ಸಾಗರ: ಅಡಕೆ ಕೊಳೆರೋಗಕ್ಕೆ ಸಂಬಂಧಪಟ್ಟಂತೆ ಪರಿಹಾರಕ್ಕೆ ಒತ್ತಾಯಿಸಿ ಹಕ್ಕೊತ್ತಾಯದ ಬೃಹತ್ ಪ್ರತಿಭಟನೆಯನ್ನು ಸೆ. 29ರಂದು ಬೆಳಿಗ್ಗೆ 10-30ಕ್ಕೆ ಅಡಕೆ ಸುರಿದು ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ಟ ತಿಳಿಸಿದರು.
ಸೋಮವಾರ (ಆಗಸ್ಟ್ 26) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಸಾಗರ, ಹೊಸನಗರ, ಸೊರಬ ವ್ಯಾಪ್ತಿಯಲ್ಲಿ ಶೇ. 60ರಷ್ಟು ಅಡಕೆ ಕೊಳೆರೋಗದಿಂದ ನಾಶವಾಗಿದೆ. ಅನೇಕ ಬಾರಿ ಔಷಧಿ ಸಿಂಪಡಣೆ ಮಾಡಿದರೂ ಕೊಳೆರೋಗ ನಿಯಂತ್ರಣಕ್ಕೆ ಬರುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಶೇ. 100ರಷ್ಟು ಅಡಕೆ ನಾಶವಾಗುವ ಸಾಧ್ಯತೆ ಇಲ್ಲದಿಲ್ಲ. ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳೆಗಾರರು, ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಎರಡು ತಿಂಗಳಿನಿಂದ ಸುರಿಯತ್ತಿರುವ ವಿಪರೀತ ಮಳೆಯಿಂದ ಬೆಳೆಗಾರರು ಮರವನ್ನು ಉಳಿಸಿಕೊಳ್ಳುವುದೇ ಸವಾಲು ಎನ್ನುವ ಸ್ಥಿತಿ ಇದೆ. ಶಾಸಕರು ಈಗಾಗಲೇ ಎಸಿ ಜೊತೆ ಕರೂರು ಭಾರಂಗಿ ಹೋಬಳಿ ತೋಟಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ತೋಟಗಾರಿಕಾ ಸಚಿವರಿಗೆ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಪರಿಹಾರ ನೀಡಲು ಮನವಿ ಸಲ್ಲಿಸಿದ್ದು, ಬೆಳೆಗಾರರ ಸಂಘ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಹಿಂದೆ ಕಾಗೋಡು ತಿಮ್ಮಪ್ಪನವರು ವಿಧಾನಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಅಡಕೆ ಕೊಳೆರೋಗಕ್ಕೆ ಪರಿಹಾರ ಕಲ್ಪಿಸಿದ್ದರು. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳೆಗಾರರಿಗೆ ಸ್ಪಂದಿಸಿದ್ದರು. ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಬೆಳೆಗಾರರಿಗೆ ಪರಿಹಾರ ಸಿಗಬಹುದು ಎನ್ನುವ ಆಶೆಯಲ್ಲಿದ್ದಾರೆ ಎಂದರು.
ಈಗಾಗಲೇ ಕಾಡುಪ್ರಾಣಿಗಳ ಹಾವಳಿಯಿಂದ ಅಡಕೆ ಬೆಳೆ ನಾಶವಾಗುತ್ತಿದ್ದು, ಪರಿಹಾರಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ನೀಡಿದೆ. ತಕ್ಷಣ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಅಡಿಕೆಗೆ ಬಣ್ಣ ಮಿಶ್ರಣ ಮಾಡುತ್ತಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇಂತಹದ್ದನ್ನು ಸಂಘ ಸಹಿಸುವುದಿಲ್ಲ. ಕೆಲವು ಮಧ್ಯವರ್ತಿಗಳು ಬಣ್ಣ ಮಿಶ್ರಣ ಮಾಡಿ ಅಡಕೆ ಮಾನವನ್ನು ಹರಾಜು ಹಾಕುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಅಡಕೆ ಕಳ್ಳತನ ಮತ್ತೆ ಪ್ರಾರಂಭವಾಗಿದ್ದು, ಪೊಲೀಸ್ ಇಲಾಖೆ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ತಾಲೂಕಿನಲ್ಲಿ ಅಪಾರ ಪ್ರಮಾಣದ ಅಡಕೆ ಕೊಳೆರೋಗದಿಂದ ಉದುರಿ ಹೋಗಿದೆ. ಸರ್ಕಾರ ಬೆಳೆಗಾರರ ರಕ್ಷಣೆಗೆ ಬರದೆ ಹೋದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಬೆಳೆಗಾರರು ಎದುರಿಸಬೇಕಾಗುತ್ತದೆ. ಕಾಗೋಡು ತಿಮ್ಮಪ್ಪನವರು ಬೆಳೆಗಾರರಿಗೆ ಹಿಂದೆ ಪರಿಹಾರ ಕೊಡಿಸಿದ್ದರು. ಅದೇ ಮಾದರಿಯಲ್ಲಿ ಗೋಪಾಲಕೃಷ್ಣ ಬೇಳೂರು ಸಹ ಪ್ರಯತ್ನ ನಡೆಸುತ್ತಿದ್ದು, ಬೆಳೆಗಾರರ ಸಂಘದ ಹೋರಾಟ ಅವರಿಗೆ ನೈತಿಕ ಬೆಂಬಲ ನೀಡಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಅಡಕೆ ಬೆಳೆಗಾರರ ಸಂಘದ ರಾಜೇಂದ್ರ ಖಂಡಿಕಾ, ನಾಗಾನಂದ, ಅವಿನಾಶ್, ವೆಂಕಟಗಿರಿ ಕುಗ್ವೆ ಹಾಜರಿದ್ದರು.
ಇದನ್ನೂ ಓದಿ: Mudhol: ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ… ಕಾಂಗ್ರೆಸ್ ತೆಕ್ಕೆಗೆ ಜಾರಿದ ನಗರಸಭೆ