ಸಾಗರ: ತಾಲೂಕಿನ ಮಾನವ ನಿರ್ಮಿತ ತುಮರಿ ಪರ್ಯಾಯ ದ್ವೀಪದ ಕರೂರು ಹೋಬಳಿಯಿಂದ ಕಾರ್ಗಲ್, ಜೋಗಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಹಲ್ಕೆ ಮುಪ್ಪಾನೆ ಲಾಂಚ್ ತಾಂತ್ರಿಕ ದೋಷದಿಂದ ಆ.25 ಶುಕ್ರವಾರ ಸ್ಥಗಿತಗೊಂಡಿದೆ. ಇದರಿಂದ ತುಮರಿ ಭಾಗದ ಜನತೆ ಹಾಗೂ ಸಿಗಂದೂರು ಭಕ್ತರಿಗೆ ಸಾಕಷ್ಟು ಅನಾನುಕೂಲ ಉಂಟಾಗಿದೆ.
ಬೇಸಿಗೆ ಅಂತ್ಯದ ತಿಂಗಳುಗಳಲ್ಲಿ ನೀರಿನ ಕೊರತೆ ಹಿನ್ನೆಲೆ ಈ ಲಾಂಚ್ ಸೇವೆ ಸ್ಥಗಿತಗೊಂಡಿತ್ತು. ಕೆಲದಿನಗಳ ಹಿಂದೆ ಹೊಳೆಬಾಗಿಲು ಲಾಂಚ್ ದುರಸ್ತಿಯ ಹಿನ್ನೆಲೆಯಲ್ಲಿಯೂ ಸಾರ್ವಜನಿಕ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಸಾಕಷ್ಟು ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮುಪ್ಪಾನೆ ಲಾಂಚ್ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬೇಸಿಗೆಯಲ್ಲಿ ಸೇವೆ ಸ್ಥಗಿತಗೊಂಡಾಗ ಲಾಂಚ್‌ನ ತಾಂತ್ರಿಕತೆಯ ಮೇಲ್ವಿಚಾರಣೆ ನಡೆಸಿ ಸಮಗ್ರ ರಿಪೇರಿಗೆ ಬಂದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆಗೆ ಜೋಗ, ಕಾರ್ಗಲ್‌ಗೆ ತೆರಳಲು ಹಾಗೂ ಹೊಳೆಬಾಗಿಲು ಲಾಂಚ್‌ನಲ್ಲಿ ಜನದಟ್ಟಣೆ ಕಾರಣ ಸಿಗಂದೂರಿಗೆ ತೆರಳುವ ಭಕ್ತರು ಸಹ ಪರ್ಯಾಯ ಮಾರ್ಗದ ಕಾರಣ ಮುಪ್ಪಾನೆ ಲಾಂಚ್ ಬಳಸುತ್ತಿದ್ದರು. ಈಗ ಮುಪ್ಪಾನೆ ಲಾಂಚ್ ಸ್ಥಗಿತಗೊಂಡಿರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
ಲಾಂಚ್ ಒಳಭಾಗದಲ್ಲಿ ಗೇರ್ ಬಾಕ್ಸ್, ಇನ್ನಿತರ ತಾಂತ್ರಿಕ ದೋಷದಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ದೋಷದಿಂದ ಕೂಡಿದ ಕೆಲವು ಬಿಡಿ ಭಾಗಗಳನ್ನು ದುರಸ್ತಿಗೆ ಕಳುಹಿಸಲಾಗಿದ್ದು, ನಾಲ್ಕೈದು ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ತಿಳಿಸಿದ್ದಾರೆ.