಂತರ ಜಾಗ ಖಾಲಿಯಾಗಿತ್ತು.

ಹಸಿರಿಗೆ ಒಲವು!: ಆ ಸಂದರ್ಭದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಈ ಸ್ಥಳವನ್ನು ನಿವೇಶನ ಮಾಡಿ ಹಂಚುವ ಪ್ರಸ್ತಾಪವೂ ಬಂದಿತ್ತು. ಆದರೆ ಪಂಚಾಯತ್‌ನ ಜನಪ್ರತಿನಿಧಿಗಳ ಆಶಯ ಭಿನ್ನವಾಗಿತ್ತು. ಬೇರೆ ಬೇರೆ ಗ್ರಾಮ ಠಾಣಾ ಮೊದಲಾದ ಜಾಗಗಳಲ್ಲಿ ನಿವೇಶನ ಕೊಡಬಹುದು. ಈ ಹಿಂದೆ ಅಧಿಕಾರ ನಡೆಸಿದವರು ಪಂಚಾಯತ್‌ ಗೆಂದು ಮೀಸಲಿರಿಸಿದ್ದ ಜಾಗ ಪಂಚಾಯತ್‌ ಸುಪರ್ದಿಯಲ್ಲಿಯೇ ಇರಬೇಕು. ಮುಂದಿನ ದಿನಗಳಲ್ಲಿ ವಿಶೇಷ ಕಾರಣಗಳಿಗೆ ಅಗತ್ಯ ಬೀಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಹಂತದಲ್ಲಿ ಒಕ್ಕೊರಲಿನಿಂದ ಅಡಕೆ ತೋಟವನ್ನು ಪಂಚಾಯತ್‌ ಸ್ವಂತ ಆದಾಯದಲ್ಲಿಯೇ ರೂಪಿಸಬಹುದು ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದ್ದಂತೆ ಆಡಳಿತ ತಡ ಮಾಡಲಿಲ್ಲ. ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಯವರ ಹಸಿರು  ಶಾನೆ ಪಡೆದು 9 ಅಡಿಗೆ ಒಂದರಂತೆ 460 ಅಡಕೆ ಸಸಿ ಹಾಗೂ 300 ಬಾಳೆ ಗಿಡಗಳನ್ನು ಈ ಜಾಗದಲ್ಲಿ 2019ರ ಮೇನಲ್ಲಿ ನೆಡಲಾಯಿತು. ಹೀಗೆ ನೆಟ್ಟ 460 ಅಡಕೆ ಸಸಿಗಳಲ್ಲಿ ಒಂದೇ ಒಂದು ಸಸಿ ಸಾಯಲಿಲ್ಲ ಎಂಬುದು ವಿಶೇಷ. ಈಗಾಗಲೇ ಪಚ್ಚ ಬಾಳೆಯ ಕೆಲ ಗಿಡಗಳು ಗೊನೆ ಬಿಡುತ್ತಿವೆ. ಬಹುಶಃ ಆರಂಭದ ಕೆಲ ಸಮಯ ಮಂಗನ ಕಾಟ ಕಾಡದಿದ್ದರೆ ಇಷ್ಟರಲ್ಲಾಗಲೆ ಬಾಳೆಯ ಮೊದಲ ಕೊಯ್ಲು ನಡೆದಿರುತ್ತಿತ್ತು.

ಆ ನಂತರದಲ್ಲಿ ಬಲೆಯನ್ನು ಅಳವಡಿಸಿ ಮಂಗಗಳನ್ನು ನಿಯಂತ್ರಿಸಲಾಗಿದೆ. ತೋಟಕ್ಕೆ ನೀರು, ಬೇಲಿಯನ್ನು ಗುರ್ತಿಸಿಯೇ ಪಂಚಾಯತ್‌ ತೋಟ ನಿರ್ಮಾಣಕ್ಕೆ ಮುಂದಾಗಿದೆ. ಒಂದು ತೆರೆದ ಬಾವಿ ಹಾಗೂ ಮೂರೂವರೆ ನಾಲ್ಕಿಂಚು ನೀರು ಬಿದ್ದಿರುವ ಬೋರ್‌
ವೆಲ್‌ ತೋಟದಲ್ಲಿದೆ. ಬೋರ್‌ವೆಲ್‌ ಗೆ ಪಂಪ್‌ ಅಳವಡಿಸಿ ತೋಟಕ್ಕೆ ಡ್ರಿಪ್‌ ಮಾದರಿಯಲ್ಲಿ ನೀರು ಒದಗಿಸಲಾಗುತ್ತಿದೆ. ಪ್ರಸ್ತುತ ಪಂಚಾಯತ್‌ ಸಿಬ್ಬಂದಿಯೇ ಭೂಮಿ ಪ್ರೀತಿಯಿಂದ ಖುಷಿ ಖುಷಿಯಿಂದ ತೋಟದ ಕೆಲಸವನ್ನೂ ಮಾಡುತ್ತಿದ್ದಾರೆ. ಶರಾವತಿ ಹಿನ್ನೀರಿನಿಂದ ಈ ಭಾಗಕ್ಕೆ ನೀರು ಕೊಡುವ ಯೋಜನೆ ಜಾರಿಗೊಂಡರೆ ತೋಟಕ್ಕೆ ಹೆಚ್ಚುವರಿ ನೀರು ಸಿಗಬಹುದು.

Advertisement

ಪಂಚಾಯತ್‌ ಮುಂದೆ ಪಾರ್ಕ್‌!: ಪಂಚಾಯತ್‌ನ ಹಸಿರು ಪ್ರೀತಿ ಇಂದು ನಿನ್ನೆಯದಲ್ಲ. 2007ರಲ್ಲಿಯೇ ಪಂಚಾಯತ್‌ ಎದುರಿನ ಜಾಗದಲ್ಲಿ ಲಾನ್‌ ಅಳವಡಿಸಿ ಪಾರ್ಕಿನಂತಹ ಹಸಿರು ಸೃಷ್ಟಿಯಾಗಿತ್ತು. ಇಂದು ಪಂಚಾಯತ್‌ ಕಟ್ಟಡ ಕಾಣದಂತೆ ಹಸಿರು ಮರಗಳು ಪಂಚಾಯತ್‌ ಸುತ್ತ ವ್ಯಾಪಿಸಿವೆ. ಈ ಚಟುವಟಿಕೆಯ ಮುಂದಿನ ಭಾಗವಾಗಿಯೇ ತೋಟ ನಿರ್ಮಾಣವಾಗುತ್ತಿದೆ. ಕೇವಲ 8 ತಿಂಗಳಿನಲ್ಲಿ ತೋಟದ ಸ್ವರೂಪ ಪಂಚಾಯತ್‌ ಸದಸ್ಯರಿಗೇ ಅಚ್ಚರಿ ಮೂಡಿಸುವಂತಿದೆ. ಆರಂಭದ ದಿನಗಳಲ್ಲಿ ಈ ಜಾಗದಲ್ಲಿ ತೋಟ ಎಬ್ಬಿಸುವುದು ದುಡ್ಡು ಹೊಡೆಯುವ ತಂತ್ರ ಎಂದವರಿಗೆ ಹಸಿರೇ ಉತ್ತರ ಎಂಬ ಪ್ರತಿಕ್ರಿಯೆ ಈಗಿನ ಆಡಳಿತದ್ದು. ತೋಟಕ್ಕೆ ಕಾಲ ಕಾಲಕ್ಕೆ ಆಗಬೇಕಾದ ಕೃಷಿ ಕೆಲಸಗಳನ್ನು ಪಂಚಾಯತ್‌ ಅಧ್ಯಕ್ಷ ಎಂ.ಡಿ. ರಾಮಚಂದ್ರ, ಉಪಾಧ್ಯಕ್ಷೆ ಸುಭದ್ರಾ ಗಣಪತಿ ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತಾರೆ. ಈಗಾಗಲೇ ಒಂದು ಬಾರಿ ಹಟ್ಟಿ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಉಣಿಸಲಾಗಿದೆ. ಸದ್ಯದಲ್ಲಿಯೇ ಇನ್ನೊಮ್ಮೆ ಕಾಂಪೋಸ್ಟ್‌ ಗೊಬ್ಬರವನ್ನು ನೀಡುತ್ತೇವೆ. ಅಡಕೆ ಬಹುವಾರ್ಷಿಕ ಬೆಳೆಯಾದುದರಿಂದ ಇದರ ಜೊತೆಗೆ ಚೆಂಡು ಹೂವಿನ ರೀತಿಯ ಪುಷ್ಪ ಕೃಷಿಯನ್ನೂ ಮಾಡುತ್ತೇವೆ. ತೋಟದ ಸುತ್ತ ಕ್ಷಿಪ್ರವಾಗಿ ಬೆಳೆಯುವ ಸಿಲ್ವರ್‌ ಓಕ್‌ ಮರಗಳನ್ನು ಬೆಳೆಸಿ ಅದಕ್ಕೆ ಮೆಣಸಿನ ಬಳ್ಳಿ ಹಚ್ಚುವುದಕ್ಕೆ ಮುಂದಾಗಲಿದ್ದೇವೆ. ಇದರಿಂದ ಪಡುವಣ ಬಿಸಿಲಿನಿಂದ ತೋಟವನ್ನು ರಕ್ಷಿಸಲು ಕೂಡ ಸಾಧ್ಯವಾಗುತ್ತದೆ. ಬಾಳೆ ಫಸಲು ಲಭ್ಯವಾಗುವ ಸಂದರ್ಭದಲ್ಲಿ ಟೆಂಡರ್‌ ಮೂಲಕವೇ ಬೆಳೆ ವಿಕ್ರಯಿಸುವ ಪಾರದರ್ಶಕ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಂ.ಡಿ. ರಾಮಚಂದ್ರ ತಿಳಿಸುತ್ತಾರೆ.
ಪಂಚಾಯತ್‌ಗಳೆಲ್ಲ ಬೇರೆ ಬೇರೆ ನಕಾರಾತ್ಮಕ ಕಾರಣಕ್ಕಾಗಿ ಪ್ರಚಾರ ಪಡೆಯುವಾಗ ಪಂಚಾಯತ್‌ ಒಂದು ತನ್ನ ಹಸಿರು ಪ್ರೀತಿಗಾಗಿ ಗಮನ ಸೆಳೆಯುವುದು ಇಂದಿನ ಅಗತ್ಯ. ಈ ರೀತಿಯ ತೋಟ ಮಾಡಿದ್ದನ್ನು ನಾವೆಲ್ಲೂ ನೋಡಿಲ್ಲ. ಪಂಚಾಯತ್‌ ತೋಟದ ಅಡಕೆ ಫಸಲು ಕಂಡು ಈ ವರ್ಷ ಬೆಳೆಗಾರರಿಗಾದಂತೆ ಕೊಳೆ ರೋಗ ಕಾಣಿಸಿದರೆ ಗ್ರಾಪಂನವರೂ ಕೂಡ ಪರಿಹಾರಕ್ಕೆ ಕ್ಯೂ ನಿಲ್ಲಬೇಕಾಗುತ್ತದೆ ಎಂಬ ತಮಾಷೆಯನ್ನು ಕೇಳುತ್ತಿದ್ದೇವೆ. ಆದರೆ
ಪಂಚಾಯತ್‌ಗೆ ಇದರಿಂದ ಗಣನೀಯ ಆದಾಯ ಬಂದರೆ ಜನಸಾಮಾನ್ಯರಿಂದ ಸಂಗ್ರಹಿಸುವ ಮನೆ ಕಂದಾಯದ ಮೊತ್ತವನ್ನು ಕಡಿತಗೊಳಿಸಬಹುದು ಎಂದು ರಾಮಚಂದ್ರ ಕನಸು ವಿಸ್ತರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next