Advertisement

Sagara: ಕಲ್ಲಮನೆ ಸೊಸೈಟಿ ಅವ್ಯವಹಾರ; ಪಿಗ್ಮಿ, ಠೇವಣಿದಾರರ ಘೇರಾವ್

08:11 PM Aug 26, 2024 | Esha Prasanna |

ಸಾಗರ: ತಾಲೂಕಿನ ಕಲ್ಲಮನೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಮೂರು ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರದ ಕುರಿತು ಆಗಸ್ಟ್ ಅಂತ್ಯದೊಳAಗೆ ಹಣ ಹಿಂತಿರುಗಿಸುವುದಾಗಿ ಅಧ್ಯಕ್ಷರು ನೀಡಿದ್ದ ಭರವಸೆ ಈ ವರೆಗೂ ಈಡೇರದ್ದರಿಂದ ಸೋಮವಾರ ಕಚೇರಿ ಎದುರು ನೂರಾರು ಮಂದಿ ಪಿಗ್ಮಿ ಕಟ್ಟಿದವರು, ಠೇವಣಿದಾರರು, ಷೇರುದಾರರು ಪ್ರತಿಭಟನೆ ನಡೆಸಿದರು. ಅಂತಿಮವಾಗಿ ಸಾಗರ ಉಪವಿಭಾಗದ ಸಹಾಯಕ ಆಯುಕ್ತ ಆರ್. ಯತೀಶ್ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಯಿತು.

Advertisement

ಜುಲೈ ಕೊನೆ ವಾರದಲ್ಲಿ ಕಲ್ಲಮನೆ ಸೊಸೈಟಿಯಲ್ಲಿ ಮೂರು ಕೋಟಿ ರೂ.ಗಳಿಗೂ ಹೆಚ್ಚಿನ ಅವ್ಯವಹಾರ ನಡೆದಿರುವ ಕುರಿತು ಪಿಗ್ಮಿ ಕಟ್ಟುವವರು, ಷೇರುದಾರರು ಕಚೇರಿಗೆ ಧಾವಿಸಿ ತಮ್ಮ ಹಣ ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು. ಆಗ ಅಧ್ಯಕ್ಷ ವೆಂಕಟೇಶ್ ಹೆಗಡೆ, ಆಂತರಿಕ ಲೆಕ್ಕ ಪರಿಶೋಧಕರ ಕರೆಸಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಆಗಸ್ಟ್ ಅಂತ್ಯದೊಳಗೆ ಪಿಗ್ಮಿ ಕಟ್ಟಿದವರ ಅರ್ಧ ಹಣ ಕೊಡುವುದಾಗಿ ಭರವಸೆ ನೀಡಿದ್ದರು.

ಈ ನಡುವೆಯೇ ಕಳೆದೊಂದು ವಾರದಿಂದ ಸೊಸೈಟಿ ಬಾಗಿಲು ತೆರೆಯದಿರುವುದು ಗಮನಿಸಿದ ಷೇರುದಾರರು, ಪಿಗ್ಮಿ ಕಟ್ಟಿದವರು ತುರ್ತು ಪ್ರತಿಭಟನೆ ನಡೆಸಿ, ನಿರ್ದೇಶಕ ಮಂಡಳಿಗೆ ಬಿಸಿ ಮುಟ್ಟಿಸಿದರು. ಸೋಮವಾರ ಬೆಳಗ್ಗೆಯೇ ನೂರಾರು ಮಂದಿ ಸೊಸೈಟಿ ಆವರಣದಲ್ಲಿ ಜಮಾಯಿಸಿ, ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಲ್ಲದೆ, ಎಲ್ಲರೂ ಕೂಡಲೇ ಸ್ಥಳಕ್ಕಾಗಮಿಸಿ ಜನರಿಗೆ ಉತ್ತರ ನೀಡಲು ಪಟ್ಟು ಹಿಡಿದರು.

ಜನಾಕ್ರೋಶಕ್ಕೆ ಮಣಿದ ಅಧ್ಯಕ್ಷ ವೆಂಕಟೇಶ್, ಹಲವು ನಿರ್ದೇಶಕರು ಸ್ಥಳಕ್ಕೆ ಬಂದರೂ ಮೌನವಾಗಿ ನಿಂತಿದ್ದರು. ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಮಹಾಬಲೇಶ್ವರ ನಾಯ್ಕ ನಡೆಸಿದ ಸಂಧಾನವೂ ವಿಫಲವಾಯಿತು. ಸಿಇಒ ಮೇಘರಾಜ್, ಎಲ್ಲ ನಿರ್ದೇಶಕರೂ ಬಂದು ಉತ್ತರ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ, ಅಹೋರಾತ್ರಿ ಧರಣಿ ನಡೆಸುವುದಾಗಿ ಜನರು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದು ಅರಿತ ಎಸಿ ಆರ್. ಯತೀಶ್ ಸೊಸೈಟಿಗೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಬುಧವಾರ ಶಿವಮೊಗ್ಗದಿಂದ ಡಿಸಿಸಿ ಬ್ಯಾಂಕ್‌ನ ಉಪ ನಿಬಂಧಕರ ಕರೆಸಿ ತನಿಖೆ ನಡೆಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

Advertisement

ಸೊಸೈಟಿ ಲೂಟಿಕೋರರ ಅಡ್ಡೆ: 
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಇದು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವ ಹಳ್ಳಿ ಮಾತಿನಂತೆ ಆಗುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರು ಕಲಿತ ಪಾಠವನ್ನು ಕೆಳ ಹಂತಕ್ಕೂ ಕಲಿಸಿದ್ದಾರೆ. ಹೀಗಾಗಿಯೇ ಬಡಜನರ ಜೀವನಾಡಿಯಾಗಬೇಕಿದ್ದ ಸೊಸೈಟಿ ಲೂಟಿಕೋರರ ಅಡ್ಡೆಯಾಗಿದೆ. ಇಲ್ಲಿ ನಿರ್ದೇಶಕರಿಗೂ ಇದೇ ಸ್ಥಿತಿಯಾಗಿದೆ. ಅವರಿಗೇ ಗೊತ್ತಿಲ್ಲದೆ 2 ಲಕ್ಷಕ್ಕೆ ನಾಲ್ಕು ಲಕ್ಷ ಸಾಲ ಪಡೆಯಲಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಸ್ಥಳೀಯ ನಿರ್ದೇಶಕರು ಸ್ಥಳಕ್ಕೆ ಬಂದು ಜನರಿಗೆ ಹಣ ಕೊಡಿಸುವ ಭರವಸೆ ನೀಡಬೇಕು, ಶಾಸಕರು ಇಂತಹದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಲ್ಮನೆ ಪಂಚಾಯ್ತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಮಹಾಬಲೇಶ್ವರ ಗೌಡ, ಸುರೇಶ್ ಗೌಡ, ಕಮಲಮ್ಮ, ಅಮರನಾಥ ಸೇರಿದಂತೆ ಪಿಗ್ಮಿ ಕಟ್ಟಿದ ನೂರಾರು ಬಡವರು, ಠೇವಣಿದಾರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next