ಸಾಗರ: ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಜ್ವರ ಮೊದಲಾದ ಕಾರಣಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 14 ಮಕ್ಕಳು ಭಾನುವಾರ ಇಂಜೆಕ್ಷನ್ ಪಡೆಯುತ್ತಿದ್ದಂತೆ ದಿಢೀರ್ ಅಸ್ವಸ್ಥಗೊಂಡಿದ್ದು, ಅವರಲ್ಲಿ ನಾಲ್ಕು ಮಕ್ಕಳನ್ನು ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ.
ಮಾಹಿತಿ ತಿಳಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಅವರು ಆಸ್ಪತ್ರೆಗೆ ಆಗಮಿಸಿ, ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಆಸ್ಪತ್ರೆ ವೈದ್ಯ ಡಾ. ಪ್ರಕಾಶ್ ಭೋಸ್ಲೆ ಮಾತನಾಡಿ, ಜ್ವರ ಸೇರಿದಂತೆ ಒಳರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಕ್ಕಳಿಗೆ ಆಂಟಿಬಯೋಟಿಕ್ ಇಂಜೆಕ್ಷನ್ ನೀಡಲಾಗುತ್ತಿತ್ತು. ಕೆಲವು ಮಕ್ಕಳಿಗೆ ತೀವ್ರ ಚಳಿ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಪೋಷಕರು ಹೇಳಿದ್ದಾರೆ. ಕಾರಣವನ್ನು ಪರಿಶೀಲಿಸಬೇಕಾಗಿದೆ. ಅಸ್ವಸ್ಥ ಮಕ್ಕಳ ಜೀವಕ್ಕೆ ಅಪಾಯವಿಲ್ಲ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈ ಕುರಿತು ಪತ್ರಿಕೆಯೊಂದಿಗೆ ಶಾಸಕ ಹಾಲಪ್ಪ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಅಸ್ವಸ್ಥಗೊಂಡ ಮಾಹಿತಿ ನೀಡಿದ್ದಾರೆ. ಶಿವಮೊಗ್ಗಕ್ಕೆ ತೆರಳುತ್ತಿರುವ ಮಕ್ಕಳಿಗೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಅಧಿಕಾರಿ ಡಾ.ಶ್ರೀಧರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಜ್ಞ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಇಲ್ಲಿನ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಅಗತ್ಯ ನಿಗಾವಹಿಸಲು ತಿಳಿಸಲಾಗಿದ್ದು, ಮಕ್ಕಳ ವೈದ್ಯರ ಜತೆಗೆ ಉಳಿದ ಎಲ್ಲಾ ವೈದ್ಯರಿಗೂ ಕರ್ತವ್ಯಕ್ಕೆ ಬರಲು ತಿಳಿಸಿದ್ದೇನೆ ಎಂದರು.