Advertisement

Sagara: ಬಿದನೂರಿನಲ್ಲಿ ಕೆಳದಿ ಅರಸರ ಐತಿಹಾಸಿಕ ಸ್ಮಾರಕಗಳ ಒತ್ತುವರಿ ತೆರವು; ಆಗ್ರಹ

03:21 PM Nov 10, 2023 | Kavyashree |

ಸಾಗರ: ಹೊಸನಗರ ತಾಲೂಕು ನಗರ ಹೋಬಳಿಯ ಬಿದನೂರಿನ ಕೊಪ್ಪಲಮಠದ ಕೆಳದಿ ಅರಸರ ಐತಿಹಾಸಿಕ ಸ್ಮಾರಕಗಳ ಒತ್ತುವರಿ ತೆರವುಗೊಳಿಸಿ ಐತಿಹಾಸಿಕ ಸ್ಥಳವನ್ನು ಸಂರಕ್ಷಣೆ ಮಾಡುವ ಜೊತೆಗೆ ಜೀರ್ಣೋದ್ಧಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನ.10ರ ಶುಕ್ರವಾರ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸಾಗರ ಉಪವಿಭಾಗದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿ, ನಾಡಿಗೆ ಆದರ್ಶಮಯ ಆಡಳಿತ ನೀಡಿದ ಕೆಳದಿ ಅರಸರ ಸಮಾಧಿಗಳು ನಶಿಸುವ ಸ್ಥಿತಿಗೆ ತಲುಪಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಕೊಪ್ಪಲ ಮಠದಲ್ಲಿ ಸಮಾಧಿಗಳನ್ನು ರಚಿಸಿ, ಸ್ಮಾರಕಗಳನ್ನು ನಿರ್ಮಿಸಲಾಗಿತ್ತು. ಸೂಕ್ತ ರಕ್ಷಣೆ ಮತ್ತು ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಅವೆಲ್ಲವೂ ಈಗ ಒತ್ತುವರಿಯಾಗಿದೆ. ಸ್ಮಾರಕಗಳಿಗೆ ಹೋಗಲು ರಸ್ತೆ ವ್ಯವಸ್ಥೆ ಸಹ ಇಲ್ಲವಾಗಿದೆ ಎಂದರು.

ನ. 1ರಂದು ಮಹಾಸಭಾ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ತಕ್ಷಣ ಅಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಬೇಕು. ಐತಿಹಾಸಿಕ ಸ್ಮಾರಕವನ್ನು ಉಳಿಸಿ ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಜಿಲ್ಲಾಧಿಕಾರಿಗಳು ಈ ಸ್ಮಾರಕಗಳ ಅಸ್ತಿತ್ವ ರಕ್ಷಣೆ ಬಗ್ಗೆ ತಕ್ಷಣ ಗಮನ ಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ತೀವ್ರ ಪ್ರತಿಭಟನೆ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿ, ಕೊಪ್ಪಲಕೋಟೆಯಲ್ಲಿ ಎಲ್ಲವನ್ನೂ ಒತ್ತುವರಿ ಮಾಡಿ ಕೆಲವು ಖಾಸಗಿ ವ್ಯಕ್ತಿಗಳು ಅಡಿಕೆ ತೋಟ ನಿರ್ಮಾಣ ಮಾಡಿದ್ದಾರೆ. ಸ್ಮಾರಕಕ್ಕೆ ಹೋಗುವ ದಾರಿಯನ್ನು ಅತಿಕ್ರಮಿಸಲಾಗಿದೆ. ಶಿವಪ್ಪನಾಯಕ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಸಮಾಧಿ ಪೂರ್ಣ ನಶಿಸಿ ಹೋಗುತ್ತಿದೆ. ಇಲ್ಲಿ ಶಿವಲಿಂಗ ಸೇರಿದಂತೆ ಅಮೂಲ್ಯ ವಿಗ್ರಹಗಳನ್ನು ಕದ್ದೊಯ್ಯಲಾಗಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇರುವುದೇ ಇಂತಹ ಅನಾಚಾರ ನಡೆಯಲು ಕಾರಣವಾಗಿದೆ. ಪ್ರಾಚ್ಯವಸ್ತು ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ತಕ್ಷಣ ಗಮನ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶೇಖರಪ್ಪ ಬೇಸೂರು, ಗುರು ಕಾಗೋಡು, ಕವಿತಾ ಜಯಣ್ಣ, ವೀರಭದ್ರಪ್ಪ ಜಂಬಿಗೆ, ಕುಮಾರ, ಕಾಂತೇಶ್, ವಿರೇಶ್ ಶೆಡ್ಡಿಕೊಪ್ಪ, ಸಂಜಯ್, ಕೇಶವ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next