ಸಾಗರ: ಕೊಳೆರೋಗದಿಂದ ಬೆಳೆಹಾನಿಗೊಳಗಾಗಿರುವ ಸಾಗರ, ಸೊರಬ, ಹೊಸನಗರ ತಾಲೂಕಿನ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಆಪ್ಸ್‌ಕೋಸ್, ಮ್ಯಾಮ್ಕೋಸ್, ತೋಟಗಾರ‍್ಸ್ ಮೊದಲಾದ ಸಹಕಾರಿ ಸಂಸ್ಥೆಗಳ ವತಿಯಿಂದ ಶಾಸಕರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಂಸ್ಥೆಯಲ್ಲಿ 50ಸಾವಿರಕ್ಕೂ ಹೆಚ್ಚು ಷೇರುದಾರ ಸದಸ್ಯರಿದ್ದು ಬೆಳೆ ಹಾನಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪರೀತ ಮಳೆಯಿಂದಾಗಿ ಶೇ. 60ಕ್ಕೂ ಹೆಚ್ಚು ಅಡಿಕೆ ಬೆಳೆ ಹಾನಿಯಾಗಿದೆ. ಕೂಡಲೇ ಮುಖ್ಯಮಂತ್ರಿಗಳ ಗಮನ ಸೆಳೆದು ಬೆಳೆಗಾರರಿಗೆ ಕನಿಷ್ಠ 50 ಸಾವಿರ ರೂ. ಪರಿಹಾರ ಧನ ಕೊಡಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ವರ್ಷ ಸುರಿದ ಅತಿವೃಷ್ಟಿಯ ಪರಿಣಾಮವಾಗಿ ಎಲ್ಲ ಅಡಿಕೆ ಬೆಳೆಗಾರರ ತೋಟಗಳಲ್ಲೂ ಕೊಳೆರೋಗ ವ್ಯಾಪಿಸಿದ್ದು ಒಂದು ಎಕರೆಗೆ ಔಷಧ ಸಿಂಪಡಣೆಗೆ ಒಂದು ಬಾರಿಗೆ ಕನಿಷ್ಠ 25 ಸಾವಿರ ರೂ. ಬೇಕಾಗಿದೆ. ಈ ರೀತಿ ಈಗಾಗಲೇ ನಾಲ್ಕು ಬಾರಿ ಔಷಧ ಸಿಂಪಡಿಸಲಾಗಿದೆ. ಆದರೆ ಕೊಳೆ ರೋಗ ನಿಯಂತ್ರಣಕ್ಕೆ ಬರದೆ ಶೇ. 60ಕ್ಕೂ ಹೆಚ್ಚು ಅಡಿಕೆ ನಷ್ಟವಾಗಿದೆ ಎಂದು ವಿವರಿಸಲಾಗಿದೆ.
ಈ ಸಂದರ್ಭದಲ್ಲಿ ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ತೋಟಗಾರ‍್ಸ್ ಅಧ್ಯಕ್ಷ ದೇವಪ್ಪ ಕೆ.ಸಿ., ಟಿಎಪಿಎಂಸಿಎಸ್ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ಆಪ್ಸ್‌ಕೋಸ್ ಉಪಾಧ್ಯಕ್ಷ ಕೆ.ಎಸ್.ಸುಬ್ರಾವ್, ತೋಟಗಾರ‍್ಸ್ ಉಪಾಧ್ಯಕ್ಷ ಹು.ಭಾ.ಅಶೋಕ್, ಮ್ಯಾಮ್ಕೋಸ್ ನಿರ್ದೇಶಕ ದಿನೇಶ್ ಬರದವಳ್ಳಿ, ಆಪ್ಸ್‌ಕೋಸ್ ನಿರ್ದೇಶಕರಾದ ಈಳಿ ಸುರೇಶ್, ರಮೇಶ್ ಎಂ.ಬಿ., ಕುಂದಗೋಡು ಭಾಸ್ಕರ, ಸತ್ಯನಾರಾಯಣ ಕೆಳದಿ, ಎಂ.ಎಸ್.ನಾಗರಾಜ್, ಸಂಪತ್ ಭೀಮನಕೋಣೆ, ಕೃಷ್ಣಮೂರ್ತಿ ಗಡಿಕಟ್ಟೆ, ಶ್ರೀಕಂಠಗೌಡ, ಬಸವರಾಜ್ ಇನ್ನಿತರರು ಹಾಜರಿದ್ದರು.
ಪರಿಹಾರ ಕೊಡಿಸಲು ಪ್ರಯತ್ನ: ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಅಡಿಕೆ ಬೆಳೆಗಾರರಿಗೆ ಪರಿಹಾರ ಕೊಡಿಸಲು ಈಗಾಗಲೇ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಗಣಪತಿ ಹಬ್ಬದ ನಂತರ ಮುಖ್ಯಮಂತ್ರಿಗಳ ಸಮಯವನ್ನು ಪಡೆಯುತ್ತೇನೆ. ಸಾಗರದ ಎಲ್ಲ ಸಹಕಾರಿಗಳು ನಿಯೋಗ ಬಂದು ಸಿಎಂರನ್ನು ಭೇಟಿ ಮಾಡೋಣ. ದೊಡ್ಡ ಪ್ರಮಾಣದಲ್ಲಿ ಕೊಳೆರೋಗದಿಂದ ಅಡಿಕೆ ನಷ್ಟವಾಗಿದ್ದನ್ನು ನಾನೂ ಕೂಡ ಕಣ್ಣಾರೆ ಕಂಡಿದ್ದೇನೆ. ಈ ಬಾರಿಯೂ 2013ರಂತೆಯೇ ವಿಶೇಷ ಪರಿಹಾರ ಕೊಡಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.